ADVERTISEMENT

Kannada Rajyotsava Award: ಬಂಡಾಯದ ಧ್ವನಿಗೆ ರಾಜ್ಯೋತ್ಸವ ಗರಿಮೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 7:02 IST
Last Updated 31 ಅಕ್ಟೋಬರ್ 2024, 7:02 IST
ಅಲ್ಲಮಪ್ರಭು ಬೆಟ್ಟದೂರು
ಅಲ್ಲಮಪ್ರಭು ಬೆಟ್ಟದೂರು   

ಕೊಪ್ಪಳ: ಸಾಹಿತ್ಯ, ಸಂಘಟನೆ, ಹೋರಾಟ, ಕಾರ್ಯಕ್ರಮ, ಹೊಸ ಓದು, ಕಲಿಕೆ ಹೀಗೆ ನಿರಂತರವಾಗಿ ಒಂದಿಲ್ಲೊಂದು ಕೆಲಸಗಳಲ್ಲಿ ತೊಡಗಿಕೊಂಡಿರುವ ’ಬಂಡಾಯದ ಧ್ವನಿ’ ಅಲ್ಲಮಪ್ರಭು ಬೆಟ್ಟದೂರು ಅವರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಗರಿಮೆ ಲಭಿಸಿದೆ.

ವಯಸ್ಸು 73 ಆದರೂ ಅದಮ್ಯ ಉತ್ಸಾಹ ಹಾಗೂ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ ರೂಪಿಸಿಕೊಂಡಿರುವ ಅವರು ಗವಿಸಿದ್ಧೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯರೂ ಆಗಿದ್ದರು. ಈಗಲೂ ಜನಮುಖಿ ಹೋರಾಟಗಳಿಗೆ ಧ್ವನಿಯಾಗುತ್ತಾರೆ. ಇವರು ಜನಿಸಿದ್ದು ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಬೆಟ್ಟದೂರು ಗ್ರಾಮದಲ್ಲಿ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದ ಅವರು ಇದು ನನ್ನ ಭಾರತ, ಕುದರಿಮೋತಿ ಮತ್ತು ನೀಲಗಿರಿ, ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು, ಗುಲಗಂಜಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಂಕಣ ಬರಹ, ಗದ್ಯ ಬರಹ, ವಿವಿಧ ಅಕಾಡೆಮಿಗಳು ಹೊರತಂದ ಸಂಚಿಕೆಗಳಿಗೆ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.

ADVERTISEMENT

ಎರಡು ಸಲ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿದ್ದ ಅವರು ಕನ್ನಡ ಕ್ರಿಯಾ ಸಮಿತಿಯ ಕಾರ್ಯದರ್ಶಿಯಾಗಿ, ಕೊಪ್ಪಳ ಜಿಲ್ಲಾ ಹೋರಾಟ ಸಮಿತಿ ಕಾರ್ಯದರ್ಶಿ, ನವನಿರ್ಮಾಣ ಚಳವಳಿ, ಗೋಕಾಕ ಚಳವಳಿ, ಕೋಮು ಸೌಹಾರ್ದ ಹೋರಾಟ ಹೀಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ, ಕನ್ನಡ ಸಾಹಿತ್ಯ ಪರಿಷತ್‌, ಕರ್ನಾಟಕ ವಿದ್ಯಾವರ್ಧಕ ಸಂಘಗಳ ಆಜೀವ ಸದಸ್ಯ, ಹಂಪಿಯ ಕನ್ನಡ ವಿ.ವಿ.ಯ. ಸಿಂಡಿಕೇಟ್‌ ಸದಸ್ಯರಾಗಿದ್ದರು. ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು ಕವನ ಸಂಕಲನಕ್ಕೆ ಕರಾವಳಿ ಪ್ರಶಸ್ತಿ, ಸಂಕ್ರಮಣ ಬಹುಮಾನಗಳು ಲಭಿಸಿವೆ.

