ADVERTISEMENT

ಜಂಪ್‌ರೋಪ್‌ ಚಾಂಪಿಯನ್‌ಷಿಪ್‌: ಜಪಾನ್‌ನಲ್ಲಿ ಹರಡಲಿದೆ ಕೊಪ್ಪಳ ಕಂಪು

ಏಷ್ಯನ್‌ ಜಂಪ್‌ರೋಪ್‌ ಚಾಂಪಿಯನ್‌ಷಿಪ್‌ಗೆ ಕುಷ್ಟಗಿ ತಾಲ್ಲೂಕಿನ ಇಬ್ಬರು ಕ್ರೀಡಾಪಟುಗಳು, ಮ್ಯಾನೇಜರ್‌ ಆಯ್ಕೆ

ಪ್ರಮೋದ
Published 24 ಜೂನ್ 2024, 5:05 IST
Last Updated 24 ಜೂನ್ 2024, 5:05 IST
ರಜಾಕ್‌ ಟೇಲರ್
ರಜಾಕ್‌ ಟೇಲರ್   

ಕೊಪ್ಪಳ: ರಾಜ್ಯದ ಜಂಪ್‌ರೋಪ್‌ ಕ್ರೀಡೆಯ ಶಕ್ತಿ ಕೇಂದ್ರ ಎನಿಸಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕ್ರೀಡಾಪಟುಗಳು ಈಗ ಜಪಾನ್‌ನಲ್ಲಿ ಕಂಪು ಹರಡಲು ಸಜ್ಜಾಗಿದ್ದಾರೆ.

ಮುಂದಿನ ತಿಂಗಳು 22ರಿಂದ ಒಂದು ವಾರ ಜಪಾನ್‌ನ ಕಾವಸಕಿಯಲ್ಲಿ ಆಯೋಜನೆಯಾಗಿರುವ ಏಷ್ಯನ್‌ ಜಂಪ್‌ರೋಪ್‌ ಚಾಂಪಿಯನ್‌ಷಿಪ್‌ಗೆ ಜಿಲ್ಲೆಯ ಇಬ್ಬರು ಕ್ರೀಡಾಪಟುಗಳು ಮತ್ತು ಭಾರತ ಸೀನಿಯರ್‌ ತಂಡದ ವ್ಯವಸ್ಥಾಪಕರಾಗಿ ರಾಜ್ಯ ಜಂಪ್‌ರೋಪ್‌ ಸಂಸ್ಥೆ ಪ್ರಧಾನ ಕಾರ್ಯದರ್ಶಿ ರಜಾಕ್‌ ಟೇಲರ್ ಆಯ್ಕೆಯಾಗಿದ್ದಾರೆ.

ಮಹತ್ವದ ಈ ಟೂರ್ನಿಗೆ ವಿವಿಧ ರಾಜ್ಯಗಳ 42 ಜನ ಕ್ರೀಡಾಪುಟಗಳು ಮತ್ತು ನಾಲ್ಕು ಜನ ಸಿಬ್ಬಂದಿ ದೇಶದ ಪ್ರತಿನಿಧಿಗಳಾಗಿ ತೆರಳಲಿದ್ದಾರೆ. ಇದರಲ್ಲಿ ರಾಜ್ಯದಿಂದ ಭೀಮಸೇನ ಪರಸಾಪುರ ಹಾಗೂ ಮಂಜುನಾಥ ಚೌಡಕಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಇವರಿಬ್ಬರೂ ಕುಷ್ಟಗಿ ತಾಲ್ಲೂಕಿನವರು. ರಜಾಕ್‌ ಕೂಡ ಅದೇ ತಾಲ್ಲೂಕಿನ ಹನುಮಸಾಗರ ಗ್ರಾಮದವರು. ಒಂದೇ ತಾಲ್ಲೂಕಿನ ಮೂವರು ಕ್ರೀಡಾಸಾಧಕರು ಈಗ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

ADVERTISEMENT

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ಓದುತ್ತಿರುವ ಕುಷ್ಟಗಿ ತಾಲ್ಲೂಕಿನ ಬಾದಿನಾಳ ಗ್ರಾಮದ ಭೀಮಸೇನ ಪರಸಾಪುರ ಹತ್ತು ವರ್ಷಗಳಿಂದ ಜಂಪ್‌ರೋಪ್‌ ಕ್ರೀಡೆಯಲ್ಲಿ ಸಕ್ರಿಯಾಗಿದ್ದಾರೆ. ರಾಜ್ಯಮಟ್ಟದಲ್ಲಿ ಏಳು ಟೂರ್ನಿ, ರಾಷ್ಟ್ರೀಯ ಮಟ್ಟದಲ್ಲಿ ಆರು ಚಾಂಪಿಯನ್‌ಷಿಪ್‌ಗಳಲ್ಲಿ ಆಡಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಧಾರವಾಡ ವಿ.ವಿ. ತಂಡದ ಪರವಾಗಿ ಆಡಿದ್ದಾರೆ.

