ADVERTISEMENT

ಯಲಬುರ್ಗಾ | ಮೂಲಸೌಕರ್ಯಕ್ಕೆ ಬೇಕು ಮತ್ತಷ್ಟು ಆದ್ಯತೆ

ವೇಗವಾಗಿ ಅಭಿವೃದ್ಧಿ ಹೊಂದಿರುವ ಯಲಬುರ್ಗಾ ಪ‍ಟ್ಟಣ, ಬಯಲು ಬಹಿರ್ದೆಸೆಗೆ ಬೀಳಬೇಕಿದೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 6:39 IST
Last Updated 24 ನವೆಂಬರ್ 2024, 6:39 IST
ಯಲಬುರ್ಗಾ ಪಟ್ಟಣ ಪಂಚಾಯಿತಿ ಬಸವಲಿಂಗೇಶ್ವರ ಆಶ್ರಯ ಕಾಲೊನಿಯಲ್ಲಿ ಅಂಗನವಾಡಿ ಕೇಂದ್ರದ ಮುಂದೆ ಇರುವ ಚರಂಡಿ
ಯಲಬುರ್ಗಾ ಪಟ್ಟಣ ಪಂಚಾಯಿತಿ ಬಸವಲಿಂಗೇಶ್ವರ ಆಶ್ರಯ ಕಾಲೊನಿಯಲ್ಲಿ ಅಂಗನವಾಡಿ ಕೇಂದ್ರದ ಮುಂದೆ ಇರುವ ಚರಂಡಿ    

ಯಲಬುರ್ಗಾ: ಪಟ್ಟಣದ ನಾಲ್ಕೂ ದಿಕ್ಕುಗಳಲ್ಲಿ ಹೊಸ ಬಡಾವಣೆಗಳು ಹುಟ್ಟಿಕೊಳ್ಳುತ್ತಿವೆ, ವಾರ್ಡ್‍ಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ ಅಭಿವೃದ್ಧಿಯ ಪಥ ನಿಧಾನಗತಿಯಲ್ಲಿ ಸಾಗುತ್ತಿದೆ. ಸಮಗ್ರ ಅಭಿವೃದ್ಧಿಗೆ ಹಲವು ಬೃಹತ್ ಯೋಜನೆಗಳು ಜಾರಿಗೊಳ್ಳುತ್ತಿದ್ದು, ಮುಖ್ಯವಾಗಿ ಶಾಶ್ವತ ಕುಡಿಯುವ ನೀರು, ಒಳಚರಂಡಿ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಾದರಿ ಪಟ್ಟಣವನ್ನಾಗಿ ಮಾಡಬೇಕಾಗಿದೆ.

ಪಟ್ಟಣದ 15 ವಾರ್ಡ್‍ಗಳ ಪೈಕಿ ಕೆಲವೊಂದು ಹೊರತುಪಡಿಸಿದರೆ ಉಳಿದಂತೆ ಉತ್ತಮ ಸಂಚಾರ ರಸ್ತೆ, ಸಮರ್ಪಕ ಚರಂಡಿ ವ್ಯವಸ್ಥೆ, ಹಾಗೂ ವಿದ್ಯುತ್ ದೀಪಗಳ ಅವಶ್ಯಕತೆ ಎದ್ದುಕಾಣುತ್ತಿದೆ. ಬಹುದಿನಗಳ ನಂತರ ಹೊಸದಾಗಿ ಆಯ್ಕೆಗೊಂಡ ಪದಾಧಿಕಾರಿಗಳು ಕೂಡ ತಮ್ಮ ತಮ್ಮ ವಾರ್ಡ್‍ಗಳ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಊರಿನ ಹಳೆಯ ಪ್ರದೇಶದಲ್ಲಿ ಅಭಿವೃದ್ಧಿಗೆ ವಿಶೇಷ ಅನುದಾನ ಲಭ್ಯವಿಲ್ಲದೇ ಇರುವ ಕಾರಣ ಅಭಿವೃದ್ಧಿ ಮರೀಚಿಕೆಯಾದಂತಿದೆ. ಹಳೆ ಊರಿನ ಕೆಲ ಓಣಿಯಲ್ಲಿ ರಸ್ತೆಗೆ ಹೊಂದಿಕೊಂಡು ಕಟ್ಟಡಗಳ ನಿರ್ಮಾಣಗೊಂಡಿದ್ದರಿಂದ ರಸ್ತೆ ವಿಸ್ತಾರಕ್ಕಾಗಲಿ, ಚರಂಡಿ ನಿರ್ಮಾಣಕ್ಕೆ ಅವಕಾಶಗಳಿಲ್ಲದೇ ಇರುವ ಕಾರಣ ಅಭಿವೃದ್ಧಿ ಕಾರ್ಯಕೈಗೊಳ್ಳುವ ಕಷ್ಟವಾಗುತ್ತಿದೆ ಎಂಬುದು ಅಧಿಕಾರಿಗಳ ಮಾತು.

