ಗಂಗಾವತಿ: ತಾಲ್ಲೂಕಿನ ಮಲ್ಲಾಪುರ, ಸಂಗಾಪುರ, ಆನೆಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಸ್ಥಳಕ್ಕೆ ಅರಣ್ಯ, ಕಂದಾಯ, ಪೋಲಿಸ್ ಸೇರಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದರು.
ನಂತರ ಕಲ್ಲು ಗಣಿಗಾರಿಕೆ ನಡೆಸುವವರ ಬಳಿ ಇರುವ ಸುತ್ತಿಗೆ, ಉಳಿ, ಹಾರಿಕೋಲು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಂಡು, ಅಕ್ರಮವಾಗಿ ಹೊಡೆದಿರುವ ಕಂಬಗಳನ್ನು ನಾಶ ಮಾಡಿದರು.
ಕಂದಾಯ ಇಲಾಖೆಯ ನಿರೀಕ್ಷಕ ಮಂಜುನಾಥ ಹಿರೇಮಠ ಮಾತನಾಡಿ, ಸಂಗಾಪುರ, ಮಲ್ಲಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಆಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಬಾರಿ ತಹಶೀಲ್ದಾರರ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ, ಕಲ್ಲು ಕಂಬಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಲಾಗಿದೆ.
ಆದರೂ ಗೌಪ್ಯವಾಗಿ ರಾತ್ರೋರಾತ್ರಿ ದ್ರಾಕ್ಷಿ ತೋಟಗಳಿಗೆ ಕಲ್ಲುಕಂಬಗಳನ್ನು ಸಾಗಿಸುವ ಕೆಲಸ ನಡೆಯುತ್ತಿರುವ ಕುರಿತು ದೂರೂ ಬಂದಿತ್ತು. ಈ ದೂರಿನನ್ವಯ ಪೋಲಿಸ್, ಅರಣ್ಯ, ಕಂದಾಯ ಅಧಿಕಾರಿಗಳ ಜಂಟಿ ಕಾರ್ಯಚರಣೆ ನಡೆಸಿ, ಮಂಗಳವಾರ ದಾಳಿ ಮಾಡಲಾಗಿದೆ ಎಂದರು.
ಈ ಭಾಗದಲ್ಲಿ ಹೆಚ್ಚಾಗಿ ದ್ರಾಕ್ಷಿ ತೋಟಗಳಿಗೆ ಬೇಕಾಗುವ ಕಲ್ಲು ಕಂಬಗಳನ್ನು ಹೊಡೆದು ಬಾಗಲಕೋಟೆ, ರಾಯಚೂರು, ವಿಜಯಪುರ, ರಾಯಚೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ರವಾನಿಸುವ ಬಗ್ಗೆ ಮಾಹಿತಿ ಒದಗಿ ಬಂದಿದೆ ಎಂದರು.
ಈ ವೇಳೆಯಲ್ಲಿ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ಶಾರದಮ್ಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಹೇಶ್, ಎಎಫ್ಓ ಮಾರುತಿ, ಧನಂಜಯ ಇದ್ದರು.
ಗಸ್ತು ತಿರುಗಲು ಸೂಚನೆ: ‘ಗಂಗಾವತಿ ತಾಲ್ಲೂಕಿನಲ್ಲಿ ಅಕ್ರಮ ಮರಳು, ಕಲ್ಲು ಗಣಿಗಾರಿಕೆ ತಡೆಗಟ್ಟಲು ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಿ, ಪ್ರತಿ ಶುಕ್ರವಾರ ಗಸ್ತು ತಿರುಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ‘ ಎಂದು ಉಪ ವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹೇಳಿದ್ದಾರೆ.
ಈಗಾಗಲೇ ಸಾರ್ವಜನಿಕರಿಂದ ಆಕ್ರಮ ಮರಳು, ಕಲ್ಲು ಗಣಿಗಾರಿಕೆ ಸೇರಿದಂತೆ ಇತರೆ ಆಕ್ರಮಗಳ ಕುರಿತು ದೂರುಗಳು ಸಲ್ಲಿಸಿದ್ದು, ತಾಲ್ಲೂಕಿನಲ್ಲಿ ಮರಳಿ ಬ್ಲಾಕ್ ಗಳನ್ನು ಗುರುತಿಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಈ ಸಭೆ ನಡೆಸಲಾಗಿದೆ.
ಅಕ್ರಮವಾಗಿ ಕಲ್ಲು ಸಾಗಣೆ ನಡೆಯುವ ಕುರಿತು ಮಾಹಿತಿ ಬಂದಿದ್ದು, ಸಾಗಣೆ ಕಂಡು ಬಂದಲ್ಲಿ ವಶಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜಿಲ್ಲಾಡಳಿತ ಅಧಿಕೃತವಾಗಿ ಕೈಯಿಂದ ಕಲ್ಲು ಹೊಡೆವವರಿಗೆ ಸಂಗಾಪುರ ಗ್ರಾಮದ ಸರ್ವೆ 16ರಲ್ಲಿ 10 ಎಕರೆ ಪಾಯಿಂಟನ್ನು ಗುರಿತಿಸಲಾಗುತ್ತದೆ. ಅಲ್ಲಿಯವರಿಗೆ ಕಲ್ಲು ಹೊಡೆಯುವವರು ಯಾವುದೇ ಕಾರಣಕ್ಕೂ ಕಲ್ಲು ಕ್ವಾರಿಗಳಿಗೆ ಹೋಗಲು ನಿಷೇಧಿಸಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.