ಕುಷ್ಟಗಿ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ ಮತ್ತು ಕೇಂದ್ರ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿ ನಬಿಸಾಬ್ ಕುಷ್ಟಗಿ ಮಧ್ಯೆ ಅನೇಕ ದಿನಗಳಿಂದ ನಡೆಯುತ್ತಿರುವ 'ಪ್ರತಿಷ್ಠೆಯ' ತಿಕ್ಕಾಟ ಮುಂದುವರೆದಿದ್ದು ಈಗ ತಾರಕಕ್ಕೇರಿದೆ.
ಕಾರ್ಯಕ್ರಮಕ್ಕೆ ಆಹ್ವಾನ ನೀಡುವುದು, ಆಮಂತ್ರಣ ಪತ್ರಿಕೆಗಳ ಮೊದಲ ಸಾಲಿನಲ್ಲಿ ತಮ್ಮ ಹೆಸರು ಇರಬೇಕು ಎಂದು ನಬಿಸಾಬ್ ವಿಶೇಷ ಸ್ಥಾನಮಾನಕ್ಕೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದ್ದು, ಈ ಇಬ್ಬರ ಸ್ಥಾನಮಾನದ ಸಂಘರ್ಷ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಿದೆ ಎಂದು ಕಸಾಪ ಮೂಲಗಳು ತಿಳಿಸಿವೆ.
ಪತ್ರ: ತಾಲ್ಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ ಅವರು ತಾಲ್ಲೂಕು ಮಟ್ಟದಲ್ಲಿ ನಡೆಯುವ ಪರಿಷತ್ತಿನ ದತ್ತಿ ಉಪನ್ಯಾಸ, ಕವಿಗೋಷ್ಠಿ ಸೇರಿ ಇತರೆ ಕಾರ್ಯಕ್ರಮಗಳಿಗೆ ಕೇಂದ್ರ ಪರಿಷತ್ತಿನ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿರುವ ನಬಿಸಾಬ್ ಕುಷ್ಟಗಿ ಅವರನ್ನು ಆಹ್ವಾನಿಸುವುದಕ್ಕೆ ವಿನಾಯಿತಿ ನೀಡುವಂತೆ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ಪತ್ರ ಬರೆದಿದ್ದು, ಪತ್ರದ ಪ್ರತಿ 'ಪ್ರಜಾವಾಣಿ'ಗೆ ಲಭ್ಯವಾಗಿದೆ. ಪತ್ರದ ವಿಚಾರ ಕಸಾಪ ಇತರೆ ವಾಟ್ಸ್‌ಆ್ಯಪ್, ಫೇಸ್‌ಬುಕ್ ಇತರೆ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿದೆ.
ದೂರುಗಳೇನು?: ತಾಲ್ಲೂಕಿನಲ್ಲಿ ನಡೆಯುವ ಸಾಹಿತ್ಯ ಪರಿಷತ್ತಿನ ಎಲ್ಲ ಚಟುವಟಿಕೆಗಳನ್ನು ಜಿಲ್ಲಾ ಘಟಕದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿದ್ದು, ನಬಿಸಾಬ್ ಅವರನ್ನೂ ಆಹ್ವಾನಿಸಿ ಗೌರವಯುತವಾಗಿ ವೇದಿಕೆ ಕಲ್ಪಿಸಲಾಗುತ್ತಿದೆ. ಆದರೆ ಕನ್ನಡ ಕಾರ್ಯಕರ್ತನಾಗಿ ಸಾಹಿತ್ಯಿಕ ಚಟುವಟಿಕೆಗಳಿಗೆ ಕೈಜೋಡಿಸುವುದನ್ನು ಮರೆತು ತಮಗೆ ವಿಶೇಷ ಗೌರವ ನೀಡಬೇಕು, ಮೊಬೈಲ್ ಮೂಲಕ ಪದೇ ಪದೇ ಕರೆಯಬೇಕು ಎಂಬ ನಿರೀಕ್ಷೆಯೊಂದಿಗೆ ದರ್ಪದ ವರ್ತನೆ ತೋರುತ್ತಿದ್ದಾರೆ ಎಂದು ಪತ್ರದಲ್ಲಿ ಬೇಸರ ತೋಡಿಕೊಂಡಿದ್ದಾರೆ.
