ADVERTISEMENT

ಕನಕಗಿರಿ | ₹10.26 ಕೋಟಿ ಕಾಮಗಾರಿಗೆ ಚಾಲನೆ

ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಿಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 15:32 IST
Last Updated 23 ಜೂನ್ 2024, 15:32 IST
ಕನಕಗಿರಿ ಸಮೀಪದ ಗುಡದೂರುದಿಂದ ಮಲ್ಲಾಪುರ ಗ್ರಾಮದ ರಸ್ತೆಯಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಭಾನುವಾರ ಭೂಮಿ ಪೂಜೆ ನೆರವೇರಿಸಿದರು
ಕನಕಗಿರಿ ಸಮೀಪದ ಗುಡದೂರುದಿಂದ ಮಲ್ಲಾಪುರ ಗ್ರಾಮದ ರಸ್ತೆಯಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಭಾನುವಾರ ಭೂಮಿ ಪೂಜೆ ನೆರವೇರಿಸಿದರು   

ಕನಕಗಿರಿ: ತಾಲ್ಲೂಕಿನ ಗೌರಿಪುರ, ಹುಲಿಹೈದರ ಹಾಗೂ ಜೀರಾಳ ಸೇರಿದಂತೆ ಇತರೆ ಗ್ರಾಮಗಳಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಷೇತ್ರದ ವಿವಿಧ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಉನ್ನತೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಗುಡದೂರು ಗ್ರಾಮದಲ್ಲಿ ₹8.24 ಕೋಟಿ ಮೊತ್ತದ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿಗೆ ಭಾನುವಾರ ಪೂಜೆ ಸಲ್ಲಿಸಿ  ಮಾತನಾಡಿದರು.

ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ಸುಗಮ ಸಂಚಾರಕ್ಕಾಗಿ ಗುಡದೂರು, ಕರಡೋಣ, ಬುನ್ನಟ್ಟಿ, ಮಲ್ಲಾಪುರ ಸೇರಿದಂತೆ ಈ ಭಾಗದ ಗ್ರಾಮಗಳ ಬಹು ವರ್ಷಗಳ ಬೇಡಿಕೆಯನ್ನು ಕೋಟಿಗಟ್ಟಲೆ ಅನುದಾನ ನೀಡುವ ಮೂಲಕ ಈಡೇರಿಸಲಾಗಿದೆ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಗುಣಮಟ್ಟದ ಕಡೆಗೆ ಕಾಳಜಿ ವಹಿಸಿ ಉತ್ತಮ ಕೆಲಸ ಮಾಡಬೇಕೆಂದು ಸೂಚಿಸಿದರು.

ADVERTISEMENT

ತುಂಗಾಭದ್ರ ಎಡದಂಡೆ ಕಾಲುವೆ ಮೂಲಕ ಜೀರಾಳ ಹಾಗೂ ಇತರೆ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೊರೈಸಲು ₹33 ಕೋಟಿ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜೀರಾಳ ಗ್ರಾಮದಲ್ಲಿ ಕನಕದಾಸ ಹಾಗೂ ಕನಕಾಪುರದಲ್ಲಿ ಬೀರಲಿಂಗೇಶ್ವರ ಸಮುದಾಯ ಭವನ, ಗೌರಿಪುರದಲ್ಲಿ ದ್ಯಾಮಲಾಂಬಿಕಾದೇವಿ ಹಾಗೂ ಹಣವಾಳ ಗ್ರಾಮದಲ್ಲಿ ಶರಣಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ತಲಾ ₹25 ಲಕ್ಷ ರೂಪಾಯಿ, ಜೀರಾಳ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ದಾರಕ್ಕೆ ₹15 ಲಕ್ಷ ರೂಪಾಯಿ ಅನುದಾನ, ಬೈಲಕ್ಕುಂಪುರ ಗ್ರಾಮದಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ₹1.4 ಕೋಟಿ ರೂಪಾಯಿ ಮತ್ತು ಕನ್ನೇರಮಡಗು ಗ್ರಾಮದಲ್ಲಿ ₹70 ಲಕ್ಷ ರೂಪಾಯಿ ಮೊತ್ತದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ ಈ ಎಲ್ಲಾ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

ವರ್ನ್ ಖೇಡ ಗ್ರಾಮದಿಂದ ಕನಕಗಿರಿ-ತಾವರಗೇರಾ ಮುಖ್ಯ ರಸ್ತೆ ವರೆಗೆ ಡಾಂಬರೀಕರಣಕ್ಕೆ ₹2 ಕೋಟಿ ರೂಪಾಯಿ, ವಡಕಿ ಗ್ರಾಮದಿಂದ ನವಲಿ-ಕನಕಗಿರಿ ವರೆಗೆ ರಸ್ತೆ ಡಾಂಬರೀಕರಣಕ್ಕೆ ₹1.24 ಕೋಟಿ ರೂಪಾಯಿ, ಉಮಳಿ ಕಾಟಾಪುರದಿಂದ ಗುಡದೂರು-ಕೆ. ಮಲ್ಲಾಪುರ ಗ್ರಾಮದ ವರೆಗೆ ರಸ್ತೆ ಡಾಂಬರೀಕರಣಕ್ಕೆ ₹1.50 ಕೋಟಿ, ಜೀರಾಳದಿಂದ ಹೊಸ ಜೀರಾಳ ಕಲ್ಗುಡಿ ವರೆಗೆ ರಸ್ತೆ ಡಾಂಬರೀಕರಣಕ್ಕೆ ₹1.90 ಕೋಟಿ ರೂಪಾಯಿ ಸೇರಿದಂತೆ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ₹5ರಿಂದ ₹6 ಕೋಟಿ ಅನುದಾನ ಮಂಜೂರಿಯಾಗಿದೆ ಎಂದು ವಿವರಿಸಿದರು.

