ಕುಷ್ಟಗಿ: ತಾಲ್ಲೂಕಿನ ತಾವರಗೇರಾದಲ್ಲಿ ಪಟ್ಟಣ ಪಂಚಾಯಿತಿ ಆದಾಯದ ಮೂಲ ಕ್ರೋಢೀಕರಿಸಿಕೊಳ್ಳಲು ವ್ಯಾಪಾರಿ ಮಳಿಗೆ ನಿರ್ಮಿಸಿದೆ. ಆದರೆ ನಾಲ್ಕು ವರ್ಷಗಳಾದರೂ ಬೀಗ ತೆರೆದಿಲ್ಲ. ಅಷ್ಟೇ ಅಲ್ಲ ಎರಡ್ಮೂರು ಮಳಿಗೆಗಳನ್ನು ಕೆಲ ವ್ಯಕ್ತಿಗಳು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಮುದೇನೂರು ರಸ್ತೆಯಲ್ಲಿ 12 ಮಳಿಗೆಗಳನ್ನು ನಿರ್ಮಿಸಲಾಗಿದೆ. ಮಳಿಗೆಗಳು ಉದ್ಘಾಟನೆಯಾಗಿಲ್ಲ. ವ್ಯಾಪಾರಸ್ಥರಿಗೆ ಬಾಡಿಗೆಗೂ ನೀಡಿಲ್ಲ. ಇದರಿಂದ ಸರ್ಕಾರದ ಲಕ್ಷಾಂತರ ಹಣ ವ್ಯರ್ಥವಾಗಿದೆ. ಆದರೆ ಕೆಲ ಮಳಿಗೆಗಳಲ್ಲಿ ಇಸ್ಪೀಟ್ ಜೂಜಾಟ ಮತ್ತಿತರ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ. ಇನ್ನೂ ಒಂದು ಮಳಿಗೆಯಲ್ಲಿ ವ್ಯಕ್ತಿಯೊಬ್ಬ ಹಾಲಿನ ವ್ಯಾಪಾರ ನಡೆಸುತ್ತಿದ್ದಾರೆ. ಮಳಿಗೆಗಳು ಅಕ್ರಮವಾಗಿ ಬಳಕೆಯಾಗುತ್ತಿರುವುದು ಗೊತ್ತಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂಬ ದೂರು ಕೇಳಿಬಂದಿದೆ.
ರೈತ ಸಂಘ: ಈ ಮಧ್ಯೆ ಸೋಮವಾರ ಈ ಮಳಿಗೆಯೊಂದರಲ್ಲಿ ನಂಜುಂಡಸ್ವಾಮಿ ಬಣದ ಕರ್ನಾಟಕ ರೈತ ಸಂಘ ಹಸಿರು ಸೇನೆ ಸಂಘಟನೆಯ ಕಚೇರಿಯನ್ನೂ ಉದ್ಘಾಟಿಸಿರುವುದು ಅಚ್ಚರಿ ಮೂಡಿಸಿದೆ. ಈ ವಿಷಯ ತಿಳಿದ ನಂತರ ಪೊಲೀಸರಿಗೆ ಮಾಹಿತಿ ನೀಡಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಗತ್ಯ ಕ್ರಮಕ್ಕೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ನಂತರ ಸ್ಥಳಕ್ಕೆ ತೆರಳಿದ್ದ ಪೊಲೀಸರು ಮಂಗಳವಾರ ವಿಚಾರಣೆಗೆ ಪೊಲೀಸ್ ಠಾಣೆಗೆ ಬರುವಂತೆ ರೈತ ಸಂಘಟನೆಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಮರೇಶ, ಮಳಿಗೆಗಳು ಅನೇಕ ವರ್ಷಗಳಿಂದಲೂ ಖಾಲಿ ಬಿದ್ದಿವೆ, ಯಾರೋ ಅನಧಿಕೃತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೂ ಸುಮ್ಮನಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈಗ ರೈತ ಸಂಘಟನೆ ಕಚೇರಿ ತೆರೆದಿರುವುದು ಮಾತ್ರ ತಪ್ಪಾಗಿ ಕಾಣುತ್ತಿದೆ. ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಿರುವುದು ಅಚ್ಚರಿ ಮೂಡಿಸಿದೆ. ಇಲ್ಲಿ ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಲು ಉದ್ದೇಶಿಸಲಾಗಿದೆ ಹೊರತು ಯಾವುದೇ ಅಕ್ರಮ ಚಟುವಟಿಕೆಗೆ ಮಳಿಗೆಯನ್ನು ಬಳಸಿಕೊಳ್ಳುತ್ತಿಲ್ಲ. ಆದರೂ ಮಂಗಳವಾರ ಪೊಲೀಸರಿಗೆ ವಸ್ತುಸ್ಥಿತಿ ವಿವರಿಸುವುದಾಗಿ’ ತಿಳಿಸಿದರು.
ಮಳಿಗೆಯಲ್ಲಿ ಇಸ್ಪೀಟ್ ಜೂಜಾಟ ನಡೆದಿರುವುದು ಗಮನಕ್ಕೆ ಬಂದಿಲ್ಲ ನಾಲ್ಕುಬಾರಿ ಟೆಂಡರ್ ಕರೆದರೂ ಮಳಿಗೆ ಪಡೆಯಲು ವ್ಯಾಪಾರಿಗಳು ಮುಂದೆ ಬಂದಿಲ್ಲ. ಆದರೂ ಅಕ್ರಮವಾಗಿ ಯಾರೇ ಇದ್ದರೂ ಪೊಲೀಸ್ ನೆರವಿನೊಂದಿಗೆ ತೆರವುಗೊಳಿಸುತ್ತೇವೆನಬಿಸಾಬ್ ಖುದಾನವರ್ ಪ.ಪಂ. ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.