ADVERTISEMENT

ಮಾ.2 ರಿಂದ ಕನಕಗಿರಿ ಉತ್ಸವ: ಸಿಎಂ ಚಾಲನೆ: ಶಿವರಾಜ ತಂಗಡಗಿ‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 4:33 IST
Last Updated 19 ಫೆಬ್ರುವರಿ 2024, 4:33 IST
ಕನಕಗಿರಿಯಲ್ಲಿ ಮಾ.2 ಮತ್ತು 3 ರಂದು ನಡೆಯುವ ಕನಕಗಿರಿ ಉತ್ಸವದ ಜಾಗವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ‌ ವೀಕ್ಷಿಸಿ ಅಧಿಕಾರಿಗಳ ಜತೆ ಚರ್ಚಿಸಿದರು
ಕನಕಗಿರಿಯಲ್ಲಿ ಮಾ.2 ಮತ್ತು 3 ರಂದು ನಡೆಯುವ ಕನಕಗಿರಿ ಉತ್ಸವದ ಜಾಗವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ‌ ವೀಕ್ಷಿಸಿ ಅಧಿಕಾರಿಗಳ ಜತೆ ಚರ್ಚಿಸಿದರು   

ಕನಕಗಿರಿ: ‘ಮಾರ್ಚ್ 2 ಮತ್ತು 3 ರಂದು ಕನಕಗಿರಿ‌ ಉತ್ಸವ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ’ ಎಂದು ಜಿಲ್ಲಾ‌ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ‌ ಹೇಳಿದರು.

ಪಟ್ಟಣದ‌ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ಉತ್ಸವ ನಡೆಯಲಿರುವ ಜಾಗವನ್ನು (ಪಾತ್ರದ ಕುಟುಂಬದ ಹೊಲ) ಶನಿವಾರ ವೀಕ್ಷಣೆ ಮಾಡಿ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದರು.

‘ಉಪ ಮುಖ್ಯಮಂತ್ರಿ, ಇತರೆ ಸಚಿವರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹2.50 ಕೋಟಿ ಬಿಡುಗಡೆಯಾಗಿದೆ, ₹1 ಕೋಟಿ ಅನುದಾನ ‌ನೀಡುವಂತೆ ಪ್ರವಾಸೋದ್ಯಮ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ. ಒಟ್ಟು ಎರಡು ವೇದಿಕೆ ನಿರ್ಮಾಣ ಮಾಡಲಿದ್ದು ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ಕಲಾವಿದರಿಗೆ ಆದ್ಯತೆ‌ ನೀಡಲಾಗುವುದು’ ಎಂದರು.

ADVERTISEMENT

‘ಫೆ.‌27ರಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪತ್ರಕರ್ತರ ನಡುವೆ ಕ್ರಿಕೆಟ್ ಪಂದ್ಯ ನಡೆಯಲಿದೆ, ಉತ್ಸವದಲ್ಲಿ ದೇಶಿಯ ಕ್ರೀಡೆಗಳಿಗೆ ಆದ್ಯತೆ‌ ನೀಡಲಾಗಿದ್ದು
ಫೆ.28 ಹಾಗೂ 29 ರಂದು ಕುಸ್ತಿ, ಕಬಡ್ಡಿ, ವಾಲಿಬಾಲ್ ಪಂದ್ಯ ಆಯೋಜಿಸಲಾಗಿದೆ, ಹೊನಲು ಬೆಳಕಿನ ವಾಲಿಬಾಲ್ ನಡೆಸಲು ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಾರ್ಚ್ 1 ರಂದು ಮ್ಯಾರಥಾನ್, 2 ರಂದು ಕನಕಾಚಲಪತಿ ಮೂರ್ತಿ ಜತೆಗೆ ವಿವಿಧ ಕಲಾತಂಡಗಳು ಹಾಗೂ ಸ್ತಬ್ದಚಿತ್ರಗಳ ಮೆರವಣಿಗೆ ನಡೆಯಲಿದ್ದು ಸಂಜೆ ಉತ್ಸವ ಉದ್ಘಾಟ‌ನೆಗೊಳ್ಳಲಿದೆ. 3 ರಂದು ಗ್ರಾಮೀಣ ಬಂಡಿ ಉತ್ಸವ ಹಾಗೂ ಎರಡು‌ ದಿನಗಳ ಕಾಲ ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿ ನಡೆಯಲಿದೆ’ ಎಂದು ತಿಳಿಸಿದರು.

ಉತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು, ದೇಗುಲ, ವೆಂಕಟಪತಿ ಭಾವಿ, ಪುಷ್ಕರಣಿ, ಕನಕಾಚಲಪತಿ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗುವುದು. ವಿವಿಧ‌ ಇಲಾಖೆಗಳಿಂದ ವಸ್ತು ಪ್ರದರ್ಶನ ಹಾಗೂ ಫಲಪುಷ್ಪಾ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು.

ಜನರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಲಾಗಿದೆ ಉತ್ಸವ ಹಾಗೂ ಕನಕಾಚಲಪತಿ ಜಾತ್ರಾ ಮಹೋತ್ಸವ ಮುಗಿಯುವವರೆಗೆ ವಿದ್ಯುತ್ ಕಡಿತವಾಗದಂತೆ ಜೆಸ್ಕಾಂ ಇಲಾಖೆಯವರು ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಉತ್ಸವದ ಮುಖ್ಯ ವೇದಿಕೆ ಬಳಿ ಇಂಟರ್‌ನೆಟ್, ಫ್ಯಾಕ್ಸ್‌ಗಳೊಂದಿಗೆ ಮಾಹಿತಿ‌ ಕೇಂದ್ರ ತೆರೆಯಲಾಗುವುದು, ಉತ್ಸವದ ಪ್ರಚಾರ ಹಾಗೂ ನೇರ ಪ್ರಸಾರಕ್ಕಾಗಿ ಜಿಲ್ಲಾ ಎನ್‌ಐಸಿಯಿಂದ ಹೊಸ ಆ್ಯಪ್ ಸಿದ್ದಪಡಿಸಬೇಕು ಎಂದು ಸೂಚಿಸಿದರು.

ತೇರು ಬೀದಿ ರಸ್ತೆ ಪೂರ್ಣಗೊಂಡರೆ ಹನುಮಪ್ಪ ದೇಗುಲದಿಂದ ಅಥವಾ ಡಾ.‌ಬಿ.‌ಆರ್. ಅಂಬೇಡ್ಕರ್ ವೃತ್ತದಿಂದ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಒಟ್ಟು 18 ಸಮಿಗಳು ರಚಿಸಲಾಗಿದ್ದು ಆಯಾ ಸಮಿತಿಗಳು ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ‌ ನಿರ್ವಹಿಸಬೇಕು,ಅಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡಿ ಉತ್ಸವ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಪಟ್ಟಣದ ರಾಜಬೀದಿಯ ಡಾಂಬರೀಕರಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಇಲ್ಲದಿದ್ದರೆ ಕಠಿಣ‌ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಿಯು ಕಾಲೇಜು ಮೈದಾನ, ಎಪಿಎಂಸಿ, ವೆಂಕಟಪತಿ ಬಾವಿ, ಕನಕಾಚಲಪತಿ ದೇಗುಲ, ಹೆಲಿಪ್ಯಾಡ್ ನಿಯೋಜಿತ ಸ್ಥಳಗಳಿಗೆ ಅಧಿಕಾರಿಗಳ ಜತೆ ಬೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ‌, ಪ್ರಚಾರ ಸಮಿತಿ ಅಧ್ಯಕ್ಷ ವೀರೇಶ ಸಮಗಂಡಿ, ವಕ್ತಾರ ಶರಣಬಸಪ್ಪ ಭತ್ತದ, ಸಿದ್ದಪ್ಪ ನೀರಲೂಟಿ, ಬಸಂತಗೌಡ, ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾ.ಪಂ ಪ್ರಭಾರ ಇ.ಒ ಚಂದ್ರಶೇಖರ ಕಂದಕೂರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಹಾಜರಿದ್ದರು.

ಉತ್ಸವಕ್ಕೆ ಆಗಮಿಸುವ ಜನರ ಅನುಕೂಲಕ್ಕೆ 25 ಬಸ್ ಬಿಡಲಾಗುವದು ಹಾಗೂ ಅನ್ಯ ತಾಲ್ಲೂಕಿನ ಜನರಿಗೂ ಬಸ್ ಸೌಲಭ್ಯ ಕಲ್ಪಿಸಲಾಗುವುದು. ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ ಎರಡು ದಿನಗಳ ಕಾಲ ಎಪಿಎಂಸಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು
– ಶಿವರಾಜ ತಂಗಡಗಿ‌ ಜಿಲ್ಲಾ‌ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.