ಭೀಮಸೇನ ಪಿಯುಸಿಯಲ್ಲಿ ಓದುವಾಗ ಸ್ನೇಹಿತರ ಮೂಲಕ ಜಂಪ್‌ರೋಪ್‌ ಕೋಚ್‌ ರಜಾಕ್‌ ಪರಿಚಯವಾದರು. ಕೆಲವೇ ತಿಂಗಳುಗಳಲ್ಲಿ ಈ ಕ್ರೀಡೆಯ ಕೌಶಲ ಕಲಿತುಕೊಂಡರು. ಕ್ರೀಡೆಯ ಕಲಿಕೆಯ ಜೊತೆಗೆ ದೈಹಿಕ ಸದೃಢತೆ ಗಳಿಸಿಕೊಳ್ಳಲು ಕೂಡ ಸಾಧ್ಯವಾಗಿದೆ. ಭೀಮಸೇನ ಅವರ ತಂದೆ ಬಾದಿನಾಳ ಗ್ರಾಮದಲ್ಲಿ ಹೋಟೆಲ್‌ ನಡೆಸುತ್ತಿದ್ದು, ತಾಯಿ ವಸಂತವ್ವ ಮನೆಕೆಲಸ ಮಾಡಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಕ್ರೀಡಾಸಾಧನೆಯತ್ತ ಮುನ್ನುಗ್ಗುತ್ತಿದ್ದಾರೆ.

ಮತ್ತೊಬ್ಬ ಕ್ರೀಡಾಪಟು ಮಂಜುನಾಥ ಚೌಡಕಿ ಮೂಲತಃ ವಣಗೇರಿ ಗ್ರಾಮದವರಾದರೂ ಕುಷ್ಟಗಿಯಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಕುಷ್ಟಗಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದು, 2022ರಲ್ಲಿ ಭೋಪಾಲ್‌ ಮತ್ತು 2023ರಲ್ಲಿ ಉಜ್ಜಯಿನಿಯಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಜಂಪ್‌ರೋಪ್‌ ಚಾಂಪಿಯನ್‌ಷಿಪ್‌ನಲ್ಲಿ ತಲಾ ಒಂದು ಬೆಳ್ಳಿ, ಕಂಚು ಗೆದ್ದುಕೊಂಡಿದ್ದಾರೆ. ವಿಶ್ವವಿದ್ಯಾಲಯ ಮಟ್ಟದ ಟೂರ್ನಿಯಲ್ಲಿ ಬಳ್ಳಾರಿಯ ಕೃಷ್ಣದೇವರಾಯ ವಿ.ವಿ. ಪ್ರತಿನಿಧಿಸಿದ್ದರು. ಶಾಲಾ ಹಂತದಿಂದಲೇ ವಿವಿಧ ಶಾಲಾ ಕ್ರೀಡಾಕೂಟಗಳಲ್ಲಿ ಸಾಮರ್ಥ್ಯ ತೋರಿಸಿದ್ದಾರೆ.

ಮಂಜುನಾಥ ತಂದೆ ಕನಕಪ್ಪ ಚೌಡಕಿ ಗಾರ್ಡನ್‌ನಲ್ಲಿ ಮಾಲಿಯಾಗಿ ಕೆಲಸ ಮಾಡುತ್ತಿದ್ದು, ತಾಯಿ ರತ್ನಮ್ಮ ಹೊಲದ ಕೆಲಸ ನೋಡಿಕೊಳ್ಳುತ್ತಾರೆ. ಕನಕಪ್ಪ ಅವರ ಸ್ನೇಹಿತರಾದ ಸೋಮಶೇಖರ ಸೇರಿದಂತೆ ಹಲವರು ಸಹಾಯ ಮಾಡಿದ್ದಾರೆ. ಮಗ ಶತಾಯು ಗತಾಯು ಜಪಾನ್‌ಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಪೋಷಕರ ಹೆಬ್ಬಯಕೆ. ಅದಕ್ಕಾಗಿ ಹಣಕಾಸಿನ ಹೊಂದಾಣಿಕೆಗೆ ಪರದಾಡುತ್ತಿದ್ದಾರೆ.

ಏಷ್ಯನ್ ಜಂಪ್‌ರೋಪ್‌ ಚಾಂಪಿಯನ್‌ಷಿಪ್‌ಗೆ ತೆರಳುವ ಭಾರತ ತಂಡಕ್ಕೆ ಈಗ ಗೋವಾದಲ್ಲಿ ತರಬೇತಿ ಶಿಬಿರ ನಡೆಯುತ್ತಿದೆ. ಅಲ್ಲಿಂದ ತಮ್ಮ ತಮ್ಮ ಊರುಗಳಿಗೆ ತೆರಳಲಿರುವ ಆಟಗಾರರು ಬಳಿಕ ಜಪಾನ್‌ಗೆ ತೆರಳುವರು.

