ಕಲಬುರಗಿ: ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ, ನಿರಂತರ ಮತ್ತು ನಿರ್ದಿಷ್ಟ ಕುಡಿಯುವ ನೀರು ಪೂರೈಸುವ ‘ಜಲಜೀವನ ಮಿಷನ್’ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ.
‘ಮನೆ ಮನೆಗೆ ಗಂಗೆ’ ಘೋಷವಾಕ್ಯದೊಂದಿಗೆ ಮೊದಲ ಹಂತದ ಕಾಮಗಾರಿ ಚಾಲನೆಗೊಂಡಿದ್ದು, ತಾಂಡಾ ಸೇರಿ ಒಟ್ಟು 1,283 ಗ್ರಾಮಗಳನ್ನು ಯೋಜನೆಗೆ ಆಯ್ದುಕೊಳ್ಳಲಾಗಿದೆ. ಆದರೆ, ಯೋಜನೆಗೆ ಹಿನ್ನಡೆಯಾಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಕೋವಿಡ್ ಲಾಕ್‌ಡೌನ್, ಗ್ರಾಮಸ್ಥರ ವಿರೋಧ, ಜನಪ್ರತಿನಿಧಿಗಳು–ಮುಖಂಡರ ಅಸಹಕಾರ, ಕಾಮಗಾರಿ ಸಾಮಗ್ರಿಗಳ ದರ ಏರಿಕೆ, ಮೀಟರ್ ಅಳವಡಿಕೆ ಗೊಂದಲ, ನೀರಿನ ಖಾಸಗೀಕರಣದ ಆತಂಕ ಪ್ರಮುಖವಾದವು.
ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ 37.5ರಷ್ಟು ಅನುದಾನ ಕೊಡುತ್ತವೆ. ಉಳಿದ ಶೇ 25ರಷ್ಟು ಅನುದಾನದಲ್ಲಿ ಶೇ 15ರಷ್ಟು ಗ್ರಾಮ ಪಂಚಾಯಿತಿಗಳು ತಮ್ಮ ಪಂಚಾಯಿತಿಯ 15ನೇ ಹಣಕಾಸು ಆಯೋಗದಡಿ ಪಾವತಿಸಬೇಕು. ಉಳಿದ ಶೇ 10ರಷ್ಟನ್ನು ಗ್ರಾಮಸ್ಥರು ವಂತಿಗೆಯಾಗಿ ನೀಡಬೇಕು.
ಕರ್ನಾಟಕದಲ್ಲಿ 2024ರ ಒಳಗೆ ಮನೆ ಮನೆಗೆ ನೀರು ಪೂರೈಸುವ ಗುರಿಯಿಟ್ಟುಕೊಂಡು ಪ್ರತಿಯೊಬ್ಬರಿಗೆ ನಿತ್ಯ 55 ಲೀಟರ್ ಶುದ್ಧ ನೀರು ಒದಗಿಸಲಾಗುವುದು. ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ 386 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 172 ಕಾಮಗಾರಿ ಪೂರ್ಣಗೊಂಡಿದ್ದು, ಶೇ 44.56ರಷ್ಟು ಪ್ರಗತಿ ಇದೆ. 214 (ಶೇ 55.4ರಷ್ಟು) ಕಾಮಗಾರಿ ಬಾಕಿ ಇವೆ.