ಕನಕಾಪುರದಿಂದ ವನಗಡ್ಡಿ ಹಾಗೂ ವರ್ನ್ ಖೇಡ ಗ್ರಾಮದ ರಸ್ತೆ ಡಾಂಬರೀಕರಣಕ್ಕೂ ಮುಂದಿನ ದಿನಗಳಲ್ಲಿ ಅನುದಾನ ನೀಡಲಾಗುವುದು. ಶಾಲೆ ದುರಸ್ತಿ, ಹೊಸ ಕೊಠಡಿಗಳ ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ತರಗತಿ ಆರಂಭ ಹಾಗೂ ಕಂಪ್ಯೂಟರ್ ಒದಗಿಸಲು ತಾಲ್ಲೂಕಿಗೆ 25 ಕೋಟಿ ರೂಪಾಯಿ ನೀಡಲಾಗಿದೆ ಎಂದು ತಿಳಿಸಿದರು.

ಅಭಿವೃದ್ದಿ ವಿಷಯದಲ್ಲಿ ತಾವು ಪಕ್ಷ ರಾಜಕಾರಣ ಮಾಡುವುದಿಲ್ಲ, ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನಿರೀಕ್ಷೆ ಮೀರಿ ಗೆಲುವಿಗೆ ಕಾರಣರಾಗಿದ್ದಾರೆ, ಅವರ ಪ್ರೀತಿ, ವಿಶ್ವಾಸಕ್ಕೆ ಸದಾ ಋಣಿಯಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ ಮಾತನಾಡಿ 'ಅಭಿವೃದ್ದಿ ಎಂದರೆ ಸಚಿವ ಶಿವರಾಜ ತಂಗಡಗಿ, ತಂಗಡಗಿ ಅಂದರೆ ಕ್ಷೇತ್ರದ ಅಭಿವೃದ್ದಿ ಎನ್ನುವಂತ ವಾತಾವರಣ ಕ್ಷೇತ್ರದಲ್ಲಿದೆ. ಒಂದೇ ವರ್ಷದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ತಂದಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಮುಖಂಡ ಸಿದ್ದಪ್ಪ ನೀರ್ಲೂಟಿ ಮಾತನಾಡಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ವಿಜಯಕುಮಾರ,  ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ರಾಜಶೇಖರ, ಗ್ರೇಡ್-2 ತಹಶೀಲ್ದಾರ್ ವಿ. ಎಚ್. ಹೊರಪೇಟೆ, ಪಿಐ ಫೈಜುಲ್ಲಾ, ಅಧಿಕಾರಿಗಳಾದ ವಿಜಯಕುಮಾರ, ರಾಜೇಂದ್ರಪ್ರಸಾದ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀ ಬಸವರಾಜ ಕಟ್ಟಿಮನಿ( ಜೀರಾಳ), ಶರಣಮ್ಮ ಕೆಲ್ಲೂರು( ಹುಲಿಹೈದರ), ಹಿರೇ ಹನುಮಂತಪ್ಪ ( ಕರಡೋಣ),ರೇಣುಕಮ್ಮ ( ಮುಸಲಾಪುರ), ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ವಿರುಪಣ್ಣ ಕಲ್ಲೂರು, ಪ್ರಮುಖರಾದ ಶರಣಬಸಪ್ಪ ಭತ್ತದ, ವೀರೇಶ ಸಮಗಂಡಿ, ಹನುಮೇಶ ಮುರುಡಿ, ಬಸಂತಗೌಡ, ರಾಮನಗೌಡ ಬುನ್ನಟ್ಟಿ ಹೊನ್ನೂರುಸಾಬ ಮೇಸ್ತ್ರೀ, ಮಲ್ಲಿಕಾರ್ಜುನಗೌಡ, ಗಂಗಾಧರಗೌಡ, ನಾಗಪ್ಪ ಹುಗ್ಗಿ ಇತರರು ಇದ್ದರು.

ಕನಕಾಪುರ, ಜೀರಾಳ, ಗುಡದೂರು, ಬೈಲಕ್ಕುಂಪುರ, ಗೌರಿಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸಚಿವ ತಂಗಡಗಿ ಅವರು ಜನರಿಂದ ಆಹವಾಲು ಸ್ವೀಕರಿಸಿದರು.

ಕನಕಗಿರಿ ಸಮೀಪದ ಗುಡದೂರುದಿಂದ ಮಲ್ಲಾಪುರ ಗ್ರಾಮದ ರಸ್ತೆಯಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಭಾನುವಾರ ಭೂಮಿ ಪೂಜೆ ನೆರವೇರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.