ಕೊಪ್ಪಳ: ಹುಟ್ಟಿದಾಗ ಕೇವಲ 500 ಗ್ರಾಂ. ತೂಕ ಹೊಂದಿದ್ದ ಹೆಣ್ಣು ನವಜಾತ ಶಿಶುವಿಗೆ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ತಾಯಿ ಮತ್ತು ಮಗುವಿನ ಆಸ್ಪತ್ರೆ ವೈದ್ಯರು ನಿರಂತರ 50 ದಿನಗಳ ಕಾಲ ‘ಕಾಂಗರೂ’ ಮಾದರಿ ಆರೈಕೆಯ ಚಿಕಿತ್ಸೆ ನೀಡಿದ್ದು, ಈಗ ಮಗುವಿನ ತೂಕ ಈಗ 1.2 ಕೆ.ಜಿ.ಗೆ ಏರಿಕೆಯಾಗಿದೆ.
ಅವಧಿಪೂರ್ವ ಹೆರಿಗೆ ಮತ್ತು ತಾಯಿಯಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಮಗುವಿನ ತೂಕ ಅತ್ಯಂತ ಕಡಿಮೆಯಿತ್ತು. ಹೀಗಾಗಿ ಮಗು ಬೆಳವಣಿಗೆ ಬಗ್ಗೆ ಪೋಷಕರಿಗೆ ಹಾಗೂ ವೈದ್ಯರಿಗೆ ಅನುಮಾನಗಳಿದ್ದವು. ಕಾಂಗರೂ ಮಾದರಿಯಲ್ಲಿ ನೀಡಿದ ಚಿಕಿತ್ಸೆ ಈಗ ಫಲ ನೀಡಿದೆ. ಇಲ್ಲಿನ ಆಸ್ಪತ್ರೆಯಲ್ಲಿ ಹಿಂದೆ 700 ಗ್ರಾಂ. ಇದ್ದ ಮಕ್ಕಳ ತೂಕವನ್ನು ಕ್ರಮೇಣ ಹೆಚ್ಚಿಸಲಾಗಿತ್ತು. ಇಲ್ಲಿ ಇದೇ ಮೊದಲ ಬಾರಿಗೆ 500 ಗ್ರಾಂ. ತೂಕದ ಮಗುವಿಗೆ ವೈದ್ಯರು ‘ಮರುಜನ್ಮ’ ನೀಡಿದ್ದಾರೆ. ವೈದ್ಯರ ಪ್ರಕಾರ ಇಲ್ಲಿನ ಆಸ್ಪತ್ರೆಯಲ್ಲಿ ಇಷ್ಟೊಂದು ಕಡಿಮೆ ತೂಕದ ಮಗು ಚೇತರಿಸಿಕೊಂಡ ವಿರಳ ಪ್ರಕರಣ ಇದಾಗಿದೆ.
ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದ ಸಾರವ್ವ ಎಂಬ ಮಹಿಳೆಗೆ ಇದು ಎರಡನೇ ಹೆರಿಗೆ. ಮೊದಲ ಮಗನಿಗೆ ಈಗ ನಾಲ್ಕು ವರ್ಷ. ಎರಡನೇ ಮಗುವಿಗಾಗಿ ಏಳು ತಿಂಗಳು ಗರ್ಭಿಣಿಯಾಗಿದ್ದಾಗ ಇದೇ ವರ್ಷದ ಆಗಸ್ಟ್ 30ರಂದು ಸಹಜ ಹೆರಿಗೆಯಾಗಿದೆ. ಆಗ ಮಗುವಿನ ತಲೆ, ಶ್ವಾಸಕೋಶ, ಕರಳು, ಚರ್ಮ ಯಾವುದೂ ಸರಿಯಾಗಿ ಬೆಳೆದಿರಲಿಲ್ಲ. ಚರ್ಮ ಬೆಳೆಯದೇ ಇದ್ದಾಗ ಬೇರೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥ ಸಂಕೀರ್ಣ ಸಂದರ್ಭದಲ್ಲಿ ಕಾಂಗರೂ ಆರೈಕೆ ಮಾಡಿಸಲಾಗಿದೆ.
ಹುಟ್ಟಿದ ದಿನದಂದಲೂ ಶಿಶುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈಗ ತೂಕ ಏರಿಕೆಯಾಗಿರುವುದರಿಂದ ಗುರುವಾರ ಆ ಮಗುವನ್ನು ಐಸಿಯುನಿಂದ ಬಿಡುಗಡೆ ಮಾಡಲಾಯಿತು.