ಈ ಹಂತದಲ್ಲಿ 1,46,611 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಬೇಕಿತ್ತು. ಈವರೆಗೆ 81,548 ಮನೆಗಳ ಮುಂದೆ ನಲ್ಲಿ ಇದ್ದು, ಶೇ 55.62ರಷ್ಟು ಪ್ರಗತಿ ಸಾಧಿಸಿದೆ. ಏಪ್ರಿಲ್–ಮೇ ಅಂತ್ಯದ ಒಳಗೆ ನಿಗದಿತ ಗುರಿ ತಲುಪುವ ಬಗ್ಗೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
‘2024ರ ಒಳಗೆ ಮನೆ ಮನೆಗೆ ನೀರು ಪೂರೈಸುವ ಉದ್ದೇಶ ಇರಿಸಿಕೊಂಡು ಪ್ರತಿಯೊಬ್ಬರಿಗೆ ನಿತ್ಯ 55 ಲೀಟರ್ ನೀರು ಒದಗಿಸಲಾಗುವುದು. ತಾಂಡಾ ಸೇರಿ ಯೋಜನೆಗೆ 1,283 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 868 ಗ್ರಾಮಗಳಿವೆ. ಮೊದಲನೇ ಹಂತದಲ್ಲಿ 386 ಗ್ರಾಮಗಳಿದ್ದು, 174 ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ಇದಕ್ಕಾಗಿ ₹263.89 ಕೋಟಿ ವೆಚ್ಚವಾಗಿದೆ. ಏಪ್ರಿಲ್–ಮೇ ಒಳಗೆ ನಿಗದಿತ ಗುರಿ ತಲುಪುತ್ತೇವೆ ಎಂದು ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಹಮ್ಮದ್ ಅಜೀಜುದ್ದೀನ್ ಅಹಮದ್ ‘ಪ್ರಜಾವಾಣಿ‘ಗೆ ತಿಳಿಸಿದರು.
‘ತಪ್ಪು ಮಾಹಿತಿಯಿಂದ ಕೆಲ ಕಡೆ ಸ್ಥಳೀಯರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರ ಮನವೊಲಿಸಲು ಅಲ್ಲಿನ ಮುಖಂಡರ ನೆರವು ಪಡೆಯುತ್ತಿದ್ದೇವೆ. ಹೆಚ್ಚಿನ ದರದಲ್ಲಿ ನೀರಿನ ಕರ ವಿಧಿಸುವುದಿಲ್ಲ. ಈಗಾಗಲೇ ಗ್ರಾಮ ಪಂಚಾಯಿತಿಗೆ ಬಳಕೆದಾರರು ಸಲ್ಲಿಸುತ್ತಿರುವ ದರವನ್ನೇ ನೀಡುವಂತೆ ತಿಳಿಸಿದ್ದೇವೆ. ಬಳಕೆಯ ಮಿತಿ ಇರಲಿ ಎಂಬ ಕಾರಣಕ್ಕೆ ದಿನಕ್ಕೆ 55 ಲೀಟರ್ ನೀರು ನಿಗದಿಪಡಿಸಿದ್ದೇವೆ. ಅಗತ್ಯವಿದ್ದರೆ, ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜು, ಸಂಘಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಜಾನುವಾರುಗಳಿಗೂ ನೀರಿನ ಪೂರೈಸುತ್ತೇವೆ’ ಎಂದು ಅವರು ವಿವರಿಸಿದರು.
ನೀರಿನ ಖಾಸಗೀಕರಣ: ‘ನೀರನ್ನು ಮುಂದಿಟ್ಟುಕೊಂಡು ಬಡವರನ್ನು ಶೋಷಿಸುವ ಹೊಸ ಯೋಜನೆ ಇದು. ಕುಡಿಯುವ ನೀರು ಈವರೆಗೂ ಸಾರ್ವಜನಿಕರ ಸ್ವತ್ತಾಗಿತ್ತು. ಇನ್ನು ಮುಂದೆ ಅದು ಬೇರೆಯವರ ಪಾಲಾಗಲಿದೆ. ನೈಸರ್ಗಿಕ ಸಂಪತ್ತು ಖಾಸಗಿ ಒಡೆಯನದಾಗಲಿದೆ. ನದಿ. ಕೆರೆ, ಬಾವಿ, ಕೊಳವೆ ಬಾವಿಯಂತಹ ಜಲಮೂಲಗಳು ಖಾಸಗಿ ನಿಯಂತ್ರಣಕ್ಕೆ ಹೋಗುತ್ತವೆ. ಯಾರಿಗೋ ಲಾಭ ತಂದುಕೊಡಲು ಸರ್ಕಾರ ಮುತುವರ್ಜಿಯಿಂದ ಕಾರ್ಯಗತಗೊಳಿಸುತ್ತಿದೆ’ ಎಂದು ಅಖಿಲ ಭಾರತ ರೈತ - ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ಬಿ.ಮಹೇಶ್ ತಿಳಿಸಿದರು.
