ADVERTISEMENT

ಕನಕಗಿರಿ ಪಟ್ಟಣ‌ ಪಂಚಾಯಿತಿ: ಸದಸ್ಯರ ಚಿತ್ತ ಸಚಿವ ಶಿವರಾಜ ತಂಗಡಗಿಯತ್ತ

ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ, ಎರಡು ಬಣದವರ ಕಸರತ್ತು

ಮೆಹಬೂಬ ಹುಸೇನ
Published 28 ಸೆಪ್ಟೆಂಬರ್ 2024, 5:42 IST
Last Updated 28 ಸೆಪ್ಟೆಂಬರ್ 2024, 5:42 IST
ಕನಕಗಿರಿ ಪಟ್ಟಣ ಪಂಚಾಯಿತಿ ಕಚೇರಿ
ಕನಕಗಿರಿ ಪಟ್ಟಣ ಪಂಚಾಯಿತಿ ಕಚೇರಿ   

ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿಯ ಸದಸ್ಯರ ಆಯ್ಕೆಗೆ ಚುನಾವಣೆ ನಡೆದು 30 ತಿಂಗಳ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಕಣ ರಂಗೇರಿದೆ.

ಒಟ್ಟು 17 ಸದಸ್ಯರಲ್ಲಿ 12 ‌ಜನ ಕಾಂಗ್ರೆಸ್ ಹಾಗೂ 5 ಜನ ಬಿಜೆಪಿಗರು ಇದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ 'ಅ' ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಐದನೇಯ ವಾರ್ಡ್‌ ಸದಸ್ಯ ಕಂಠಿರಂಗ ನಾಯಕ ಮಾತ್ರ ಪರಿಶಿಷ್ಟ ಪಂಗಡದವರಾಗಿದ್ದರಿಂದ ಉಪಾಧ್ಯಕ್ಷರಾಗುವುದು ನಿಶ್ಚಿತ. ಈಗ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ತುರುಸಿನ ಪೈಪೋಟಿ ಏರ್ಪಟ್ಟಿದೆ.

ಕಾಂಗ್ರೆಸ್‌ನಿಂದ ಗೆದ್ದಿರುವ ಸಿ. ಹುಸೇನಬೀ, ಸೈನಾಜಬೇಗಂ, ತನುಶ್ರೀ ಹಾಗೂ ಎಸ್. ಹುಸೇನಬೀ ಅವರು ಅಧ್ಯಕ್ಷ ಸ್ಥಾ‌ನದ ಆಕಾಂಕ್ಷಿಗಳಾಗಿದ್ದಾರೆ. ಈ ಪಕ್ಷದಲ್ಲೀಗ ಎರಡು ಬಣಗಳಿದ್ದು ಇಬ್ಬರೂ ಮೇಲುಗೈ ಸಾಧಿಸಲು ಕಸರತ್ತು ನಡೆಸುತ್ತಿದ್ದಾರೆ. ಒಂದು ಬಣದವರು ಸಚಿವ ಶಿವರಾಜ ತಂಗಡಗಿ ಹಾಗೂ ಸ್ಥಳೀಯ ಹಿರಿಯ ಕಾಂಗ್ರೆಸ್ ಮುಖಂಡರನ್ನು ನೆಚ್ಚಿಕೊಂಡಿದ್ದರೆ ಮತ್ತೊಂದು ಬಣದವರು ತಂಗಡಗಿ ಮತ್ತು ಹಿರಿಯರ ಬಣದಲ್ಲಿ ಅಧ್ಯಕ್ಷ ಸ್ಥಾನ ಅಭ್ಯರ್ಥಿ ಯಾರು ಎಂಬುದರ ಕಡೆಗೆ ಗಮನ ಹರಿಸಿದ್ದಾರೆ.

ADVERTISEMENT

ಬೆಂಬಲ: ಪಟ್ಟಣ ಪಂಚಾಯಿತಿಯ ಮೊದಲ ಚುನಾವಣೆಯ ಎರಡನೆ ಅವಧಿಯಲ್ಲಿ 2020ರಲ್ಲಿ ಅಧ್ಯಕ್ಷ ಸ್ಥಾನ‌ ಹಿಂದುಳಿದ ‘ಅ‘ ವರ್ಗಕ್ಕೆ ಬಂದಾಗ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳಿದ್ದರೂ ತಂಗಡಗಿ ಅವರು ಪಕ್ಷೇತರ ಅಭ್ಯರ್ಥಿ ಖಾಜಾಸಾಬ ಗುರಿಕಾರ ಅವರಿಗೆ ಅವಕಾಶ‌ ನೀಡಿದ್ದರು.

ಐದು ಜನ ಅಲ್ಪಸಂಖ್ಯಾತ ಸದಸ್ಯರಲ್ಲಿ ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯರಾದ ಹುಸೇನಸಾಬ ಸೂಳೇಕಲ್, ಆಫೀಜಬೇಗ್ಂ, ಕಾಂಗ್ರೆಸ್ ಸದಸ್ಯ ರವಿ ಭಜಂತ್ರಿ ಅವರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ರವೀಂದ್ರ ಸಜ್ಜನ್ ಅವರು ಶಾಸಕ ಹಾಗೂ ಸಂಸದರ‌ ಮತ ಪಡೆದು ಅಧ್ಯಕ್ಷರಾಗಿದ್ದರು.

ಈಗ ಪರಿಸ್ಥಿತಿ‌ ಭಿನ್ನವಾಗಿದ್ದು ಬಿಜೆಪಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾ‌ನಕ್ಕೆ ಸ್ಪರ್ಧಿಸಲು ಆಕಾಂಕ್ಷಿಗಳೇ ಇಲ್ಲ. ಈ ಹಿಂದೆ ಅಲ್ಪ ಸಂಖ್ಯಾತರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಜೊತೆಗೆ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದವರನ್ನು ನೇಮಿಸಿದ್ದರಿಂದ ಈಗ ತಮಗೆ ಅವಕಾಶ ನೀಡಬೇಕೆಂದು ತನುಶ್ರೀ ಟಿ.‌ಜೆ.‌ರಾಮಚಂದ್ರ ಬೆಂಬಲಿಗರು ವಾದ ಮಂಡಿಸಿದ್ದಾರೆ.

2008ರಲ್ಲಿ 37 ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 10 ಜನ ಮುಸ್ಲಿಮರಿದ್ದರೂ ಕಾಂಗ್ರೆಸ್ ಬೆಂಬಲಿಸಿದ್ದ ದೇವಪ್ಪ ತೋಳದ ಅವರಿಗೆ ಬಹುತೇಕರು ಬೆಂಬಲ ನೀಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಈಗ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇದೆ, ನಮಗೇ ಅಧಿಕಾರಿ ಕೊಡಿ ಎಂದು ಹುಸೇನಬೀ, ಸೈನಾಜ್ ಬೇಗ್ಂ ಹಾಗೂ ಎಸ್.‌ಹುಸೇನಬೀ ಅವರ ಬೆಂಬಲಿಗರ ವಾದ. ಆದ್ದರಿಂದ ತಂಗಡಗಿ ಯಾವ ಬಣದ ವಾದಕ್ಕೆ ಆದ್ಯತೆ ನೀಡುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.