ADVERTISEMENT

ಕನಕಗಿರಿ | ವೈದ್ಯರು, ಸಿಬ್ಬಂದಿ ಕೊರತೆ

ನಿಯೋಜನೆ ಮೇಲೆ ನಿಂತ ಸಮುದಾಯ ಆರೋಗ್ಯ ಕೇಂದ್ರ!

ಮೆಹಬೂಬ ಹುಸೇನ
Published 23 ಜೂನ್ 2024, 4:55 IST
Last Updated 23 ಜೂನ್ 2024, 4:55 IST
ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗಾಗಿ ಜನರು ಮುಗಿಬಿದ್ದಿರುವುದು
ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗಾಗಿ ಜನರು ಮುಗಿಬಿದ್ದಿರುವುದು    

ಕನಕಗಿರಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವು ವೈದ್ಯರು, ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು ನಿಯೋಜನೆ ಮೇಲೆ ನಡೆಯುತ್ತಿದೆ. ಕನಕಗಿರಿ ತಾಲ್ಲೂಕು ಕೇಂದ್ರ ಹಾಗೂ ವಿಧಾನಸಭಾ ಕ್ಷೇತ್ರವಾಗಿದ್ದು ನೀರಾವರಿ ಸೌಲಭ್ಯವಿಲ್ಲದೆ ಜನರು ಮಳೆ ನಂಬಿ ಕೃಷಿ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದು ಸೂಕ್ತ ಚಿಕಿತ್ಸೆಗಾಗಿ ಸಾಲ ಮಾಡಬೇಕಾಗಿದೆ. ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 28 ಗ್ರಾಮಗಳು ಬರುತ್ತಿದ್ದು ನಿತ್ಯ ನೂರಾರು ರೋಗಿಗಳು ಒಳ ಹಾಗೂ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ಒಟ್ಟು ನಾಲ್ಕು ಜನ ತಜ್ಞ ವೈದ್ಯರು ಇರಬೇಕಾಗಿದ್ದು, ಈ ಪೈಕಿ ಪ್ರಸೂತಿ, ಮಕ್ಕಳ ತಜ್ಞ ಹಾಗೂ ಅರವಳಿಕೆ ತಜ್ಞರು ಮತ್ತು ಕರ್ತವ್ಯ ನಿರತ ವೈದ್ಯರು ಇಲ್ಲ. ಹೀಗಾಗಿ ಇಬ್ಬರು ಎಂಬಿಬಿಎಸ್ ಹಾಗೂ ಬಿಎಎಂಎಸ್ ವೈದ್ಯರು ನಿಯೋಜನೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ನಿತ್ಯ 250-300 ಜನ ಹೊರರೋಗಿಗಳು ಹಾಗೂ 50 ಜನರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಒಬ್ಬರೇ ವೈದ್ಯರು ಆಸ್ಪತ್ರೆಯಲ್ಲಿರುವುದರಿಂದ ಜ್ವರ, ಗರ್ಭಿಣಿಯರು ಹಾಗೂ ಇತರೆ ರೋಗಿಗಳ ತಪಾಸಣೆಗೆ ಹರಸಾಹಸ ಪಡಬೇಕಾಗಿದೆ.

ತುರ್ತು ಚಿಕಿತ್ಸೆ ಪಡೆಯುವವರು ಹಾಗೂ ಹೆರಿಗೆ ಮಾಡಿಸಿಕೊಳ್ಳುವವರು ಬಂದರೆ ಇತರೆ ರೋಗಿಗಳ ಪರಿಸ್ಥಿತಿ ದೇವರೆ ಬಲ್ಲ ಎನ್ನುವಂತಾಗಿದೆ.

ADVERTISEMENT

ಆರು ನರ್ಸ್ ಹುದ್ದೆಗಳಲ್ಲಿ ಮೂವರು, ಇಬ್ಬರು ಔಷಧಿ ವಿತರಕರಲ್ಲಿ ಒಬ್ಬರು, ಹದಿಮೂರು ಕಿರಿಯ ಆರೋಗ್ಯ ಸಹಾಯಕರಲ್ಲಿ ಆರು ಹುದ್ದೆಗಳು ಖಾಲಿ ಇವೆ. ಇಬ್ಬರು ಪ್ರಯೋಗಾಲಯ ತಂತ್ರಜ್ಞರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

ಆಸ್ಪತ್ರೆ ಆವರಣದಲ್ಲಿ ಪಟ್ಟಣ ಪಂಚಾಯಿತಿಯಿಂದ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಬಳಕೆ ಇಲ್ಲದೆ ನಿರುಪಯುಕ್ತವಾಗಿದೆ. ಆಸ್ಪತ್ರೆಯಲ್ಲಿ ಲಭ್ಯವಿದ್ದ ನೀರನ್ನೇ ರೋಗಿಗಳು ಕುಡಿಯುತ್ತಿದ್ದಾರೆ.