‘ಟೆಂಡರ್ ಪಡೆದ ವೇಳೆಗಿಂತ ಈಗ ಎಲ್ಲ ಸಾಮಗ್ರಿಗಳ ದರ ಹೆಚ್ಚಳವಾಗಿದೆ. ಪೈಪ್‌ಲೈನ್, ಮೀಟರ್, ಬೋರ್, ಪೈಪ್ ಜೋಡಣೆಯಂತಹ ವಸ್ತುಗಳ ದರ ಶೇ 20–22ರಷ್ಟು ಏರಿಕೆಯಾಗಿದೆ. ಇದು ನಮಗೆ ಆರ್ಥಿಕ ಹೊರೆಯಾಗುತ್ತಿದೆ. ಸರ್ಕಾರ ಡಿಎಸ್‌ಆರ್ ಬದಲಿಸಿದರೆ ಅನುಕೂಲವಾಗುತ್ತದೆ’ ಎಂದು ಗುತ್ತಿಗೆದಾರ ಅಂಬರೀಶ ಪಾಟೀಲ ತಿಳಿಸಿದರು.
ಜೇವರ್ಗಿ: ₹43 ಕೋಟಿ ಅನುದಾನ ಬಿಡುಗಡೆ
ಜೇವರ್ಗಿ: ಯಡ್ರಾಮಿ ಮತ್ತು ಜೇವರ್ಗಿ ತಾಲ್ಲೂಕುಗಳ 52 ಗ್ರಾಮಗಳು ಯೋಜನೆಗೆ ಆಯ್ಕೆಯಾಗಿದ್ದು, ಈಗಾಗಲೇ ನೀರು ಸರಬುರಾಜು ಯೋಜನೆಗಳ ಕಾಮಗಾರಿಗಳು ಶುರುವಾಗಿವೆ.
ಯೋಜನೆಯ ಸಾಕಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ₹43 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೊಳವೆಬಾವಿ, ಭೀಮಾ ನದಿ, ಕೆರೆ ಕಟ್ಟೆಗಳು, ಹಳ್ಳಗಳು ಸೇರಿ ಇತರೆ ಜಲ ಮೂಲಗಳಿಂದ ಮನೆಗಳಿಗೆ ನೀರು ಸರಬುರಾಜು ಪೈಪ್ ಲೈನ್ ಅಳವಡಿಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿನಾಥ ಕಾರಭಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕುಡಿಯುವ ನೀರಿನ ಕಾಮಗಾರಿಗಳ ಅಂದಾಜು ವೆಚ್ಚ ತಯಾರಿಸಿದ ನಂತರ ಸಮೀಕ್ಷೆ ನಡೆಸಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ನಲ್ಲಿಗಳಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಶಾಲೆ, ಅಂಗನವಾಡಿ ಕೇಂದ್ರಗಳಿಗೂ ಅವಶ್ಯಕವಿದ್ದರೆ ನೀರು ಪೂರೈಸಲಾಗುವುದು. 2024ರೊಳಗೆ ಯೋಜನೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರ ನಿರ್ದೇಶಿಸಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ನಡೆಸಲಾಗುವುದು ಎಂದು ಮಲ್ಲಿನಾಥ ಕಾರಭಾರಿ ತಿಳಿಸಿದರು.
