ADVERTISEMENT

ಕೊಪ್ಪಳ ಜಿಲ್ಲೆಯಾದ್ಯಂತ ಯೋಗ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 3:56 IST
Last Updated 21 ಜೂನ್ 2024, 3:56 IST
   

ಕೊಪ್ಪಳ: ಹತ್ತನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಯೋಗ ಹಾಗೂ ಧ್ಯಾನ ನಡೆಯಿತು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಹಾಗೂ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಯೋಗ ಮಾಡಿದರು. ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಯೋಗಿನಿ ಧ್ಯಾನದ ಮಹತ್ವ ಹೇಳಿಕೊಟ್ಟರು. ‘ಸ್ವಂತ ಮತ್ತು ಸಮಾಜಕ್ಕಾಗಿ ಯೋಗ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದ್ದು, ಎಲ್ಲರೂ ಇದನ್ನು ಪಾಲನೆ ಮಾಡಬೇಕು ಎಂದರು.

ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಕಾಲೇಜಿನ ಆವರಣದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಕುಮಾರ ಡಿ.ಕೆ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಸೇರಿದಂತೆ ಅನೇಕರು ಬಳಿಕ ಯೋಗ ಮಾಡಿದರು.

ADVERTISEMENT

ಕುಮಾರ ಡಿ.ಕೆ. ಮಾತನಾಡಿ ‘ಯೋಗದಿಂದಾಗಿ ಮನಸ್ಸು ಹಾಗೂ ದೈಹಿಕ ಶುದ್ದೀಕರಣ ಸಾಧ್ಯವಾಗುತ್ತದೆ. ಮಾನಸಿಕ ನೆಮ್ಮದಿಗೆ ಅನುಕೂಲವೂ ಆಗುತ್ತದೆ. ಯೋಗದಿನ ಮಾತ್ರ ಆಸನಗಳನ್ನು ಮಾಡದೆ ನಿತ್ಯವೂ ಬದುಕಿನ ಭಾಗವಾಗಿ ರೂಢಿಸಿಕೊಂಡರೆ ಆರೋಗ್ಯ ಉತ್ತಮವಾಗಿಟ್ಟಕೊಳ್ಳಲು ಸಾಧ್ಯ’ ಎಂದರು.

ಮಹಾವಿದ್ಯಾಲಯದ ಆಡಳಿತಾಧಿಕಾರಿ ಮಹಾಂತೇಶ ಸಾಲಿಮಠ ಮಾತನಾಡಿ ‘ಸಮಾಜಕ್ಕೆ ಸಂದೇಶ ಕೊಡಲು ಯೋಗ ಅಗತ್ಯ. ರೋಗ ತಡೆಗಟ್ಟಲು ಹಾಗೂ ಜಗತ್ತಿಗೆ ಸಂದೇಶ ಸಾರಲು ಎಲ್ಲರೂ ಯೋಗ ಮಾಡೋಣ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.