ADVERTISEMENT

ಮೀಸಲಾತಿಗಾಗಿ ವಕೀಲರ ಮೂಲಕ ಹೋರಾಟ: ಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 13:21 IST
Last Updated 30 ಆಗಸ್ಟ್ 2024, 13:21 IST
<div class="paragraphs"><p> ಜಯ ಮೃತ್ಯುಂಜಯ ಸ್ವಾಮೀಜಿ</p></div>

ಜಯ ಮೃತ್ಯುಂಜಯ ಸ್ವಾಮೀಜಿ

   

ಕೊಪ್ಪಳ: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕಾನೂನು ಹೋರಾಟ ಮಾಡಲು ಯೋಜನೆ ರೂಪಿಸಲಾಗಿದ್ದು, ಇದಕ್ಕೂ ಮೊದಲು ರಾಜ್ಯದಲ್ಲಿರುವ ನಮ್ಮ ಸಮುದಾಯದ ವಕೀಲರ ಸಂಘಟನೆಯ ಮಹಾಪರಿಷತ್‌ ನಡೆಸಲಾಗುವುದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನ್ಯಾಯಾಲಯದ ಮೊರೆ ಹೋಗಲು ನಮ್ಮ ಸಮಾಜದ ವಕೀಲರ ಸಂಘಟನೆ ಮಾಡಲಾಗುತ್ತಿದೆ. ಅದರ ಭಾಗವಾಗಿ ಬೆಳಗಾವಿಯಲ್ಲಿ ಸೆ.22ರಂದು ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್‌ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಮ್ಮ ಬೇಡಿಕೆಗೆ ಪೂರಕವಾಗಿ ಒಂದೂ ಸಭೆ ಮಾಡಿಲ್ಲ. ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ನಮ್ಮ ಸಮುದಾಯದ ಶಾಸಕರಿಗೆ ಆಗ್ರಹ ಪತ್ರ ಕೊಡಲಾಗಿತ್ತು. ಅಧಿವೇಶನದಲ್ಲಿ ಮುಡಾ, ವಾಲ್ಮೀಕಿ ಹಗರಣದಿಂದ ಮೀಸಲಾತಿ ವಿಷಯ ಚರ್ಚೆಗೇ ಬರಲಿಲ್ಲ. ಸಮಾಜದ ಶಾಸಕರು ಅಧಿವೇಶನದಲ್ಲಿ ಮಾತನಾಡಲು ಅವಕಾಶ ಸಿಗದಿದ್ದಾಗ ಸಭಾತ್ಯಾಗ ಮಾಡಬೇಕಿತ್ತು. ಇದೆಲ್ಲವನ್ನು ನೋಡಿದರೆ ಸಮುದಾಯದ ಶಾಸಕರ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಶಂಕೆಯಿದೆ’ ಎಂದು ಆರೋಪಿಸಿದರು.

‘ನಮ್ಮ ಸಮಾಜದವರು ಈಗಿನ ಸರ್ಕಾರದಲ್ಲಿ ಶಾಸಕರು ಹಾಗೂ ಸಚಿವರೂ ಆಗಿರುವುದರಿಂದ ಮುಖ್ಯಮಂತ್ರಿ ಮೇಲೆ ಮೀಸಲಾತಿಗಾಗಿ ಒತ್ತಡ ಹೇರಬೇಕು. ಸಮಾಜದ ಶಾಸಕರು ಕೇವಲ ಪಕ್ಷದ ಗುರುತು ಹಾಗೂ ಪ್ರಭಾವದಿಂದ ಗೆದ್ದಿಲ್ಲ. ಸಮುದಾಯದ ಜನರ ಬೆಂಬಲವೂ ಅವರಿಗೆ ಸಿಕ್ಕಿದೆ. ಈಗ ಸಮಾಜದ ಋಣ ತೀರಿಸಬೇಕು’ ಎಂದು ಆಗ್ರಹಿಸಿದರು.

‘ಸಿದ್ದರಾಮಯ್ಯ ಲೋಕಸಭಾ ಚುನಾವಣೆ ಪೂರ್ವದಲ್ಲಿ ಸಭೆ ಕರೆಯುವುದಾಗಿ ಹೇಳಿ ಇದುವರೆಗೂ ಕರೆದಿಲ್ಲ. ಅವರು ಕಾನೂನು, ಸಾಮಾಜಿಕ ನ್ಯಾಯ ಮತ್ತು ಬಿ.ಎ.ಆರ್‌. ಅಂಬೇಡ್ಕರ್‌ ಹೆಸರು ಹೇಳುತ್ತಾರೆ. ಆದ್ದರಿಂದ ನಾವೂ ಕಾನೂನು ಹೋರಾಟದ ಮೂಲಕವೇ ನಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ’ ಎಂದು ತಿಳಿಸಿದರು.

ಬಳಿಕ ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಮುಖರು ಹಾಗೂ ವಕೀಲರ ಜೊತೆ ಸಭೆ ನಡೆಸಿದರು.

ಮಾಜಿ ಸಂಸದ ಶಿವರಾಮಗೌಡ, ಸಮುದಾಯದ ಮುಖಂಡರಾದ ಸಿ.ಎಚ್‌. ಪೊಲೀಸ್‌ ಪಾಟೀಲ, ರಾಜಶೇಖರ ನಿಂಗೋಜಿ, ಕರಿಯಪ್ಪ ಮೇಟಿ, ದೇವರಾಜ ಹಾಲಸಮುದ್ರ, ಮಹಾಂತೇಶ ಮಲ್ಲನಗೌಡ್ರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.