ADVERTISEMENT

ತಾಲ್ಲೂಕು ಜನಸ್ಪಂದನದಲ್ಲಿ ಸಮಸ್ಯೆಗಳ ಸುರಿಮಳೆ

ಬಸ್‌ ಸೌಕರ್ಯ, ನಿವೇಶನ ಸಮಸ್ಯೆ, ಪಹಣಿ ತಿದ್ದುಪಡಿ ದೂರೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 5:10 IST
Last Updated 27 ಜೂನ್ 2024, 5:10 IST
ಕನಕಗಿರಿಯ ಎಪಿಎಂಸಿಯ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ  ನಲಿನ್ ಆತುಲ್ ಉದ್ಘಾಟಿಸಿದರು
ಕನಕಗಿರಿಯ ಎಪಿಎಂಸಿಯ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ  ನಲಿನ್ ಆತುಲ್ ಉದ್ಘಾಟಿಸಿದರು   

ಕನಕಗಿರಿ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಇಲ್ಲಿನ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಿತು.

ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪಟ್ಟಣ ಸೇರಿದಂತೆ ಸುತ್ತಮುತ್ತಲ್ಲಿನ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಹವಾಲು ಸಲ್ಲಿಸಿದರು.

ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಆಂಗ್ಲ ಹಾಗೂ ಸಿಬಿಝಡ್ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಪಾಲಕರಾದ ವೀರೇಶ ಕಡಿ, ಕನಕರೆಡ್ಡಿ ಕೆರಿ, ಮಂಜುನಾಥ ಪ್ರಭುಶೆಟ್ಟರ್, ವೆಂಕಟೇಶ ಸೌದ್ರಿ ಇತರರು ಮನವಿ ಸಲ್ಲಿಸಿದರು. ಬೇರೆ ಶಾಲೆಗಳಿಂದ ಎರವಲು ಸೇವೆ ಪಡೆದು ಶಿಕ್ಷಕರನ್ನು ಒದಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ಅವರಿಗೆ ಸೂಚಿಸಿದರು.

ADVERTISEMENT

ಪಟ್ಟಣ ಹಾಗೂ ತಾವರಗೇರಾ ಗ್ರಾಮದಿಂದ ಗಂಗಾವತಿ ಕಡೆಗೆ ದಿನ ನಿತ್ಯ ಓಡಾಡಲು ಬಸ್ ಗಳ ಕೊರತೆ ಇದೆ. ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ. ಅಧಿಕಾರಿಗಳು ಬಸ್ ಒದಗಿಸುವ ಬದಲಾಗಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ದೂರಿದರು.

ಮುಸಲಾಪುರ ಅಥವಾ ಚಿಕ್ಕ ಮಾದಿನಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ನೇಮಿಸಬೇಕು. ತಾಲ್ಲೂಕು ಮಟ್ಟದ ಕಚೇರಿಗಳನ್ನು ತ್ವರಿತ ಗತಿಯಲ್ಲಿ ಸ್ಥಾಪಿಸಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಸಂಘಟನೆ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಕೋರಿದರು. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.

ಮರಿಯಪ್ಪ ಮಂಡಾಳಭಟ್ಟಿ ಅವರು ಕನಕಾಚಲಪತಿ ದೇವಸ್ಥಾನದ ಜಾಗದ ಹದ್ದುಬಸ್ತ್ ಹಾಗೂ ಒತ್ತುವರಿ ಕುರಿತು ಮನವಿ ಸಲ್ಲಿಸಿದರೆ, ಶಾಂತಮ್ಮ ಎಂಬುವವರು ತಮಗೆ ಆಶ್ರಯ ಮನೆ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.

ಕಳೆದ 40 ವರ್ಷಗಳಿಂದಲೂ ಓಡಾಡುತ್ತಿದ್ದ ಬೆಳಗಿನ ಜಾವದ ಕನಕಗಿರಿ-ಬಳ್ಳಾರಿ ಬಸ್ ಸ್ಥಗಿತವಾಗಿದೆ. ಅದನ್ನು ಮತ್ತೆ ಓಡಿಸಲು ಆರಂಭಿಸಿ ಅನುಕೂಲ ಮಾಡಿಕೊಡಬೇಕು ಎಂದು ಮಂಜುನಾಥ ಪ್ರಭುಶೆಟ್ಟರ್ ಒತ್ತಾಯಿಸಿದರು. ಮುಸಲಾಪುರದ ಶರಣಮ್ಮ ತಳವಾರ ಅವರ ಪುತ್ರ ಆನಂದ ಅವರು ತಮಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್ ಕೊರೆಯಿಸಿ ಕೊಡುವಂತೆ ಮನವಿ ಮಾಡಿದರು.

