ಕೊಪ್ಪಳ: ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನದ ಮುಖ್ಯದ್ವಾರದಿಂದ ಬಂದರೆ ನಿಮಗೆ ಜಿಲ್ಲೆಯ ‘ಪ್ರವಾಸಿ ಲೋಕ’ ಅನಾವರಣಗೊಳ್ಳುತ್ತದೆ. ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿಗೆ ಗುಚ್ಛ ಒಂದೇ ಭವನದಲ್ಲಿ ಲಭ್ಯವಾಗುತ್ತಿದ್ದು, ಇದಕ್ಕೆ ಮತ್ತಷ್ಟು ಮಾಹಿತಿಯ ಸ್ಪರ್ಶ ಬೇಕಾಗಿದೆ.
ಜಿಲ್ಲಾಡಳಿತ ಭವನಕ್ಕೆ ಬಂದಾಕ್ಷಣ ಎಲ್ಲರನ್ನೂ ಕರಕುಶಲ ಕಲೆಗಳ ತವರು ಕಿನ್ನಾಳ ಕಲೆ ಸ್ವಾಗತಿಸುತ್ತದೆ. ಕಿನ್ನಾಳ ಕಲಾಕೃತಿಗಳ ವಿಧಾನ, ವಿಶೇಷತೆಗಳ ಕಿರು ಮಾಹಿತಿಯನ್ನು ಫೋಟೊದೊಂದಿಗೆ ಬರೆಯಲಾಗಿದೆ.
ಉಳಿದಂತೆ ಜಿಲ್ಲೆಯ ಹೆಸರಾಂತ ಐತಿಹಾಸಿಕ, ಪೌರಾಣಿಕ ಮತ್ತು ಧಾರ್ಮಿಕ ಸ್ಥಳಗಳಾಗಿರುವ ಗವಿಸಿದ್ಧೇಶ್ವರ ಮಠ, ಗಂಗಾವತಿ ತಾಲ್ಲೂಕಿನ ಆನೆಗೊಂದಿ ಕೋಟೆ, ಕಿನ್ನಾಳ, ಸಾಣಾಪುರ ಕೆರೆ, ನವ ವೃಂದಾವನ, ಬಹದ್ದೂರ್ ಬಂಡೆ ಕೋಟೆ, ಕುಕನೂರು ತಾಲ್ಲೂಕಿನ ಇಟಗಿ ಮಹಾದೇವ ದೇವಾಲಯ, ಹುಲಿಗಿ, ಚಿಕ್ಕಬೆಣಕಲ್‌ನ ಮೋರೆರಮನೆಗಳು, ಕನಕಗಿರಿ ವೆಂಕಟಪ್ಪಬಾವಿ, ಕನಕಾಚಲಪತಿ ದೇವಸ್ಥಾನ, ವಿದೇಶಗಳಲ್ಲಿಯೂ ಖ್ಯಾತಿ ಗಳಿಸಿರುವ ಅಂಜನಾದ್ರಿ, ಪಂಪಾವನ, ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಸಮೀಪದಲ್ಲಿರುವ ಜಿಲ್ಲೆಯ ಏಕೈಕ ಜಲಪಾತ ಕಪಿಲತೀರ್ಥ, ಆನೆಗೊಂದಿಯಲ್ಲಿರುವ ಹುಚ್ಚಪ್ಪಯ್ಯನ ಮಠ, ಜಿಲ್ಲೆಯ ಜನರಿಗೆ ಜೀವನಾಡಿ ಎನಿಸಿರುವ ತುಂಗಭದ್ರಾ ಜಲಾಶಯ, ಮಳೆಮಲ್ಲೇಶ್ವರ ಬೆಟ್ಟ (ಇಂದ್ರಕೀಲ ಪರ್ವತ), ಕುಕನೂರಿನ ನವಲಿಂಗೇಶ್ವರ ದೇವಾಲಯ, ಮಹಾಮಾಯ ದೇವಸ್ಥಾನ, ಕೋಟಿ ಲಿಂಗಗಳ ತಾಣವಾದ ತಾವರಗೇರಾ ಸಮೀಪದ ಪುರ ಹೀಗೆ ಅನೇಕ ಸ್ಥಳಗಳ ಚಿತ್ರಗಳನ್ನು ಕಾಣಬಹುದು.
ಅನೇಕ ಸರ್ಕಾರಿ ಕೆಲಸ ಹಾಗೂ ಒಂದಿಲ್ಲೊಂದು ಕಾರಣದಿಂದಾಗಿ ಜಿಲ್ಲೆಯ ಜನ ಜಿಲ್ಲಾಡಳಿತ ಭವನಕ್ಕೆ ಬರುವುದು ಸಾಮಾನ್ಯ. ಪ್ರತಿದಿನವೂ ಜಿಲ್ಲೆಯ ಎಲ್ಲ ಭಾಗದಿಂದಲೂ ಜನ ಇಲ್ಲಿಗೆ ಬರುತ್ತಾರೆ. ಅವರಿಗೆ ಅಂಗೈಯಲ್ಲಿಯೇ ಜಿಲ್ಲೆಯ ಪ್ರವಾಸಿ ತಾಣಗಳ ಛಾಯಾಚಿತ್ರ ಪ್ರವಾಸಿಲೋಕ ಸಿಗುತ್ತದೆ. ಹೊರಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಅನೇಕ ಜನ ಅಧಿಕಾರಿಗಳು, ಅಧ್ಯಯನ ಪ್ರವಾಸಕ್ಕೆಂದು ಬರುವವರೂ ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡುವುದು ಸಾಮಾನ್ಯ. ಅವರಿಗೆ ಈ ಚಿತ್ರ ಲೋಕ ಗಮನ ಸೆಳೆಯುವಂತಿದೆ.
