ADVERTISEMENT

ನೋಡ ಬನ್ನಿ ‘ಕಪಿಲ’ ವೈಭವ

ಮಳೆ ಬಂದಾಗಲೆಲ್ಲ ಧುಮ್ಮುಕ್ಕುವ ಜಲಪಾತ, ಜಿಲ್ಲೆಯ ರಮಣೀಯ ತಾಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 7:08 IST
Last Updated 16 ಜೂನ್ 2024, 7:08 IST
ಕಪಿಲತೀರ್ಥ ಜಲಪಾತದಿಂದ ಧುಮ್ಮಿಕ್ಕುವ ನೀರಿನ ಮನೋಹರ ದೃಶ್ಯ
ಕಪಿಲತೀರ್ಥ ಜಲಪಾತದಿಂದ ಧುಮ್ಮಿಕ್ಕುವ ನೀರಿನ ಮನೋಹರ ದೃಶ್ಯ   

ಹನುಮಸಾಗರ: ಕೊಪ್ಪಳ ಜಿಲ್ಲೆಯಂದಾಕ್ಷಣ ಬಿಸಿಲೂರು ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಮಳೆಗಾಲದಲ್ಲಿ ಈ ಜಿಲ್ಲೆಯಲ್ಲಿ ಮನಮೋಹಕವಾಗಿ ಧುಮ್ಮಿಕ್ಕುವ ಜಲಪಾತವೊಂದು ಜನರ ಕಣ್ಮನ ಸೆಳೆಯುತ್ತಿದೆ.

ಹನುಮಸಾಗರ ಸಮೀಪದ ಕಬ್ಬರಗಿ ಗ್ರಾಮದ ಪ್ರವಾಸಿ ತಾಣ ಕಪಿಲತೀರ್ಥ ಜಲಪಾತ ಮೈದುಂಬಿದ್ದು ಗತವೈಭವ ಮರುಕಳಿಸಿದೆ. ಜಿಲ್ಲೆಯಲ್ಲಿರುವ ಏಕೈಕ ಜಲಪಾತ ಇದಾದ ಕಾರಣ ಆಕರ್ಷಣೆ ಕೇಂದ್ರ ಬಿಂದು ಕೂಡ ಆಗಿದೆ. ಹಲವು ದಿನಗಳಿಂದ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ ಜಲಪಾತವು ರಮಣೀಯವಾಗಿ ಕಾಣುತ್ತಿದೆ. ಮಳೆ ಬಂದಾಗ ಮಾತ್ರ ಈ ಸ್ಥಳ ಗಮನ ಸೆಳೆಯುತ್ತದೆ. ಈಗ ಧುಮ್ಮುಕ್ಕುತ್ತಿರುವ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಜನ ಜಲಪಾತಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ.

ಚಿಮ್ಮುವ ನೀರಹನಿಗಳು ಹಸಿರಿನ ಪ್ರಕೃತಿಯ ನಡುವೆ ಹೊಸ ಪ್ರಪಂಚ ಸೃಷ್ಟಿ ಮಾಡುತ್ತಿವೆ. ಹಸಿರಿನ ಸುಂದರ ತಾಣದ ನಡುವೆ ಕಲ್ಲಿನ ಮೆಟ್ಟಿಲು ಇಳಿದು ಕಣಿವೆ ತಲುಪಿದರೆ ಜಲಪಾತದ ದೃಶ್ಯ ಆಯಾಸ ಮರೆಯಾಗಿಸುತ್ತದೆ. 20 ಅಡಿಗಳಿಗೂ ಎತ್ತರದಿಂದ ಬೀಳುವ ನೀರು ಪುಳಕಿತರನ್ನಾಗಿ ಮಾಡುತ್ತಿದೆ.