18 ಗ್ರಾಮಗಳು ಆಯ್ಕೆ
ಯಡ್ರಾಮಿ; ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ ಜಮಖಂಡಿ, ಮಳ್ಳಿ, ಕಾಚಾಪುರ, ಸುಂಬಡ, ವಡಗೇರಾ, ಬಳಬಟ್ಟಿ, ಕುಕನೂರ ಸೇರಿ 18 ಗ್ರಾಮದಲ್ಲಿ ಜನ ಜೀವನ ಮಿಷನ್ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಡೆಯುತ್ತಿದ್ದು, ಮೂರು ಹಂತಗಳು ಯೋಜನೆ ಕಾರ್ಯಗತ ಗೊಳಿಸುವಂತೆ ಸೂಚನೆ ಇದೆ ಎನ್ನುತ್ತಾರೆ ತಾ.ಪಂ ಇಒ ಮಹಾಂತೇಶ ಪುರಾಣಿಕ.
ಒಂದೇ ಗ್ರಾಮದಲ್ಲಿ ಯೋಜನೆ ಪೂರ್ಣ
ಅಫಜಲಪುರ: ತಾಲ್ಲೂಕಿನಲ್ಲಿ ಮನೆ ಮನೆಗೆ ಗಂಗೆ ಯೋಜನೆಯಡಿ 130 ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ, 2 ಹಂತಗಳಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತದೆ. 1ನೇ ಹಂತದಲ್ಲಿ 35 ಗ್ರಾಮಗಳು ಆಯ್ಕೆಯಾಗಿವೆ. ‘5 ಗ್ರಾಮಗಳಲ್ಲಿ ಯೋಜನೆ ಸ್ಥಗಿತವಾಗಿದೆ. ಮುಂದೆ ದಿನಗಳಲ್ಲಿ ಮತ್ತೆ ಆರಂಭಿಸಲಾಗುವುದು. ಒಂದು ಗ್ರಾಮದಲ್ಲಿ ಕಾಮಗಾರಿ ಮುಗಿದಿದ್ದು, ಉಳಿದೆಡೆ ಪ್ರಗತಿಯಲ್ಲಿದೆ. ದೇವಲ ಗಾಣಗಾಪುರಕ್ಕೆ ₹ 6.68 ಕೋಟಿ ಮಂಜೂರಾಗಿದ್ದು, ಕೆಲ ದಿನಗಳಲ್ಲಿ ಟೆಂಡರ್ ಆಗಲಿದೆ‘ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನಿರ್ಮಲ್ಯ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸರ್ವಜ್ಞ ಪೂಜಾರಿ.
ನೀರಿನ ಮೂಲಗಳ ಅಭಾವ, ಅಸಮರ್ಪಕ ಪೈಪ್‌ಲೈನ್ ಅಳವಡಿಕೆ, ಗ್ರಾಮಸ್ಥರ ವಿರೋಧದಿಂದಾಗಿ ಉಡಚಣ, ಕರ್ಜಗಿ, ಮಾಶಾಳ ಸೇರಿ 5 ಗ್ರಾಮಗಳಲ್ಲಿ ಕಾಮಗಾರಿ ನಿಂತಿದೆ. 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಒಂದಿಲ್ಲ ಒಂದು ಕಾರಣಗಳಿಂದ ಕಾರ್ಯಗತ ಆಗುತ್ತಿಲ್ಲ. 50ಕ್ಕೂ ಹೆಚ್ಚು ನೀರಿನ ಘಟಕಗಳು ಕೆಟ್ಟಿವೆ. ಆದರೂ ಸರ್ಕಾರ ಯೋಜನೆಗೆ ಸಾಕಷ್ಟು ಹಣ ಪೋಲು ಮಾಡುತ್ತಿದೆ. ಯೋಜನೆಯ ಹಣ ದುರ್ಬಳಕೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎನ್ನುತ್ತಾರೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶರಣು ಕುಂಬಾರ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ಜಮಾದಾರ್.