ನೆಲಮಹಡಿಯಲ್ಲಿ ಒಂದು ಭಾಗ, ಮೊದಲ ಮಹಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಕಡೆ ಹೋಗುವ ಭಾಗದಲ್ಲಿ ಮಾತ್ರ ಛಾಯಾಚಿತ್ರಗಳನ್ನು ಅಳವಡಿಸಲಾಗಿದೆ. ಮಕ್ಕಳು ಇಲ್ಲಿಗೆ ಬಂದಾಗ ಆ ಚಿತ್ರಗಳ ಮುಂದೆ ನಿಂತುಕೊಂಡು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ.
ಜಿಲ್ಲೆಯ ಪ್ರವಾಸಿ ಲೋಕವನ್ನು ಪರಿಚಯಿಸುವ ದೃಷ್ಟಿಯಿಂದ ಛಾಯಾಚಿತ್ರಗಳು ಸಾಕಷ್ಟು ಅನುಕೂಲ ಒದಗಿಸುತ್ತವೆ. ಆದರೆ, ಅವುಗಳ ಕೆಳಗೆ ಮಾಹಿತಿ ಕೊರತೆ ಕಾಡುತ್ತದೆ. ನೆರೆ ಜಿಲ್ಲೆ ವಿಜಯನಗರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಬರುತ್ತಾರೆ. ಅದರಂತೆ ಜಿಲ್ಲೆಗೂ ಆಗಾಗ್ಗೆ ವಿದೇಶಿಗರು ಸಾಣಾಪುರ, ಆನೆಗೊಂದಿ ಭಾಗದಲ್ಲಿ ಪ್ರವಾಸ ಮಾಡುತ್ತಾರೆ. ಅಂಜನಾದ್ರಿ, ಪಂಪಾ ಸರೋವರಕ್ಕೆ ಉತ್ತರ ಭಾರತದ ರಾಜ್ಯಗಳಿಂದ ಬರುವ ಭಕ್ತರ ಸಂಖ್ಯೆ ಹೆಚ್ಚು. ಅಂಥ ಪ್ರವಾಸಿಗರಿಗೆ ಸುಂದರ ಛಾಯಾಚಿತ್ರಗಳ ಸಮೇತ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರದ ಕೆಳಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ವೇಗ ಸಿಕ್ಕಂತಾಗುತ್ತಿದೆ.
ಜಿಲ್ಲಾಡಳಿತ ಕೊಪ್ಪಳ ಬ್ರ್ಯಾಂಡ್ ಹೆಸರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗಿದೆ. ಐತಿಹಾಸಿಕ ಸ್ಥಳಗಳಲ್ಲಿ ಚಾರಣ ನಡೆಸುವ ಮೂಲಕ ಪ್ರವಾಸೋದ್ಯಮ ದಿನಗಳನ್ನು ವಿಭಿನ್ನವಾಗಿ ನಡೆಸುತ್ತಿದೆ. ಆದ್ದರಿಂದ ಛಾಯಾಚಿತ್ರಗಳನ್ನು ಜಿಲ್ಲಾಡಳಿತ ಭವನದಲ್ಲಿ ಮಾತ್ರವಲ್ಲದೆ ಗಂಗಾವತಿ ಭಾಗದಲ್ಲಿಯೂ ಅಳವಡಿಸಿ ಅವುಗಳ ಕೆಳಗೆ ಮೂರೂ ಭಾಷೆಗಳಲ್ಲಿ ಮಾಹಿತಿ ಹಂಚಿಕೊಂಡರೆ ಪ್ರವಾಸಿಗರಿಗೆ ಅಂಗೈಯಲ್ಲಿಯೇ ಜಿಲ್ಲೆಯ ಪ್ರವಾಸಿ ಲೋಕ ಸಿಕ್ಕಂತಾಗುತ್ತದೆ.
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಳವಡಿಸಿರುವ ಛಾಯಾಚಿತ್ರಗಳು ಗಮನ ಸೆಳೆಯುವಂತಿದ್ದು ಅವುಗಳ ಸಂಕ್ಷಿಪ್ತ ಮಾಹಿತಿ ಇದ್ದರೆ ಅನುಕೂಲ. ಬೇರೆ ಬೇರೆ ಭಾಷೆಗಳಲ್ಲಿದ್ದರೆ ಹೆಚ್ಚು ಜನರಿಗೆ ಪ್ರಯೋಜನವಾಗುತ್ತದೆಪವನ್ ಶೆಟ್ಟಿ ಯುವಕ ಗಂಗಾವತಿ
ಕೊಪ್ಪಳದಷ್ಟೇ ಗಂಗಾವತಿಯ ಆನೆಗೊಂದಿ ಭಾಗದಲ್ಲಿ ಸ್ವದೇಶಿ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಲ್ಲಿ ಬಹುಭಾಷೆಯಲ್ಲಿ ಮಾಹಿತಿ ಫಲಕ ಅಳವಡಿಸಬೇಕುರಶ್ಮಿ ಜೆ. ಗಂಗಾವತಿ
ಜಿಲ್ಲಾಡಳಿತ ಭವನದಲ್ಲಿ ಕೆಲವು ಕಡೆ ಮಾತ್ರ ಪ್ರವಾಸಿ ತಾಣಗಳ ಛಾಯಾಚಿತ್ರಗಳನ್ನು ಹಾಕಲಾಗಿದೆ. ಆ ಕಟ್ಟಡದ ಎಲ್ಲ ಕಡೆ ಅಳವಡಿಸಿದರೆ ಆಕರ್ಷಕವಾಗಿ ಕಾಣುತ್ತದೆಕಲ್ಲಪ್ಪ ಅಂಗಡಿ ಚಿಕ್ಕಮ್ಯಾಗೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.