ಪಂಚಾಯಿತಿಯಲ್ಲಿ ಪಾರದರ್ಶಕತೆಯ ಕೊರತೆಯಿಂದ ಸಾರ್ವಜನಿಕರ ಕೆಲಸ ಸುಗಮವಾಗಿ ಆಗುತ್ತಿಲ್ಲ, ವಿವಿಧ ವಾರ್ಡ್‍ಗಳಲ್ಲಿ ನಗರೋತ್ಥಾನ ಯೋಜನೆಯು ಜಾರಿಗೊಂಡಿದ್ದರೂ ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ. ಸಾರ್ವಜನಿಕ ಶೌಚಾಲಯಗಳು ನಿರ್ವಹಣೆಯ ಕೊರತೆಯಿಂದ ಸಂಪೂರ್ಣ ಅವನತಿ ಕಂಡಿವೆ. ಬಸಲಿಂಗೇಶ್ವರ ಕಾಲೊನಿ, ಸಿದ್ಧರಾಮೇಶ್ವರ ಕಾಲೊನಿ, ಭ್ರಮರಾಂಭ ಕಾಲೊನಿ, ಮೀನಾಕ್ಷಿ ನಗರ ಒಳಗೊಂಡಂತೆ ಅನೇಕ ವಾರ್ಡ್‍ಗಳಲ್ಲಿ ಇಂದಿಗೂ ಬಯಲು ಬಹಿರ್ದೆಸೆಗೆ ಹೋಗುತ್ತಿರುವುದು ಸಾಮಾನ್ಯವಾಗಿದೆ.

ADVERTISEMENT

ಕ್ಷೇತ್ರದ ಶಾಸಕರೂ ಆದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ವೈಯಕ್ತಿಕ ವರ್ಚಸ್ಸು ಬಳಸಿಕೊಂಡು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದಾರೆ. ದೂರದೃಷ್ಟಿ ಇಟ್ಟುಕೊಂಡೇ ಒಂದಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಪಟ್ಟಣದ ಜನತೆಗೆ ದಿನದ 24 ಗಂಟೆ ನೀರು ಲಭ್ಯವಾಗುವಂತೆ ಅಮೃತ 2.0 ಎಂಬ ಹೆಸರಿನ ಶಾಶ್ವತ ಕುಡಿವ ನೀರಿನ ಯೋಜನೆಯನ್ನು ಅನುಷ್ಠಾನಗೊಳ್ಳುತ್ತಿದೆ. ₹118 ಕೋಟಿ ವೆಚ್ಚದ ಒಳಚರಂಡಿ ಯೋಜನೆಯ ಜಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಹಾಗೆಯೇ ಪಟ್ಟಣದ ಹೃದಯಭಾಗದಲ್ಲಿ ₹1.50 ಕೋಟಿ ವೆಚ್ಚದಲ್ಲಿ ಪಟ್ಟಣ ಪಂಚಾಯಿತಿಯ ಹೊಸ ಕಟ್ಟಡ ತಲೆ ಎತ್ತಲಿದೆ.

ಪಟ್ಟಣದ ಹೊರವಲಯದಲ್ಲಿರುವ ಮಾರನಾಳ ರಸ್ತೆಯ ಆಶ್ರಯ ಕಾಲೊನಿಯಲ್ಲಿ ನಿವೇಶನಗಳ ಅಭಿವೃದ್ಧಿಯನ್ನು ಕೊಳಗೇರಿ ಮಂಡಳಿಯಿಂದ ಮಾಡಲಾಗುತ್ತಿದೆ. ಪಟ್ಟಣದ ಬಸ್‍ನಿಲ್ದಾಣದಿಂದ ಪ್ರಮುಖ ರಸ್ತೆಯನ್ನು ಅಗಲೀಕರಣಗೊಳಿಸಿ ಪಟ್ಟಣದ ಚಿತ್ರಣವನ್ನೆ ಬದಲಿಸುವ ಉದ್ದೇಶವಿದೆ. ಅದಕ್ಕಾಗಿಯೇ ಶಾಸಕರ ನೀಲನಕ್ಷೆ ಸಿದ್ಧವೂ ಆಗುತ್ತಿದೆ.