ADVERTISEMENT

ಕೊರತೆ: ಮಳೆಯಿಲ್ಲದಾಗ ಪ್ರಕೃತಿಯ ಸೊಬಗಿಲ್ಲದೇ ಬತ್ತಿ ಹೋದಂತೆ ಈ ಜಲಪಾತ ಕಾಣುತ್ತದೆ. ಇಲ್ಲಿ ಮೂಲ ಸೌಕರ್ಯಗಳ ಕೊರತೆಯೂ ಇದೆ.  ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು. ಇಲ್ಲಿನ ಕಣಿವೆಯ ದೃಶ್ಯ ಕಣ್ಣುಂಬಿಕೊಳ್ಳಲು ಎರಡು ಕಣ್ಣು ಸಾಲದು. ಆದರೆ. ಕಲ್ಲು-ಬಂಡೆಗಳ ಮೇಲೆ ಪ್ರೇಮಿಗಳ ಹೆಸರು ಕೆತ್ತನೆಗಳೇ ಎದ್ದು ಕಾಣುತ್ತಿವೆ. 

ಮೇಲ್ಬಾಗದಲ್ಲಿ ಕಪಿಲ ತೀರ್ಥ ಸ್ಥಳದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲ್‌ಗಳು, ಪ್ಲಾಸ್ಟಿಕ್ ತ್ಯಾಜ್ಯ ಎಸೆಯಲಾಗಿದೆ. ಇದರಿಂದ ಇತ್ತ ಪ್ರವಾಸಿಗರು ಕಪಿಲ ತೀರ್ಥ ಸ್ಥಳದಲ್ಲಿ ಕುಳಿತು ಊಟ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕಪಿಲ ತೀರ್ಥದ ಮೇಲ್ಭಾಗದಲ್ಲಿ ಊಟ ಮಾಡಿದ ಪ್ಲಾಸ್ಟಿಕ್ ತಟ್ಟೆಗಳು ಮದ್ಯಪಾನ ಬಾಡಿ ಬೀಸಾಡಿದ ಬಾಟಲಿಗಳು ನೀರಿನ ಜೊತೆಗೆ ಹರಿದು ಕೆಳಗೆ ಜಲಪಾತಕ್ಕೆ ಜನರ ಮೇಲೆ ಬೀಳುವ ಭಯವೂ ಇದೆ.

ಮಳೆಗಾಲದಲ್ಲಿ ಸೃಷ್ಟಿಯಾಗುವ ಜಲಪಾತದ ವೇಳೆ ಹೆಚ್ಚು ಜನ ಬಂದಂತೆಲ್ಲ ವ್ಯಾಪಾರಕ್ಕೂ ಅನುಕೂಲವಾಗುತ್ತದೆ. ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಅವಕಾಶಗಳಿದ್ದು, ಜಿಲ್ಲಾಡಳಿತ ಗಮನ ಹರಿಸಬೇಕಿದೆ. ಜಲಪಾತ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ.

ಪ್ರವಾಸಿಗರ ಸುರಕ್ಷತೆಗಾಗಿ ಇಲ್ಲಿಂದು ಪೊಲೀಸ್‌ ಚೌಕಿ ಸ್ಥಾಪಿಸಬೇಕಿದೆ. ವಾರಾಂತ್ಯದ ದಿನಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕಿದೆ.

ಜಲಪಾತಕ್ಕೆ ತೆರಳುವುದು ಹೇಗೆ? ಕುಷ್ಟಗಿ ತಾಲ್ಲೂಕಿನ ಹನುಮಸಾಗರದಿಂದ ಕಬ್ಬರಗಿ ಗ್ರಾಮದ ಸಮೀಪ ಕಪಿಲತೀರ್ಥ ಜಲಪಾತ ಸಮೀಪವಿದ್ದು ಇಲ್ಲಿಗೆ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಬ್ಬರಗಿ ಗ್ರಾಮದಿಂದ ಜಲಪಾತಕ್ಕೆ ಸುಮಾರು ಎರಡು ಕಿ.ಮೀ ನಡೆದುಕೊಂಡು ಹೋಗಬೇಕಾಗಿದೆ. ಮಳೆಯಿಂದ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.