‘ಜನನದ ಸಮಯದಲ್ಲಿ ಮಗುವಿನ ತೂಕ ಸಾಮಾನ್ಯವಾಗಿ 2.5 ಕೆ.ಜಿ. ಇದ್ದರೆ ಆರೋಗ್ಯವಂತ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಮಗುವಿನ ತೂಕ 500 ಗ್ರಾಂ ಮಾತ್ರ ಇತ್ತು. ತೂಕ ಕಡಿಮೆಯಿದ್ದಾಗ ನಂಜು ಆಗುವುದು, ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಈ ಮಗುವಿಗೆ ಆಗಿದ್ದ ನಂಜು ಗುಣಪಡಿಸಲಾಗಿದೆ. ಮಗು ಆರೋಗ್ಯವಾಗಿದ್ದು, ತಾಯಿ ಎದೆ ಹಾಲು ಕೊಡುತ್ತಿದ್ದಾಳೆ’ ಎಂದು ಇಲ್ಲಿನ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಗಿರೀಶ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಮಕ್ಕಳ ವಿಭಾಗದ ನೋಡಲ್ ಅಧಿಕಾರಿ ಡಾ. ಸಿದ್ದಲಿಂಗ, ವೈದ್ಯರಾದ ಉದಯ್, ಶಶಿಕಾಂತ್, ಮಲ್ಲನಗೌಡ, ಹರ್ಷ ಮತ್ತು ಆಸ್ಪತ್ರೆಯ ಸಿಬ್ಬಂದಿ ಮಗುವಿನ ತೂಕ ಹೆಚ್ಚಾಗಲು ಶ್ರಮಿಸಿದ್ದಾರೆ.
ಮಗಳು ಹುಟ್ಟಿದಾಗ ಬಹಳಷ್ಟು ತೂಕ ಕಡಿಮೆಯಿದ್ದರಿಂದ ಹೇಗೆ ಆರೈಕೆ ಮಾಡಬೇಕು ಎನ್ನುವುದೇ ಗೊತ್ತಿರಲಿಲ್ಲ. ಆಸ್ಪತ್ರೆ ವೈದ್ಯರು ನನ್ನ ಪಾಲಿಗೆ ದೇವರಾಗಿ ಬಂದರು.
–ಸಾರವ್ವ ಮಗುವಿನ ತಾಯಿ
ಕೊಪ್ಪಳದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 500 ಗ್ರಾಂ. ತೂಕ ಹೊಂದಿದ್ದ ಮಗುವಿಗೆ ಕಾಂಗರೂ ಆರೈಕೆ ಮಾಡಿ ಯಶಸ್ಸು ಕಂಡಿದ್ದು ಇದೇ ಮೊದಲು. ಇದಕ್ಕೆ ವೈದ್ಯರು ಹಾಗೂ ಸಿಬ್ಬಂದಿ ಶ್ರಮ ಕಾರಣ.
–ಡಾ. ಗಿರೀಶ ಹಿರೇಮಠ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ
ಕಾಂಗರೂ ಆರೈಕೆ ಹೀಗಿರಲಿದೆ ‘ತೂಕ ಕಡಿಮೆ ಇರುವ ಮಕ್ಕಳ ಸುಧಾರಣೆಗೆ ತಾಯಂದಿರು ನಿತ್ಯ 14ರಿಂದ 15 ತಾಸು ಮಗುವನ್ನು ಎದೆಗವುಚಿಕೊಂಡಿರುವುದನ್ನೇ ಕಾಂಗರೂ ಮಾದರಿ ಆರೈಕೆ ಎನ್ನುತ್ತೇವೆ. ಇದರಿಂದ ತೂಕ ಹೆಚ್ಚಾಗುವ ಜೊತೆಗೆ ಮಗುವಿನ ಸಹಜ ಉಸಿರಾಟಕ್ಕೆ ಸಹಾಯವಾಗುತ್ತದೆ. ತಾಯಿ ಮಗುವಿನ ಬಾಂಧವ್ಯ ವೃದ್ಧಿಯಾಗುತ್ತದೆ’ ಎನ್ನುತ್ತಾರೆ ಡಾ.ಗಿರೀಶ ಹಿರೇಮಠ. ‘ಒಂದು ಕೆ.ಜಿ.ಗಿಂತಲೂ ಕಡಿಮೆ ತೂಕ ಹೊಂದಿರುವ 15ರಿಂದ 20 ಮಕ್ಕಳಿಗೆ ಒಂದು ತಿಂಗಳಲ್ಲಿ ಕಾಂಗರೂ ಮಾದರಿಯಲ್ಲಿ ಇಲ್ಲಿ ಆರೈಕೆ ನೀಡಲಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.