ಪ್ರಾಚಾರ್ಯ ವೃತ್ತಿಯಿಂದ ನಿವೃತ್ತರಾಗಿ ಹಲವು ವರ್ಷಗಳೇ ಕಳೆದರೂ ಸಮಾಜಮುಖಿಯಾಗಿ ಹೋರಾಟಗಳಿಂದ ಎಂದೂ ವಿಮುಖರಾಗಿಲ್ಲ. ಸಾಮಾಜಿಕ ಸಂಪರ್ಕ, ಹೋರಾಟ, ಪ್ರವಾಸ, ಕಾವ್ಯ, ಗದ್ದರಚನೆ, ಓದು ಹಾಗೂ ತೋಟದಲ್ಲಿ ಕೆಲಸ ಮಾಡುವ ಕೈಂಕರ್ಯ ಮಾತ್ರ ನಿರಂತರವಾಗಿದೆ.

‘ಜನಪರ ವಿಚಾರಗಳನ್ನು ಮುಂದಿಟ್ಟುಕೊಂಡೇ ಇಷ್ಟು ದಿನ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈ ಪ್ರಶಸ್ತಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ಕೆ ಪ್ರೇರಣೆಯಾಗಿದೆ. ಸಹಜವಾಗಿ ಪ್ರಶಸ್ತಿ ಖುಷಿ ನೀಡಿದೆ’ ಎಂದು ಅಲ್ಲಮಪ್ರಭು ಬೆಟ್ಟದೂರು ಸಂತಸ ವ್ಯಕ್ತಪಡಿಸಿದರು.

ಎ.ಜಿ. ಕಾರಟಗಿ
ಕನ್ನಯ್ಯ ನಾಯ್ಡು 

ಗ್ರಾಮೀಣ ಭಾಗಕ್ಕೂ ಪತ್ರಿಕೆ ಪಸರಿಸಿದ ಹೆಗ್ಗಳಿಕೆ

ಕೆ. ಮಲ್ಲಿಕಾರ್ಜುನ ಕಾರಟಗಿ: ಐದು ದಶಕಗಳಿಂದ ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಾ ಹಳ್ಳಿಗಳಿಗೆ ಸೈಕಲ್‌ ಸವಾರಿ ಮಾಡಿ ಪತ್ರಿಕೆ ವಿತರಿಸಿ ಗ್ರಾಮೀಣ ಭಾಗದಲ್ಲಿ ಪತ್ರಿಕೆ ಓದುವ ರುಚಿ ಪಸರಿಸಿದ ಎ.ಜಿ. (ಅಮರ ಗುಂಡಪ್ಪ) ಕಾರಟಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಓದಿದ್ದು 7ನೇ ತರಗತಿಯಾದರೂ ವಿವಿಧ ಭಾಷೆಗಳನ್ನು ಬಲ್ಲವರಾಗಿದ್ದು ಅವರಿಗಿರುವ ವಿವಿಧ ರಂಗದ ಜ್ಞಾನ ಗಮನ ಸೆಳೆಯುವಂತಿದೆ. 1971ರಿಂದ ಪತ್ರಿಕೆಯ ಎಜೆಂಟರಾಗಿ ಆರಂಭವಾದ ಅವರ ಪಯಣ ಈಗಲೂ ಮುಂದುವರಿದಿದೆ. ‘ಎಜಿ‘ ಮತ್ತು ‘ಪೇಪರ್ ಗುಂಡಪ್ಪʼ ‘ಎಜಿ ಗುಂಡಪ್ಪʼ ಎಂತಲೂ ಗುರುತಿಸಿಕೊಂಡಿರುವ ಅವರಿಗೆ ಡಿ.ವಿ.ಜಿ ಪ್ರಶಸ್ತಿ ದೊರಕಿದೆ. ಮಾಧ್ಯಮ ಆಕಾಡೆಮಿ ಮತ್ತು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ ವಿವಿಧ ಪ್ರಶಸ್ತಿಗಳಿಗೆ ಭಾಜನಗಿದ್ದಾರೆ. ‘ನನಗೆ ಪ್ರಶಸ್ತಿ ಅನಿರೀಕ್ಷಿತ. ಎಲೆಮರೆಯ ಕಾಯಿಯಾಗಿ ನನಗಿಂತ ಹಿರಿಯರಾಗಿದ್ದವರಿಗೆ ಪ್ರಶಸ್ತಿ ದೊರೆಯಬೇಕಿದೆ. ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ಪತ್ರಕರ್ತರಿಗೆ ಸರ್ಕಾರ ಗುರುತಿಸಬೇಕು’ ಎಂದರು.