‘ಯಲಬುರ್ಗಾವನ್ನು ಸುಂದರ ಪಟ್ಟಣವನ್ನಾಗಿ ಮಾಡುವ ಸದಾವಕಾಶ ದೊರೆತಿದೆ. ಸದಸ್ಯರ ಬೆಂಬಲದೊಂದಿಗೆ ಒಳ್ಳೆಯ ಆಡಳಿತ ನೀಡಲು ಪ್ರಯತ್ನಿಸಲಾಗುವುದು. ಮುಧೋಳ, ಬೇವೂರು, ಕುದ್ರಿಕೊಟಗಿ, ಮಲ್ಕಸಮುದ್ರ ರಸ್ತೆಗೆ ಹೊಂದಿಕೊಂಡಿರುವ ಕೆಲ ನಿವೇಶನಗಳನ್ನು ಅಭಿವೃದ್ಧಿಪಡಿಸದೇ ಇದ್ದರೂ ಖರೀದಿದಾರರಿಗೆ ಈ ಹಿಂದಿನ ಅವಧಿಯಲ್ಲಿ ಫಾರ್ಮ್‌ ನಂ-3 ವಿತರಣೆಯಾಗಿವೆ. ಅಪೂರ್ಣಗೊಂಡ ನಿವೇಶನಗಳ ಖರೀದಿದಾರರಿಗೆ ಫಾರ್ಮ್ ನಂ-3 ವಿತರಿಸದಂತೆ ಈಗಿನ ಅಧಿಕಾರಿಗೆ ಸೂಚಿಸಲಾಗಿದೆ’ ಎಂದು ಅಧ್ಯಕ್ಷ ಅಂದಾನಯ್ಯ ಕಳ್ಳಿಮಠ ತಿಳಿಸಿದ್ದಾರೆ. 

ಬೇವೂರು ರಸ್ತೆಯಲ್ಲಿರುವ ನಿರುಪಯುಕ್ತ ಸಾರ್ವಜನಿಕ ಶೌಚಾಲಯ
ಎಸ್.ಕೆ.ದಾನಕೈ
ಮಹಾಂತೇಶ ಬೂದಗುಂಪಿ
ಅಂದಾನಯ್ಯ ಕಳ್ಳಿಮಠ
ನಾಗೇಶ

ಏಳು ಮತ್ತು ಎಂಟನೇ ವಾರ್ಡಿನ ದ್ಯಾಮಮ್ಮನ ಗುಡಿಯಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ಉತ್ತಮ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಿಸುವುದು ಅಗತ್ಯವಿದೆ. ರಸ್ತೆ ವಿಸ್ತರಣೆಯಾಗಬೇಕಿದೆ.

-ಎಸ್.ಕೆ. ದಾನಕೈ ಜನಪರ ಹೋರಾಟಗಾರ ಯಲಬುರ್ಗಾ

ಮುಧೋಳ ರಸ್ತೆಗೆ ಹೊಂದಿಕೊಂಡಿರುವ ಬಾಬುಜಗಜೀವನರಾಂ ನಗರದ ವಿವಿಧ ಓಣಿಯಲ್ಲಿ ಚರಂಡಿ ನಿರ್ವಹಣೆಯ ಕೊರತೆಯಿಂದ ದುರ್ನಾತ ವಿಪರೀತವಾಗಿದೆ. ಉದ್ಯಾನ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ.

- ಮಹಾಂತೇಶ ಬೂದಗುಂಪಿ ವಕೀಲರು ಯಲಬುರ್ಗಾ

ಪಂಚಾಯಿತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ಅಧಿಕಾರಿಗಳ ಅಗತ್ಯವಿದೆ. ಪಾರದರ್ಶಕ ಆಡಳಿತವನ್ನು ಎದುರು ನೋಡುತ್ತಿದ್ದೇವೆ.

- ಅಂದಾನಯ್ಯ ಕಳ್ಳಿಮಠ ಅಧ್ಯಕ್ಷ ಯಲಬುರ್ಗಾ ಪಟ್ಟಣ ಪಂಚಾಯಿತಿ

ಪ್ರತಿಯೊಂದು ಮನೆಗೂ ಶೌಚಾಲಯ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಸ್ವಯಂ ಪ್ರೇರಣೆಗೊಂಡು ಬಯಲು ಬಹಿರ್ದೆಸೆಗೆ ಹೋಗುವುದನ್ನು ನಿಲ್ಲಿಸಬೇಕು. ನಾಗೇಶ.

-ಮುಖ್ಯಾಧಿಕಾರಿ ಪ.ಪಂ ಯಲಬುರ್ಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.