ತಾಲ್ಲೂಕಿನ ತಿಪ್ಪನಾಳ ಗ್ರಾಮದ ಎಸ್‌ಸಿ ಕಾಲೊನಿಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಸಮುದಾಯ ಭವನ ನಿರ್ಮಾಣ ಮಾಡಿದ್ದು, ನಿರ್ಮಿತಿ ಕೇಂದ್ರದ ಅಧಿಕಾರಿಗಳು ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ ಮೀಟರ್ ಸೌಕರ್ಯ ಮಾಡಿಕೊಡುವಂತೆ ಮನವಿ ಗ್ರಾಮ ಪಂಚಾಯಿತಿ ಸದಸ್ಯ ಕನಕಪ್ಪ ಅಹವಾಲು ಸಲ್ಲಿಸಿದರು.

5ನೇ ವಾರ್ಡ್ ಲಾಲ್ ಸಿಂಗ್ ಅವರ ನಿವೇಶನದ ಪರಿಸರದ ಮನೆಗಳಿಗೆ ಕುಡಿಯುವ ನೀರು ಪೂರೈಕೆ , ಭೂಮಿ ಹದ್ದು ಬಸ್ತ್ ಮಾಡುವುದು, ಪಹಣಿಯಲ್ಲಿ ಹೆಸರುಗಳ ತಿದ್ದುಪಡಿ, ಗಂಗಾ ಕಲ್ಯಾಣ ಯೋಜನೆ ಮಂಜೂರು, ಆಕಳಕುಂಪಿ ಗ್ರಾಮಕ್ಕೆ ಬಸ್ ಓಡಿಸುವುದು, ಆಶ್ರಯ ಮನೆಗೆ ಅನುದಾನ ಮಂಜೂರು ಮಾಡುವುದು, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕಟ್ಟಡ ನಿರ್ಮಾಣ ಮಾಡುವುದು, ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯವನ್ನು ಸ್ಥಳಾಂತರಿಸುವುದು, ಚಿರ್ಚನಗುಡ್ಡ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದು ಸೇರಿ ಹಲವಾರು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಕಳೆದ 30 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯವರು ಸರ್ವೆ ನಂ; 3/1ರ 2 ಎಕರೆ 2 ಗುಂಟೆ ಜಾಗದಲ್ಲಿ ತಮಗೆ ಆಶ್ರಯ ಮನೆಯ ಹಕ್ಕು ಪತ್ರ ನೀಡಿದ್ದರೂ ಜಾಗ ಅಳತೆ ಮಾಡಿಕೊಟ್ಟಿಲ್ಲ. ಈ  ನಿವೇಶನ ತಮಗೆ ಕೊಡಿಸುವಂತೆ ಮಂಜುನಾಥ ನಾಯಕ, ಹನುಮಂತಪ್ಪ ಟೇಲರ್ ಮನವಿ ಸಲ್ಲಿಸಿದರು.

ಜೀರಾಳ ಗ್ರಾಮದ 10 ನೇ ತರಗತಿ ವಿದ್ಯಾರ್ಥಿಯ ಪೋಷಕರು ಸಲ್ಲಿಸಿದ ಮನವಿಗೆ ಅಧಿಕಾರಿಗಳು ಸ್ಪಂದಿಸಿ ಸಿದ್ದಾಪುರ ಗ್ರಾಮದ ವಸತಿ ನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಿಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ, ಜಿಲ್ಲಾ ನಗರ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ. ಎಸ್.ರುದ್ರೇಶಪ್ಪ, ತಹಶೀಲ್ದಾರ್ ವಿಶ್ವನಾಥ ಮುರಡಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಹಾಜರಿದ್ದರು. ತುಗ್ಲೆಪ್ಪ ದೇಸಾಯಿ ಸ್ವಾಗತಿಸಿದರು. ಮೌನೇಶ ಬಡಿಗೇರ ನಿರೂಪಿಸಿದರು.

ಕನಕಗಿರಿಯಲ್ಲಿ  ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಕೊಪ್ಪಳ ಆಶ್ರಯದಲ್ಲಿ ಬುಧವಾರ ನಡೆದ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.