ಸಭೆ: ತಿಂಗಳ ಹಿಂದೆ ಇದೇ ವಿಷಯವಾಗಿ ತಾಲ್ಲೂಕು ಅಧ್ಯಕ್ಷ ವೀರೇಶ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತಿನ ಕೆಲವರು ಪಟ್ಟಣದಲ್ಲಿ ಸಭೆ ನಡೆಸಿ ಜಿಲ್ಲಾ ಘಟಕಕ್ಕೆ ಪತ್ರ ಬರೆದಿದ್ದರು.
ನಬಿಸಾಬ್ ಜತೆ ವೇದಿಕೆ ಹಂಚಿಕೊಂಡು ಕಾರ್ಯಕ್ರಮ ನಡೆಸುವ ಮನಸ್ಸಿಲ್ಲ. ಕೇಂದ್ರ ಸಮಿತಿ ಪತ್ರಕ್ಕೆ ಪ್ರತಿಕ್ರಿಯಿಸದಿದ್ದರೆ ಅದು ಪರೋಕ್ಷ ಸಮ್ಮತಿ ಎಂದೇ ಭಾವಿಸಿ ನಬಿಸಾಬ್ ಅವರನ್ನು ಆಹ್ವಾನಿಸದೇ ಸುಗಮ ರೀತಿಯಲ್ಲಿ ಕಾರ್ಯಕ್ರಮ ನಡೆಸುತ್ತೇವೆ.– ವೀರೇಶ ಬಂಗಾರಶೆಟ್ಟರ, ಕಸಾಪ ತಾಲ್ಲೂಕು ಅಧ್ಯಕ್ಷ
ತೇಜೋವಧೆಗೆ ಯತ್ನ: ನಬಿಸಾಬ್
‘ಈ ಹಿಂದೆ ಕೇಂದ್ರ ಸಮಿತಿ ಸದಸ್ಯರಾಗಿದ್ದ ಶೇಖರಗೌಡ ಮಾಲೀಪಾಟೀಲ ಅವರಿಗೆ ನೀಡಿದ ಮಾದರಿಯಲ್ಲಿ ಪರಿಷತ್ತಿನ ಪದಾಧಿಕಾರಿಗಳ ಸ್ಥಾನಮಾನಕ್ಕೆ ಅನುಗುಣವಾಗಿ ಶಿಷ್ಟಾಚಾರದ ಪ್ರಕಾರ ಗೌರವ ನೀಡಿ ಎಂದು ಪರಿಷತ್ತಿನ ನಿಯಮಗಳ ಅನುಸಾರ ಸೌಜನ್ಯದಿಂದ ಕೇಳಿದ್ದೇ ತಪ್ಪಾಗಿದೆ’ ಎಂದು ಕಸಾಪ ಕೇಂದ್ರ ಸಮಿತಿ ಸದಸ್ಯ ನಬಿಸಾಬ್ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ್ದಾರೆ.
‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ಅಧ್ಯಕ್ಷರಿಗೆ ಬರೆದ ಪತ್ರವನ್ನು ಮಾಧ್ಯಮಗಳು ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡುವ ಮೂಲಕ ತಾಲ್ಲೂಕು ಅಧ್ಯಕ್ಷರು ತೇಜೋವಧೆಗೆ ಮುಂದಾಗಿದ್ದಾರೆ. ಮೂರು ವರ್ಷವಾದರೂ ಸಾಹಿತ್ಯ ಸಮ್ಮೇಳನ ನಡೆಸದಿರುವ ಅಧ್ಯಕ್ಷರು ತಮ್ಮ ವೈಫಲ್ಯ ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.