ಮಂಜುನಾಥ ಚೌಡಕಿ
ಭೀಮಸೇನ ಪರಸಾಪುರ

ಜಂಪ್‌ರೋಪ್‌ ಕ್ರೀಡೆಯಿಂದ ದೈಹಿಕ ಸದೃಢತೆ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನೌಕರಿಗೆ ಅವಕಾಶಗಳು ಲಭಿಸುತ್ತವೆ. ಬದುಕು ರೂಪಿಸಿಕೊಳ್ಳಲು ಈ ಕ್ರೀಡೆ ನೆರವಾಗುತ್ತದೆ.

-ಭೀಮಸೇನ ಪರಸಾಪುರ, ಕ್ರೀಡಾಪಟು

ಏಷ್ಯನ್‌ ಜಂಪ್‌ರೋಪ್‌ ಚಾಂಪಿಯನ್‌ಷಿಪ್‌ಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದು ಖುಷಿ ನೀಡಿದೆ. ರಾಷ್ಟ್ರೀಯ ಮಟ್ಟದಲ್ಲಿ ಗೆದ್ದಂತೆ ಅಲ್ಲಿಯೂ ಪದಕ ಗೆಲ್ಲುವ ಹೆಗ್ಗುರಿ ಹೊಂದಿದ್ದೇನೆ.

-ಮಂಜುನಾಥ ಚೌಡಕಿ ಕ್ರೀಡಾಪಟು

ಜಂಪ್‌ರೋಪ್‌ ಕ್ರೀಡೆಯಿಂದಾಗಿ ಕೊಪ್ಪಳ ಜಿಲ್ಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಕ್ರೀಡಾಪಟುಗಳಿಗೆ ಆರ್ಥಿಕವಾಗಿ ನೆರವಿನ ಅಗತ್ಯವಿದೆ. ದಾನಿಗಳು ನೆರವಾದರೆ ಅನುಕೂಲವಾಗುತ್ತದೆ. -ರಜಾಕ್‌ ಟೇಲರ್. ಪ್ರಧಾನ ಕಾರ್ಯದರ್ಶಿ ರಾಜ್ಯ ಜಂಪ್‌ರೋಪ್‌ ಸಂಸ್ಥೆ

ಹಣಕಾಸಿನ ತೊಂದರೆ; ಕ್ರೀಡಾಪಟುಗಳ ಅಲೆದಾಟ

 ಭೀಮಸೇನ ಪರಸಾಪುರ ಹಾಗೂ ಮಂಜುನಾಥ ಚೌಡಕಿ ಸ್ವಂತ ಪರಿಶ್ರಮದಿಂದ ಹಾಗೂ ಪ್ರತಿಭೆಯಿಂದ ಏಷ್ಯನ್‌ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ ಇವರು ವಿದೇಶಕ್ಕೆ ಹೋಗಿಬರಲು ಬೇಕಾಗುವ ಪ್ರಯಾಣ ಭತ್ಯೆ ಸೇರಿದಂತೆ ವಿವಿಧ ಖರ್ಚುಗಳಿಗೆ ಹಣಕಾಸಿನ ತೊಂದರೆ ಕಾಡುತ್ತಿದೆ. ಭೀಮಸೇನ 2016ರಲ್ಲಿ ಹಾಂಕಾಂಗ್‌ನಲ್ಲಿ ಜರುಗಿದ್ದ ಏಷ್ಯನ್‌ ಜಂಪ್‌ರೋಪ್‌ ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದರು. ಆಗ ಹಣಕಾಸಿನ ಅಡಚಣೆಯಿಂದಾಗಿ ಟೂರ್ನಿಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಈ ಬಾರಿಯೂ ಅವರಿಗೆ ಇದೇ ಆತಂಕ ಕಾಡುತ್ತಿದೆ. ಇಬ್ಬರಿಗೂ ರಾಜ್ಯ ಜಂಪ್‌ರೋಪ್‌ ಸಂಸ್ಥೆ ಅಧ್ಯಕ್ಷ ವಿಶ್ವನಾಥ ಸಿ. ಹಿರೇಮಠ ಹಾಗೂ ಕಾರ್ಯದರ್ಶಿ ರಜಾಕ್‌ ಸೇರಿದಂತೆ ಅನೇಕರು ಸಂಸ್ಥೆ ವತಿಯಿಂದ ಆರ್ಥಿಕ ನೆರವು ನೀಡಿದ್ದಾರೆ. ಕೆಲವು ದಾನಿಗಳು ಪ್ರಾಯೋಜಕರು ಜಿಲ್ಲಾಡಳಿತ ನೆರವು ನೀಡುವ ಭರವಸೆ ನೀಡಿದ್ದು ಈ ಕಾರ್ಯ ವೇಗವಾಗಬೇಕಾದ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.