ADVERTISEMENT

ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಸೃಷ್ಟಿಸಿದ ಇಕ್ಬಾಲ್ ಅನ್ಸಾರಿ ಡೀಲರ್ ಹೇಳಿಕೆ

ಪ್ರಮೋದ
Published 1 ಫೆಬ್ರುವರಿ 2024, 5:41 IST
Last Updated 1 ಫೆಬ್ರುವರಿ 2024, 5:41 IST
ಕಿರು ಹೊತ್ತಿಗೆಯಲ್ಲಿರುವ ಇಕ್ಬಾಲ್‌ ಅನ್ಸಾರಿ ವಿರುದ್ಧದ ಮಾಹಿತಿ
ಕಿರು ಹೊತ್ತಿಗೆಯಲ್ಲಿರುವ ಇಕ್ಬಾಲ್‌ ಅನ್ಸಾರಿ ವಿರುದ್ಧದ ಮಾಹಿತಿ   

ಕೊಪ್ಪಳ: ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ನಗರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಮಾಜಿ ಸಚಿವ ಗಂಗಾವತಿಯ ಇಕ್ಬಾಲ್‌ ಅನ್ಸಾರಿ ನೀಡಿದ ’ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ಡೀಲರ್‌ಗಳನ್ನು ಚೆಂಡು ಹಿಡಿದು ಹೊರಗೆ ತಳ್ಳಿ’ ಎಂಬ ಹೇಳಿಕೆ ಪಕ್ಷದಲ್ಲಿ ತಲ್ಲಣ ಮೂಡಿಸಿದ್ದು, ಹಲವರ ಅಸಮಾಧಾನಕ್ಕೂ ಕಾರಣವಾಗಿದೆ.

ಹಿಂದಿನ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಗಂಗಾವತಿ ವ್ಯಾಪ್ತಿಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ್‌ ಸೇರಿದಂತೆ ಹಲವರ ವಿರುದ್ಧ ಅನ್ಸಾರಿ ಅವರೇ ಆಕ್ರೋಶ ವ್ಯಕ್ತಪಡಿಸಿ ಚುನಾವಣಾ ಸಮಯದಲ್ಲಿ ಕೆಲವರು ಪಕ್ಷ ವಿರೋಧಿಯಾಗಿ ನಡೆದುಕೊಂಡಿದ್ದು ನನ್ನ ಸೋಲಿಗೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ದೂರು ಹೇಳಿದ್ದರು.

ಇದೇ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಅನ್ಸಾರಿ ‘ಡೀಲರ್‌ಗಳನ್ನು ಹೊರತಳ್ಳಿ’ ಎನ್ನುವ ಹೇಳಿಕೆ ನೀಡಿದ್ದು, ಸ್ವ ಪಕ್ಷೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಅನ್ಸಾರಿ ಈ ಹೇಳಿಕೆ ನೀಡುತ್ತಿದ್ದಂತೆಯೇ ಕೆಲವರು 'ಇಕ್ಬಾಲ್ ಅನ್ಸಾರಿ ಸೋಲಿಗೆ ಕಾರಣಗಳು' ಎನ್ನುವ ಮಾಹಿತಿ ಸಂಗ್ರಹಿಸಿಟ್ಟುಕೊಂಡು ಹೊತ್ತಿಗೆ ರೂಪದಲ್ಲಿ ಹೊರತರಲು ಮುಂದಾಗಿದ್ದಾರೆ. ಅನ್ಸಾರಿ ವ್ಯಕ್ತಪಡಿಸಿದ ಬೇಸರದಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಯಾರದ್ದಾದರೂ ಹೆಸರು ಪ್ರಸ್ತಾಪಿಸಿದರೆ ಅವರು ಅನ್ಸಾರಿ ಚುನಾವಣಾ ಸಮಯದಲ್ಲಿ ಮಾಡಿದ ತಪ್ಪುಗಳನ್ನು ಪಕ್ಷದ ವರಿಷ್ಠರಿಗೆ ಹೇಳಲು ಮುಂದಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ADVERTISEMENT