ಆಸ್ಪತ್ರೆ ಆವರಣದಲ್ಲಿ ದ್ವಿಚಕ್ರವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ.

ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಆವರಣದಲ್ಲಿ ಕಸಕಡ್ಡಿಗಳ ರಾಶಿ ಕಂಡು ಬರುತ್ತಿದೆ. ಆರೋಗ್ಯ ಕೇಂದ್ರದಲ್ಲಿ ಅನಾರೋಗ್ಯದ ವಾತಾವರಣ ಇದೆ. 9 ಜನ ಡಿ ದರ್ಜೆ ನೌಕರರ ಪೈಕಿ ನಾಲ್ಕು ಜನ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದು, ಶೌಚಾಲಯದ ಸ್ಥಿತಿ ಹೇಳತೀರದಾಗಿದೆ. ಹೆಸರಿಗೆ ಮಾತ್ರ 30 ಬೆಡ್‌ಗಳ ಆಸ್ಪತ್ರೆ ಇದ್ದರೂ ಸೌಕರ್ಯಗಳು ಇಲ್ಲವಾಗಿವೆ. ಹೊಸ ಬೆಡ್ ಶೀಟ್, ತಲೆದಿಂಬು, ಕೊಠಡಿಗಳ ಕೊರತೆ ಇದೆ ಎಂದು ಪ್ರಗತಿಪರ ಸಂಘಟನೆ ಮುಖಂಡ ಪಾಮಣ್ಣ ಅರಳಿಗನೂರು ದೂರಿದರು.

ಬಿಸಿ ನೀರಿನ ಸೌಲಭ್ಯದಿಂದ ರೋಗಿಗಳು ವಂಚಿತಗೊಂಡಿದ್ದು, ಸ್ನಾನ ಹಾಗೂ ಕುಡಿಯುವ ಸಲುವಾಗಿ ಬಿಸಿ ನೀರಿಗಾಗಿ ರೋಗಿಗಳು ಹೋಟೆಲ್, ಟೀ ಸ್ಟಾಲ್‌ಗಳನ್ನು ನೆಚ್ಚಿಕೊಳ್ಳಬೇಕಾಗಿದೆ.

ಕೆಟ್ಟು ನಿಂತ ಜನರೇಟರ್:

ಕಳೆದ ಎರಡು ವರ್ಷಗಳ ಹಿಂದೆ ಕೆಟ್ಟು ಹೋಗಿರುವ ಜನರೇಟರ್ ಇಲ್ಲಿವರೆಗೆ ದುರಸ್ತಿ ಮಾಡಿಸಿಲ್ಲ. ವಿದ್ಯುತ್ ಕೈ ಕೊಟ್ಟರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಅರಳಿಗನೂರು ಎಂಬುವವರು ಆರೋಪಿಸಿದರು.

ಗಂಗಾವತಿಗೆ ಕಡೆಗೆ ಬೊಟ್ಟು

ಕನಕಗಿರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗರ್ಭಿಣಿಯರು ಹೆರಿಗೆಗಾಗಿ ನಿತ್ಯ ಬರುತ್ತಿದ್ದು ಒಂದೆರಡು ಗಂಟೆಯಲ್ಲಿ ಹೆರಿಗೆ ಆಗದಿದ್ದರೆ ಶಸ್ತ್ರಚಿಕಿತ್ಸೆ ಮಾಡಿ ಮಗು ತೆಗೆಯಲು ತಜ್ಞ ವೈದ್ಯರು ಇಲ್ಲ. ಹೀಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಎಂದು ವೈದ್ಯರು ಬೊಟ್ಟು ಮಾಡಿ ತೋರಿಸುತ್ತಾರೆ. ಗಂಗಾವತಿಗೆ ಹೋದರೆ ಸ್ಪಂದನೆ ಕಡಿಮೆ ಇದೆ. ಖಾಸಗಿ ಆಸ್ಪತ್ರೆಗೆ ಹೋದರೆ ₹50 ಸಾವಿರ ಬೇಕಾಗುತ್ತದೆ ಅಷ್ಟೊಂದು ಹಣ ಎಲ್ಲಿಂದ ತರಬೇಕು ರೀ? ಎಂದು ಹನುಮವ್ವ ಪ್ರಶ್ನಿಸಿದರು. ಬಡವರ ಗೋಳು ಕೇಳುವವರು ಯಾರು ಇಲ್ಲವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವೈದ್ಯರ ನೇಮಕಾತಿಗೆ ಸಿದ್ಧವಿದ್ದರೂ ಬಹಳಷ್ಟು ಸಂಖ್ಯೆಯಲ್ಲಿ ಬರುತ್ತಿಲ್ಲ. ಆದ್ದರಿಂದ ನಿವೃತ್ತಿಯಾದ ವೈದ್ಯರನ್ನು ನಿಯೋಜಿಸಿ ಅವರಿಂದ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲು ಕೆಡಿಪಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.