ಕೊಪ್ಪಳ: ‘ಮಕ್ಕಳನ್ನು ಅಶ್ಲೀಲ ವಿಚಾರಗಳಿಂದ ದೂರ ಇಡಲು ಸಂಸ್ಕೃತಿ ಹಾಗೂ ಶಾಸ್ತ್ರೀಯ ಸಂಗೀತದಂಥ ಲಸಿಕೆ ಹಾಕಬೇಕಾಗಿದೆ’ ಎಂದು ಖ್ಯಾತ ಬಾನ್ಸುರಿ ವಾದಕ ಪಂ.ಪ್ರವೀಣ್ ಗೋಡ್ಖಿಂಡಿ ಹೇಳಿದರು.
ಬೇವಿನಹಳ್ಳಿಯ ಕಿರ್ಲೋಸ್ಕರ್ ಫರೆಸ್ ಇಂಡಸ್ಟ್ರೀಸ್ ಹಾಗೂ ಕಿನ್ನಾಳದ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ನಡೆದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಸ್ಕೃತಿ ಮತ್ತು ಸಂಗೀತ ಎಂಬುದು ನಮ್ಮ ಮಕ್ಕಳಿಗೆ ವಜ್ರಕವಚ ಇದ್ದಂತೆ. ಅದು ಮನೋವಿಕಾರವನ್ನು ದೂರ ಮಾಡುತ್ತದೆ. ಅಲ್ಲದೆ ಮನುಷ್ಯನನ್ನು ದೈವತ್ವಕ್ಕೆ ಕೊಂಡೊಯ್ಯುವ ಶಕ್ತಿ ಸಹ ಇದೆ ಎಂದು ಹೇಳಿದರು.
ಈ ಭಾಗದ ಮಕ್ಕಳಿಗೆ ಪರಂಪರೆ, ಭಾರತೀಯ ಸಂಗೀತದ ಜ್ಞಾನ ನೀಡುವ ಉದ್ದೇಶದಿಂದ ಇಂಥ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಲಚ್ಚಣ್ಣ ಕಿನ್ನಾಳ ಅವರು ಭಕ್ತಿ ಸಂಗೀತ ಪ್ರಸ್ತುತ ಪಡಿಸಿದರು. ನಂತರ ಪಂ.ಪ್ರವೀಣ್ ಗೋಡ್ಖಿಂಡಿ ಅವರು ಬಾನ್ಸುರಿ ನುಡಿಸಿ ಜನರನ್ನು ರಂಜಿಸಿದರು.
ನಂತರ ಪೂನಾದ ಅಂತರರಾಷ್ಟ್ರೀಯ ಸಂಗೀತ ಕಲಾವಿದೆ ಮಂಜೂಷಾ ಪಾಟೀಲ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಿದರು. ಬದರಿ ಪುರೋಹಿತ್ ಅವರು ಕುಂಚಗಾಯನ ನಡೆಸಿಕೊಟ್ಟರು.
ಬೇವಿನಹಳ್ಳಿಯ ಕಿರ್ಲೋಸ್ಕರ್ ಫರೆಸ್ ಇಂಡಸ್ಟ್ರೀಸ್ ಮುಖ್ಯ ನಿರ್ದೇಶಕ ಆರ್.ವಿ. ಗುಮಾಸ್ತೆ ಅಧ್ಯಕ್ಷತೆ ವಹಿಸಿದ್ದರು.
ಖ್ಯಾತ ತಬಲಾವಾದಕ ಪಂ.ಕಿರಣ್ ಗೋಡ್ಖಿಂಡಿ, ಕಿರ್ಲೋಸ್ಕರ್ ಲೇಡಿಸ್ ಕ್ಲಬ್‌ನ ಅಧ್ಯಕ್ಷೆ ಕಮಲಾ ಗುಮಾಸ್ತೆ, ಲಕ್ಷ್ಮಿ ನಾರಾಯಣ, ಆರ್.ಎಸ್. ಶ್ರೀವತ್ಸನ್, ಎನ್.ಬಿ.ಯಕತಾರೆ, ಉದಯ ಕುಲಕರ್ಣಿ ಇದ್ದದ್ದರು.
ಹಾರ್ಮೊನಿಯಂ ಗುರುಪ್ರಸಾದ ಹೆಗಡೆ ಧಾರವಾಡ, ವಿನಾಯಕ ಎಚ್.ಕಿನ್ನಾಳ, ತಬಲಾ ವಾದಕ ಶ್ರೀಧರ ಮಾಂಡ್ರೆ ಧಾರವಾಡ. ಶಿವಲಿಂಗಪ್ಪ ಕಿನ್ನಾಳ, ಗೀತಮ್ಮ ಕಿನ್ನಾಳ, ಎನ್.ಎಸ್.ಬಡಿಗೇರ ಹಾಗೂ ಕೃಷ್ಣಾ ಸಾಥ್ ನೀಡಿದರು.
ಮುರಳಿಧರ್ ನಾಡಗೇರ್ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.