ಗಂಗಾವತಿ ನಗರಸಭೆ ಸದಸ್ಯ ಶಾಮೀದ್‌ ಮನಿಯಾರ್‌ ಮತ್ತು ಪಕ್ಷದ ಕುರುಬ ಸಮುದಾಯದ ಮುಖಂಡ ಹನುಮಂತಪ್ಪ ಅರಸಿನಕೇರಿ ಮೊದಲು ಅನ್ಸಾರಿ ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದರು. ಚುನಾವಣೆಯಲ್ಲಿ ಅನ್ಸಾರಿ ಸೋತ ಬಳಿಕ ಅಸಮಾಧಾನವಾಗಿತ್ತು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಕಿರು ಹೊತ್ತಿಗೆಯಲ್ಲಿ ಕ್ಷೇತ್ರದ ಹಿರಿಯ ನಾಯಕರ ಕಡೆಗಣನೆ, ಶ್ರೀನಾಥ್‌ ಅವರನ್ನು ಪ್ರಚಾರದಿಂದ ದೂರ ಇಟ್ಟಿದ್ದು, ಹಗಲೆಲ್ಲ ಮನೆಯಲ್ಲಿದ್ದು ಸಂಜೆ ಬಳಿಕ ಚುನಾವಣಾ ಪ್ರಚಾರ ಮಾಡಿದ್ದು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ರಾತ್ರಿ ಎಂಟು ಗಂಟೆ ನಂತರವೇ ಪ್ರಚಾರಕ್ಕೆ ಹೋಗಿದ್ದು ಇವುಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ತುಣುಕುಗಳನ್ನು ಸಂಗ್ರಹಿಸಿದ್ದಾರೆ.   

ಪ್ರಚಾರಕ್ಕೆ ಗ್ರಾಮಕ್ಕೆ ಬರುವುದಾಗಿ ತಿಳಿಸಿ, ಕಾರ್ಯಕರ್ತರನ್ನು ನಿರಾಸೆ ಮಾಡಿರುವ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮೀಣ ಭಾಗದ ಕೆಲ ಕಾಂಗ್ರೆಸ್ ಕಾರ್ಯಕರ್ತರು, 'ಅನ್ಸಾರಿ ಬರುವಿಕೆಗಾಗಿ ತಂದಿದ್ದ ಹೂವಿನ ಹಾರ ಬಾಡಿ ಹೋಗಿದ್ದವು. ಕೇಕ್ ಹಾಳಾಗಿತ್ತು' ಎಂದು ಬೇಸರ ತೋಡಿಕೊಂಡಿದ್ದನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಅನ್ಸಾರಿ ಅವರಿಗೆ ಹಲವು ಬಾರಿ ಫೋನ್‌ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಇಕ್ಬಾಲ್ ಅನ್ಸಾರಿ ವಿರುದ್ಧ ಕಿರು ಹೊತ್ತಿಗೆ ಬಗ್ಗೆ ನನಗೆ ಗೊತ್ತಿಲ್ಲ. ಹನುಮಂತಪ್ಪ ಅರಸಿನಕೇರಿಗೆ ಎಲ್ಲವೂ ಗೊತ್ತು. ಪ್ರಚಾರಕ್ಕೆ ಹಳ್ಳಿಗಳಿಗೆ ಹೋಗದ ಕಾರಣ ಹೊತ್ತಿಗೆ ಮಾಡುತ್ತಿದ್ದಾರೆ.
ಶಾಮೀದ್‌ ಮನಿಯಾರ್‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾವತಿ
‘ಹೊತ್ತಿಗೆ ಇರುವುದು ನಿಜ’
ಕಾಂಗ್ರೆಸ್‌ ಮುಖಂಡ ಹನುಮಂತಪ್ಪ ಅರಸಿನಕೇರಿ ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಎರಡು ದಶಕಗಳಿಂದ ಯಾವ ಫಲಾಪೇಕ್ಷೆಯಿಲ್ಲದೇ ಪಕ್ಷದಲ್ಲಿ ವ್ಯಕ್ತಿಗಾಗಿ ದುಡಿದಿದ್ದೇನೆ. ಇನ್ನು ಮುಂದೆ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡುತ್ತೇನೆ. ಹೊತ್ತಿಗೆ ಇರುವುದು ನಿಜ ಮುಂದಿನ ದಿನಗಳಲ್ಲಿ ನಡೆಯುವ ಬೆಳವಣಿಗೆ ನೋಡಿಕೊಂಡು ದೊಡ್ಡ ಸಮಾರಂಭ ಮಾಡಿ ಬಿಡುಗಡೆ ಮಾಡಲಾಗುವುದು’ ಎಂದರು. ‘ಮುಂದೆ ಇಕ್ಬಾಲ್‌ ಅನ್ಸಾರಿ ಯಾವ ರೀತಿ ನಡೆದುಕೊಳ್ಳುತ್ತಾರೊ ಅದರಂತೆ ನನ್ನ ನಡೆ ಇರುತ್ತದೆ. ಅದು ಬಿಡುಗಡೆಯಾದಾಗ ಹೊತ್ತಿಗೆ ಯಾರು ಬರೆದಿದ್ದಾರೆ ಎನ್ನುವುದು ಬಹಿರಂಗವಾಗುತ್ತದೆ. ಅಗತ್ಯವಾದರೆ ಪಕ್ಷದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಬಳಿ ಇದರ ಬಗ್ಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.