ADVERTISEMENT

ಜೆಜೆಎಂ ಕಾಮಗಾರಿ ಅನುಷ್ಠಾನದಲ್ಲಿ ಕರ್ತವ್ಯಲೋಪ: ಇಬ್ಬರು ಎಂಜಿನಿಯರ್‌ಗಳು ಅಮಾನತು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 14:14 IST
Last Updated 31 ಮಾರ್ಚ್ 2023, 14:14 IST

ಕುಷ್ಟಗಿ (ಕೊಪ್ಪಳ ಜಿಲ್ಲೆ): ಜಲಜೀವನ ಮಿಷನ್ (ಜೆಜೆಎಂ) ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಬ್ಬರು ಎಂಜಿನಿಯರ್‌ಗಳನ್ನು ಶುಕ್ರವಾರ ಅಮಾನತು ಮಾಡಲಾಗಿದೆ.

ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ ಆದೇಶ ಹೊರಡಿಸಿದ್ದು ಕೊಪ್ಪಳ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಬಸನಗೌಡ ಮೇಟಿಪಾಟೀಲ ಹಾಗೂ ಕುಷ್ಟಗಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಪ್ರಭಾರ) ವಿಲಾಸ ಭೋಸ್ಲೆ ಅಮಾನತು ಮಾಡಲಾಗಿದೆ.

ತೆರವಾಗಿರುವ ಕೊಪ್ಪಳ ವಿಭಾಗೀಯ ಕಚೇರಿಯ ಕಾರ್ಯಪಾಲಕ ಹುದ್ದೆಗೆ ಗಂಗಾವತಿ ಉಪವಿಭಾಗದ ಸತೀಶ್‌ ಎಕ್ಲಿಕಾರ್, ಕುಷ್ಟಗಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಗೆ ಪ್ರಭಾರ ಅಧಿಕಾರ ವಹಿಸಿಕೊಳ್ಳುವಂತೆ ಕುಷ್ಟಗಿಯ ಪಂಚಾಯತ್‌ ರಾಜ್‌ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸಂಜೀವ್ ಕುಮಾರ ಅವರಿಗೆ ಸೂಚಿಸಲಾಗಿದೆ.

ADVERTISEMENT

ಆಗಿದ್ದೇನು: ಕುಷ್ಟಗಿ ತಾಲ್ಲೂಕಿನಲ್ಲಿ 2020-21ನೇ ಸಾಲಿನಿಂದ 173 ಜೆಜೆಎಂ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸದಿರುವುದು ಹಾಗೂ ಕಾಮಗಾರಿಗಳ ಗುಣಮಟ್ಟ ಕಾಪಾಡುವಲ್ಲಿ ಈ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಸಂಬಂಧ ಶಿಸ್ತುಕ್ರಮ ಜರುಗಿಸಲು ದೋಷಾರೋಪಣೆ ಪಟ್ಟಿಯನ್ನು ಒಳಗೊಂಡ ಪ್ರಸ್ತಾವವನ್ನು ಜಿಲ್ಲಾ ಪಂಚಾಯಿತಿಯ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೌಜಿಯಾ ತರುನ್ನಮ್‌ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.