ಕೊಪ್ಪಳ:ಕವಲೂರು ಲೇ ಔಟ್‌ನಲ್ಲಿ ನಿರ್ಮಾಣಗೊಂಡ ಪಕ್ಷದ ಹೊಸ ಕಾರ್ಯಾಲಯದ ಕಟ್ಟಡದ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ಬೆಳಿಗ್ಗೆ 11.30ಕ್ಕೆ ಕೊಪ್ಪಳಕ್ಕೆಬರಲಿದ್ದಾರೆ.
ಇಲ್ಲಿಂದಲೇ ಅವರು ವಿಜಯಪುರ, ರಾಯಚೂರು, ಬಳ್ಳಾರಿ, ಬೀದರ್, ಬಾಗಲಕೋಟೆ, ಚಾಮರಾಜನಗರ, ಕೋಲಾರ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ನಿರ್ಮಾಣಗೊಂಡ ಪಕ್ಷದ ಕಚೇರಿಯ ಹೊಸ ಕಟ್ಟಡಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸುವರು. ಬಳಿಕ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಎಂ.ಕಾರಜೋಳ, ಜಿಲ್ಲಾ ಉಸ್ತುವಾರಿ ಆನಂದ್ ಸಿಂಗ್ ಬರಲಿದ್ದಾರೆ.
ಇವರ ಜೊತೆಗೆ ಸಂಸದ ಸಂಗಣ್ಣ ಕರಡಿ, ಸಚಿವ ಹಾಲಪ್ಪ ಆಚಾರ್, ಜಿಲ್ಲೆಯ ಬಿಜೆಪಿ ಶಾಸಕರಾದ ಪರಣ್ಣ ಮನವಳ್ಳಿ, ಬಸವರಾಜ ದಢೇಸೂಗೂರು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳುವರು.
’ಚುನಾವಣೆಯ ಹೊತ್ತಿನಲ್ಲಿಯೇ ರಾಷ್ಟ್ರೀಯ ಅಧ್ಯಕ್ಷರು ಜಿಲ್ಲೆಗೆ ಭೇಟಿ ನೀಡುತ್ತಿರುವುದು ಸಂಘಟನೆಗೆ ದೊಡ್ಡ ಸ್ಫೂರ್ತಿ ತುಂಬಲಿದೆ. ಇದು ನನ್ನ ಅದೃಷ್ಟ’ ಎಂದು ದೊಡ್ಡನಗೌಡ ಪಾಟೀಲ್ ಹೇಳಿದರು.
ಈ ಕಾರ್ಯಕ್ರಮವನ್ನು ವೇದಿಕೆ ಮಾಡಿಕೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತಬೇಟೆಗೆ ಮುನ್ನುಡಿ ಬರೆಯಲು ಬಿಜೆಪಿ ಸಜ್ಜಾಗಿದೆ. ಚುನಾವಣಾ ಹೊತ್ತಿನಲ್ಲಿಯೇ ರಾಷ್ಟ್ರೀಯ ಅಧ್ಯಕ್ಷರು ಜಿಲ್ಲೆಗೆ ಭೇಟಿ ನೀಡುತ್ತಿರುವುದರಿಂದ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ. ನಗರದಾದ್ಯಂತ ನಾಯಕರ ಕಟೌಟ್‌ಗಳು ಹಾಗೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.