ಕುಷ್ಟಗಿ: ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾದ ಆರೋಪದ ಮೇಲೆ ಇಲ್ಲಿಯ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗದ ಕಿರಿಯ ಎಂಜಿನಿಯರ್ ರಿಜ್ವಾನಾ ಬೇಗಂ ಅವರನ್ನು ಅಮಾನತು ಮಾಡಿ ಜಿ.ಪಂ ಸಿಇಒ ರಘುನಂದನಮೂರ್ತಿ ಆದೇಶ ಹೊರಡಿಸಿದ್ದಾರೆ.
‘ಜ.22 ರಿಂದ ರಿಜ್ವಾನಾ ಬೇಗಂ ಅವರು ಕೆಲಸಕ್ಕೆ ಗೈರಾಗಿದ್ದ ಕುರಿತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವರದಿ ಸಲ್ಲಿಸಿದ್ದರು. ಇದರ ಅನ್ವಯ ಸಂಬಂಧಿಸಿದ ವಿಭಾಗೀಯ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ಅವರು ಶಿಸ್ತು ಪ್ರಾಧಿಕಾರದ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಶಿಫಾರಸು ಮಾಡಿದ್ದರು. ಈ ಅಂಶಗಳ ಆಧಾರದ ಮೇಲೆ ವಿಚಾರಣೆ ಕಾಯ್ದಿರಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅನ್ವಯ ಅವರನ್ನು ಅಮಾನತಿನಲ್ಲಿಡಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಚೆಕ್‌ಡ್ಯಾಂ ಹಗರಣ: ತಾಲ್ಲೂಕಿನಲ್ಲಿ ನಡೆದಿರುವ ಬಹುಕಮಾನು ಚೆಕ್ ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿದ ಬಹುಕೋಟಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೊಪ್ಪಳದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಗ್ರಾಮೀಣ ನೀರು ನೈರ್ಮಲ್ಯ ವಿಭಾಗದ ಕಿರಿಯ ಎಂಜಿನಿಯರ್ ರಿಜ್ವಾನಾ ಬೇಗಂ ಅವರೂ ಆರೋಪಿಯಾಗಿದ್ದಾರೆ.
ಪ್ರಕರಣ ದಾಖಲಾದ ನಂತರ ಕರ್ತವ್ಯಕ್ಕೆ ಗೈರು ಆಗಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.