ಗಂಗಾವತಿ: ‘ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಕೆಲ ಕಾಂಗ್ರೆಸ್ ಮುಖಂಡರು ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್ ವರಿಷ್ಠರಿಗೆ ಮನವಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಈಚೆಗೆ ಗಂಗಾವತಿಯಲ್ಲಿ ಮಾಜಿ ಸಂಸದ ಎಚ್.ಜಿ ರಾಮುಲು ಅವರ ಮನೆಗೆ ಭೇಟಿ ನೀಡಿ, ಗೌಪ್ಯ ಸಭೆ ನಡೆಸಿದ್ದರು.
‘ಮಾಜಿ ಸಂಸದ ಎಚ್.ಜಿ.ರಾಮುಲು ಅವರ ಕುಟುಂಬ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಉನ್ನತ ಮಟ್ಟಕ್ಕೆ ಒಯ್ದಿತ್ತು. ಅವರನ್ನು ಮೂಲೆಗುಂಪು ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ವಡ್ಡರಹಟ್ಟಿ ವೀರಭದ್ರಪ್ಪ ನಾಯಕ, ರಘು ಗುಜ್ಜಲ್, ಉಸ್ಮಾನ್ ಬಿಚ್ಚಿಗತ್ತಿ, ರಜೀಯಾ ಬೇಗಂ,ಅನ್ವರ್ ಟೇಲರ್ ಮತ್ತು ಆಯೂಬ್ ಖಾನ್ ಇದ್ದರು.
ಖಂಡನೆ: ‘ಇಕ್ಬಾಲ್ ಅನ್ಸಾರಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಟಿಕೇಟ್ ನೀಡಿಬೇಡಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಅವರಿಗೆ ದೂರು ನೀಡಿದ ಕೆಲವರ ನಡೆ ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಡಿಯೊ ವೈರಲ್ ಕುರಿತು ಮಾತನಾಡಿದ ಅವರು, ‘ಮಾಜಿ ಸಂಸದ ಎಚ್.ಜಿ.ರಾಮುಲು ಅವರ ಯೋಗಕ್ಷೇಮ ವಿಚಾರಣೆಗೆ ಬಂದು, ನಡೆಸಿದ ಗೌಪ್ಯ ಸಭೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಕೆಲ ಮುಖಂಡರು, ಜೆಡಿಎಸ್ ಕಾರ್ಯಕರ್ತರು ಇಕ್ಬಾಲ್ ಅನ್ಸಾರಿಗೆ ಟಿಕೇಟ್ ನೀಡದಂತೆ ಹರಿಪ್ರಸಾದ್ ಅವರಿಗೆ ದೂರು ಕೊಟ್ಟಿದ್ದಾರೆ’ ಎಂದರು.
ನಗರಸಭೆ ಸದಸ್ಯ ಸೋಮನಾಥ ಭಂಡಾರಿ, ಯುವ ಕಾಂಗ್ರೆಸ್ ಮುಖಂಡ ಮಲ್ಲೇಶ ದೇವರಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.