ADVERTISEMENT

ಬಿಜೆಪಿ ₹15 ಲಕ್ಷ, 2 ಕೋಟಿ ಉದ್ಯೋಗ ಕೊಟ್ಟಿದೆಯಾ?: ತಂಗಡಗಿ

​ಪ್ರಜಾವಾಣಿ ವಾರ್ತೆ
Published 29 ಮೇ 2023, 15:28 IST
Last Updated 29 ಮೇ 2023, 15:28 IST
ಶಿವರಾಜ ತಂಗಡಗಿ
ಶಿವರಾಜ ತಂಗಡಗಿ   

ಕೊಪ್ಪಳ: ‘ಹೊಸ ಸರ್ಕಾರವೆಂಬ ಕೂಸು ಈಗಷ್ಟೇ ಹುಟ್ಟಿದೆ. ಚುನಾವಣಾ ಪೂರ್ವದಲ್ಲಿ ನಾವು ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಬಿಜೆಪಿಯವರು ಈಗಲೇ ಅಪಪ್ರಚಾರ ಶುರು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಂಬತ್ತು ವರ್ಷಗಳ ಹಿಂದೆ ಜನರಿಗೆ ಹೇಳಿದ್ದ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಮತ್ತು 2 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯ ಭರವಸೆಗಳನ್ನು ಈಡೇರಿಸಿದ್ದಾರೆಯೇ’ ಎಂದು ಹಿಂದುಳಿದ ವರ್ಗ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.

ಸಚಿವರಾದ ಬಳಿಕ ಸೋಮವಾರ ಮೊದಲ ಬಾರಿಗೆ ಜಿಲ್ಲೆಗೆ ಬಂದ ಅವರು ‘ನಮ್ಮ ಗ್ಯಾರಂಟಿ ಭರವಸೆಗಳು ಜಾರಿಯಾದರೆ ಬಿಜೆಪಿಯವರು ಇನ್ನೂ ಹತ್ತು ವರ್ಷ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಯಾವುದೇ ಮಗುವಾದರೂ ಹುಟ್ಟಿದಾಕ್ಷಣ ಓಡಾಡುವುದಿಲ್ಲ. ನಮ್ಮ ಸರ್ಕಾರ ಬಂದು 16 ದಿನಗಳಾಗಿವೆ. ಜನರಿಗೆ ಕೊಟ್ಟ ಭರವಸೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದರು.

‘ಗ್ಯಾರಂಟಿಗಳಿಗೆ ಷರತ್ತುಗಳನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಗ್ಯಾರಂಟಿ ಜಾರಿಯಾಗುವ ತನಕ ಕಾದು ಆ ಮೇಲೆ ವಿರೋಧ ಪಕ್ಷಗಳು ಮಾತನಾಡಲಿ. ಬಿಜೆಪಿಗೆ ಚುನಾವಣೆಯಲ್ಲಿ ಮತದಾರರು ಬುದ್ಧಿ ಕಲಿಸಿದ್ದಾರೆ. ಮುಂದೆಯೂ ಕಲಿಸುತ್ತಾರೆ. ಈಗ ರಾಜ್ಯದ ಜನ, ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ತಕ್ಕ ಪಾಠ ಕಲಿಸಿ ಬಿಜೆಪಿಯನ್ನು ಮನೆಗೆ ಕಳುಹಿಸುತ್ತಾರೆ’ ಎಂದರು.

ADVERTISEMENT

‘ಸಾಮಾಜಿಕ ನ್ಯಾಯದಡಿ ನನಗೆ ಸಚಿವ ಸ್ಥಾನಮಾನ ನೀಡಲಾಗಿದೆ. ಖಾತೆ ಹಂಚಿಕೆ ಬಗ್ಗೆ ಅಸಮಾಧಾನವಿಲ್ಲ. ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುವೆ. ಮುಖ್ಯಮಂತ್ರಿ ಅಧಿಕಾರಿ ಹಂಚಿಕೆ ವಿಚಾರದ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.