ADVERTISEMENT

ಸೆಪ್ಟೆಂಬರ್‌ನಲ್ಲಿ ಸಿಂಧನೂರಿಗೆ ರೈಲು ಸೌಲಭ್ಯ: ಸಂಸದ ಸಂಗಣ್ಣ ಕರಡಿ

ಕೊಪ್ಪಳ ರೈಲು ‌ನಿಲ್ದಾಣ ಮೇಲ್ದರ್ಜೆಗೇರಿಸಲು ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 5:30 IST
Last Updated 6 ಆಗಸ್ಟ್ 2023, 5:30 IST
   

ಕೊಪ್ಪಳ: ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಅಂತಿಮ‌ ಹಂತದಲ್ಲಿದ್ದು, ಮುಂದಿನ ತಿಂಗಳು ಸಿಂಧನೂರಿಗೆ ರೈಲು ಸಂಚಾರ ಆರಂಭವಾಗಲಿದೆ‌ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು‌.

ಇಲ್ಲಿ ಭಾನುವಾರ ಕೊಪ್ಪಳ ಹಾಗೂ‌ ಮುನಿರಾಬಾದ್ ರೈಲು ನಿಲ್ದಾಣಗಳ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಭಾರತೀಯ ರೈಲ್ವೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಅಭಿವೃದ್ಧಿ ವಿಷಯದಲ್ಲಿ ಯಾವ ಪಕ್ಷಗಳೂ ರಾಜಕಾರಣ ಮಾಡಬಾರದು. ಜಿಲ್ಲೆಯಲ್ಲಿ ಇನ್ನಷ್ಟು ‌ಕೆಲಸಗಳು ಆಗಬೇಕಾಗಿದ್ದು ಅದಕ್ಕೆ ಈಗಿನ ರಾಜ್ಯ ಸರ್ಕಾರದ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದರು.

ಪ್ರಸ್ತುತ ಜಿಲ್ಲೆಯ ಕಾರಟಗಿ ತನಕ ರೈಲು ಸಂಚಾರವಿದ್ದು ಸಿಂಧನೂರಿಗೆ ತನಕ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ‌. ಭಾರತ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿದೆ. ಜಲ, ವಾಯು, ನೆಲ ಮಾರ್ಗಗಳನ್ನು ವೇಗವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ಕೊಪ್ಪಳ ರೈಲು ನಿಲ್ದಾಣದ ಮರು ಅಭಿವೃದ್ದಿಯಿಂದಾಗಿ ಸಂಪರ್ಕ ರಸ್ತೆ ಉನ್ನತೀಕರಣ ಸಾಧ್ಯವಾಗುತ್ತದೆ. ಕಳೆದ ಒಂಬತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.

ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ಕುಷ್ಟಗಿ ಕ್ಷೇತ್ರದ ಜನ ರೈಲು ಸೌಲಭ್ಯ ಬಳಸಿಕೊಳ್ಳಲು ಕೊಪ್ಪಳ ಅಥವಾ ಹೊಸಪೇಟೆಗೆ ಹೋಗಬೇಕಾದ ಅನಿವಾರ್ಯತೆಯಿತ್ತು‌. ಆದರೆ ಈಗ ಕುಷ್ಟಗಿ ಸಮೀಪ ರೈಲು ಮಾರ್ಗ ಕಾಮಗಾರಿ ನಡೆಯುತ್ತಿದೆ. 2024ರ ಜೂನ್ ವೇಳೆಗೆ ಇದು ಪೂರ್ಣಗೊಳ್ಳಲಿದೆ ಎಂದರು.

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕ ಸಂಜಯ್ ಸಿಂಗ್ ಮಾತನಾಡಿ ₹21 ಕೋಟಿ ವೆಚ್ಚದಲ್ಲಿ ಕೊಪ್ಪಳ ಹಾಗೂ‌ ಮುನಿರಾಬಾದ್ ₹20 ಕೋಟಿಯಲ್ಲಿ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದಾಗಿ ಈ ಭಾಗದ ಆನೆಗೊಂದಿ ಹಾಗೂ ಹಂಪಿಯಂಥ ಪಾರಂಪರಿಕ ಸ್ಥಳಗಳಿಗೆ ತೆರಳುವುದು ಸುಲಭವಾಗಲಿದೆ ಎಂದರು.

ಏನೆಲ್ಲ ಅಭಿವೃದ್ಧಿ ಆಗಲಿದೆ :

ಈ ಯೋಜನೆಯಡಿ ನಿಲ್ದಾಣದ ಪ್ರವೇಶದ್ವಾರ, ಸಂಚಾರ ಪ್ರದೇಶ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಾಲಯ, ಅಂಗವಿಕಲ ಪ್ರಯಾಣಿಕರಿಗೆ ಅನುಕೂಲವಾಗುವ ಲಿಫ್ಟ್ ಮತ್ತು ಎಸ್ಕಲೇಟರ್‌, ನಿಲ್ದಾಣದ ಸ್ವಚ್ಛತೆ, ಉಚಿತ ವೈ-ಫೈ, ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು 'ಒಂದು ನಿಲ್ದಾಣ ಒಂದು ಉತ್ಪನ್ನ' ಮಳಿಗೆ ಮೂಲಕ ಪ್ರಯಾಣಿಕರಿಗೆ ತಲುಪಿಸುವ ವ್ಯವಸ್ಥೆ, ಎಕ್ಸಿಕ್ಯೂಟಿವ್‌ ಲೌಂಜ್‌, ರಿಟೇಲ್‌ ಮಳಿಗೆಗಳಿಗೆ ಸ್ಥಳ, ನಿಲ್ದಾಣದ ವಿನ್ಯಾಸ ಸೇರಿದಂತೆ ವಿವಿಧ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ.

ವಿಶೇಷವೆಂದರೆ ರೈಲು ನಿಲ್ದಾಣದ ಕಟ್ಟಡವನ್ನು ಆಧುನಿಕ ವಾಸ್ತುವಿನ್ಯಾಸ ದೊಂದಿಗೆ ಸುಧಾರಣೆಗೊಳಿಸಿ, ನಿಲ್ದಾಣದ ಎರಡೂ ಭಾಗಗಳನ್ನು ನಗರದ ಜೊತೆ ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ನಿಲ್ದಾಣದಲ್ಲಿ ಜೆಲ್ಲಿಕಲ್ಲು ರಹಿತ ಟ್ರ್ಯಾಕ್‌ಗಳ ನಿರ್ಮಾಣವಾಗಲಿದೆ.

ಮಾಜಿ ಶಾಸಕ ಕೆ. ಶರಣಪ್ಪ, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.