ಕೊಪ್ಪಳ: ‘ಕನಕದಾಸರು ನಾಡು ಕಂಡ ಶ್ರೇಷ್ಠ ಕವಿಗಳಾಗಿದ್ದು, ಅವರು ವಿಚಾರಗಳು ಅಜರಾಮರ‘ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಕನಕದಾಸರು ಮಹಾರಾಜರಾಗಿದ್ದು, ಸಿರಿ, ಸಂಪತ್ತು ಎಲ್ಲವನ್ನು ತ್ಯಾಗಮಾಡಿ ಸಮಾಜದ ಸುಧಾರಣೆಗಾಗಿ ಶ್ರಮಿಸಿದ್ದಾರೆ. ವಿಶೇಷವಾಗಿ ಕೋಪವನ್ನು ಬಿಟ್ಟು, ನಗು ಮುಖದೊಂದಿಗೆ ಎಲ್ಲರ ಮನಸ್ಸನ್ನು ಗೆದ್ದರು. ಜನಸಾಮಾನ್ಯರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ದಾಸ ಸಾಹಿತ್ಯ, ಭಕ್ತಿ ಪಂಥದ ಮೂಲಕ ಮನುಕುಲಕ್ಕೆ ಅತ್ಯುತ್ತಮ ಸಂದೇಶವನ್ನು ಕನಕದಾಸರು ಕೊಟ್ಟಿದ್ದಾರೆ. ಮಾನವನ ಒಳಿತಿಗಾಗಿ ಅವರ ಕೊಡುಗೆಯನ್ನು ಸ್ಮರಿಸಲೇಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ ‘ಕನಕದಾಸರ ಬದುಕು ಹಾಗೂ ತತ್ವಗಳು ಅಪಾರವಾಗಿವೆ. ನಗರದ ಕನಕದಾಸ ವೃತ್ತದಲ್ಲಿ ನಿರ್ಮಿಸಲಾಗುತ್ತಿರುವ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಜೊತೆಗೆ ಜಯಂತಿ ಆಚರಣೆ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಗುವುದು. ಎಲ್ಲ ಮಹನೀಯರು, ಸಂತರು, ಶರಣರು ಸಮಾಜದ ಒಳಿತಿಗಾಗಿಯೇ ತಮ್ಮ ಸಂದೇಶಗಳನ್ನು ನೀಡಿರುವುದರಿಂದ, ಯಾವುದೇ ಮಹನೀಯರ ಜಯಂತಿ ಆಚರಣೆಗಳು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು’ ಎಂದರು.
ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ್, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಬಿ ನಾಗರಾಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ಸಮಾಜದ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಮುಖಂಡರಾದ ಮಂಜುನಾಥ ಅಂಗಡಿ, ಆನಂದ ಕಿನ್ನಾಳ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.