ನೀರು ಉಳಿಸಿದ ಕನ್ನಯ್ಯಗೆ ಪ್ರಶಸ್ತಿಯ ಉಡುಗೊರೆ 

ಕೊಪ್ಪಳ: ಕೆಲ ತಿಂಗಳುಗಳ ಹಿಂದೆ ಜಿಲ್ಲೆಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಕೊಚ್ಚಿ ಹೋಗಿದ್ದಾಗ ಐದೇ ದಿನಗಳಲ್ಲಿ ಅದನ್ನು ಮರಳಿ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಕನ್ನಯ್ಯ ನಾಯ್ಡು ಅವರನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಜ್ಯದ ಕೊಪ್ಪಳ ವಿಜಯನಗರ ಬಳ್ಳಾರಿ ರಾಯಚೂರು ಜಿಲ್ಲೆಗಳಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ತುಂಗಭದ್ರಾ ಜಲಾಶಯದ ನೀರು ಜೀವನಾಡಿಯಾಗಿದೆ. ಈ ಜಲಾಶಯದ ಕ್ರಸ್ಟ್‌ ಗೇಟ್‌ ಕೊಚ್ಚಿ ಹೋದಾಗ ರಾಜ್ಯ ಸರ್ಕಾರ ತ್ವರಿತವಾಗಿ ನೀರು ನಿಲ್ಲಿಸುವಂತೆ ಮಾಡಲು ಆಂಧ್ರಪ್ರದೇಶದ ಕನ್ನಯ್ಯ ನಾಯ್ಡು ಅವರ ಮೊರೆ ಹೋಗಿತ್ತು. ಜಲಾಶಯಗಳ ಕ್ರಸ್ಟ್‌ ಗೇಟ್‌ ಸುರಕ್ಷತಾ ತಜ್ಞರಾಗಿಯೂ ಹೆಸರು ಮಾಡಿರುವ ಕನ್ನಯ್ಯ ನಾಯ್ಡು ಘಟನೆ ನಡೆದ ಮರುದಿನವೇ ಬಂದು ತಾತ್ಕಾಲಿಕವಾಗಿ ಗೇಟ್‌ ಅಳವಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಗ ಜಲಾಶಯಕ್ಕೆ ಭೇಟಿ ನೀಡಿದಾಗ ‘ನಮಗೆ ಕನ್ನಯ್ಯ ನಾಯ್ಡು ಅವರ ಮೇಲೆ ಭರವಸೆಯಿದೆ’ ಎಂದಿದ್ದರು. ಅವರ ನಿರೀಕ್ಷೆಯಂತೆ ಕಡಿಮೆ ಅವಧಿಯಲ್ಲಿ ಗೇಟ್‌ ಅಳವಡಿಸುವಲ್ಲಿ ಯಶಸ್ವಿಯಾಗಿರುವ ಕಾರಣ ರಾಜ್ಯ ಸರ್ಕಾರ ‘ರಾಜ್ಯೋತ್ಸವದ ಉಡುಗೊರೆ’ ನೀಡಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕನ್ನಯ್ಯ ನಾಯ್ಡು ‘ಪ್ರಶಸ್ತಿ ಸಹಜವಾಗಿ ಖುಷಿ ನೀಡುತ್ತದೆ. ಈಗಿನ ಪರಿಸ್ಥಿತಿಯಲ್ಲಿ ನನಗೆ ಈ ಪ್ರಶಸ್ತಿ ಕೊಡುವ ಬದಲು ತುರ್ತಾಗಿ ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್‌ ಗೇಟ್‌ಗಳನ್ನು ಬದಲಿಸಲು ಕ್ರಮ ವಹಿಸಬೇಕು. ಅದೇ ನನಗೆ ದೊಡ್ಡ ಪ್ರಶಸ್ತಿ. ಕ್ರಸ್ಟ್‌ ಗೇಟ್‌ ಮರಳಿ ಅಳವಡಿಸುವಾಗ ಕೆಲಸ ಮಾಡಿದ ಕಾರ್ಮಿಕರಿಗೆ ಹಣ ತುರ್ತಾಗಿ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.