ಕೆಲಸ ಮುಗಿದರೂ ನೀರು ಬರುತ್ತಿಲ್ಲ
ಚಿಂಚೋಳಿ: ತಾಲ್ಲೂಕಿನಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ 64 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 2 ಕಾಮಗಾರಿ ಆರಂಭಿಸಬೇಕಿದೆ. 28 ಕಾಮಗಾರಿ ಪೂರ್ಣಗೊಂಡಿವೆ 34 ಕಾಮಗಾರಿ ಪ್ರಗತಿಯಲ್ಲಿವೆ.
ಜಲ ಜೀವನ ಮಿಷನ್ ಯೋಜನೆ ಅನುಷ್ಠಾನಕ್ಕೆ ಎಲ್ಲೆಂದರಲ್ಲಿ ರಸ್ತೆ ಅಗೆಯಲಾಗಿದೆ. ಆದರೆ, ರಸ್ತೆ ಪುನಃ ನಿರ್ಮಿಸಲಾಗುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ. ತಾಲ್ಲೂಕಿನ ಚಂದ್ರಂಪಳ್ಳಿಯಲ್ಲಿ ಕೆಲಸ ಮುಗಿದಿದೆ. ಆದರೆ, ನಲ್ಲಿಗೆ ನೀರು ಬರುತ್ತಿಲ್ಲ ಎಂದು ಯುವ ಮುಖಂಡ ವೀರಭದ್ರ ಬಳೇರ್ ದೂರುತ್ತಾರೆ. ‘ಪ್ರತಿ ವ್ಯಕ್ತಿ 55 ಲೀಟರ್ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯಡಿ ಎಲ್ಲರಿಗೂ ಶುದ್ಧ ನೀರು ಪೂರೈಸಲಾಗುವುದು’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ ಕುಲಕರ್ಣಿ ತಿಳಿಸಿದರು.
*ಈ ಯೋಜನೆಯಡಿ ಪ್ರತಿ ಮನೆಗೆ ₹8 ಸಾವಿರದಿಂದ ₹20 ಸಾವಿರದ ವರೆಗೆ ಖರ್ಚು ಮಾಡಲು ಅವಕಾಶ ಇದೆ. ಗ್ರಾಮದಲ್ಲಿನ ಮನೆಗಳು ಅಂತರ ಮತ್ತು ಸರಬರಾಜಿನ ಜಲ ಮೂಲಗಳು ದೂರ ಇದ್ದರೇ ಖರ್ಚು ಹೆಚ್ಚಾಗುತ್ತದೆ
–ಮಹಮ್ಮದ್ ಅಜೀಜುದ್ದೀನ್ ಅಹಮದ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್
*ಮನೆ ಮನೆಗೆ ಗಂಗೆ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉತ್ತಮ ಯೋಜನೆ. ಇದಕ್ಕೆ ಜನರು ಸಹಕರಿಸಿ, ಅನುಷ್ಠಾನವಾದಾಗ ಮಾತ್ರ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸಿಗುತ್ತದೆ.
–ಶೈಲೇಶ್ ಈರಣ್ಣ ಗುಣಾರಿ, ಬಿಜೆಪಿ ಮಂಡಲ ಅಧ್ಯಕ್ಷ ಅಫಜಲಪುರ
*ಗ್ರಾಮೀಣ ಭಾಗದ ಬಡವರು ನಿತ್ಯ ಕೂಲಿ ಮಾಡಿ ₹100 ಗಳಿಸಿ ಜೀವನ ನಿರ್ವಹಣೆ ಮಾಡುವುದು ಕಷ್ಟ ಇದೆ. ಅಂತದರಲ್ಲಿ ನಿತ್ಯ ನೂರಾರು ರೂಪಾಯಿ ನೀರಿನ ಬಿಲ್ ಕಟ್ಟಿ ಬದುಕುವುದಾದರೂ ಹೇಗೆ?
ಎಸ್. ಬಿ. ಮಹೇಶ್, ಜಿಲ್ಲಾ ಕಾರ್ಯದರ್ಶಿ, ಅಖಿಲ ಭಾರತ ರೈತ -ಕೃಷಿ ಕಾರ್ಮಿಕರ ಸಂಘಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.