ಕುಕನೂರು (ಕೊಪ್ಪಳ ಜಿಲ್ಲೆ): ‘ಸಂಸ್ಕೃತಿಯಿಂದ ಸಂಪದ್ಭರಿತವಾದ ಕೊಪ್ಪಳ ಜಿಲ್ಲೆಯಲ್ಲಿ ಆಂಜನೇಯ ಜನಿಸಿದ ಪೂಣ್ಯಭೂಮಿಯಿದೆ. ಆದರೆ, ಕಾಂಗ್ರೆಸ್ ಬಜರಂಗದಳವನ್ನು ನಿಷೇಧ ಮಾಡುವ ಕುರಿತು ಪ್ರಣಾಳಿಕೆಯಲ್ಲಿ ಹೇಳಿದೆ. ಇಂಥ ಪಕ್ಷದ ಜಿಲ್ಲೆಯ ಅಭ್ಯರ್ಥಿಗಳಿಗೆ ವೋಟು ಕೊಡುತ್ತೀರಾ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಶ್ನಿಸಿದರು.
ಇಲ್ಲಿ ಶುಕ್ರವಾರ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಸಾವಿರಾರು ಜನರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ನಡೆಸಿದ ಅವರು ‘ಬಜರಂಗದಳವನ್ನು ಅವಮಾನ ಮಾಡುವವರು ಅಧಿಕಾರದಲ್ಲಿ ಇರಬೇಕಾ? ಅಂಥವರನ್ನು ನೀವು ಆಯ್ಕೆ ಮಾಡುವಿರಾ’ ಎಂದು ಪ್ರಶ್ನಿಸಿದಾಗ; ಜನ ‘ಇಲ್ಲ ಇಲ್ಲ’ ಎನ್ನುವ ಉತ್ತರ ನೀಡಿದರು.
‘ಈ ಬಾರಿಯ ಚುನಾವಣೆ ಹಾಲಪ್ಪ ಆಚಾರ್ ಅವರನ್ನು ಗೆಲ್ಲಿಸುವುದಕ್ಕೆ ಮಾತ್ರ ಸೀಮಿತವಲ್ಲ. ನಿಮ್ಮ ಭವಿಷ್ಯವನ್ನು ಭದ್ರ ಮಾಡಿಕೊಳ್ಳಲು ವೇದಿಕೆಯೂ ಆಗಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಕೋವಿಡ್‌ನಂಥ ಸಂಕಷ್ಟದ ಸಮಯದ ಬಳಿಕವೂ ದೇಶ ಪ್ರಗತಿಯತ್ತ ಸಾಗುವಂತೆ ಮಾಡಿದ್ದು ಮೋದಿ ಹಾಗೂ ಡಬಲ್ ಎಂಜಿನ್ ಸರ್ಕಾರ. ಆದ್ದರಿಂದ ರಾಜ್ಯದಲ್ಲಿಯೂ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಪ್ರಗತಿಯ ವೇಗ ದುಪ್ಪಟ್ಟಾಗುತ್ತದೆ. ಇಲ್ಲವಾದರೆ ವೇಗ ಕುಸಿತಯುತ್ತದೆ’ ಎಂದರು.
‘ಪರಿಶಿಷ್ಟ ಸಮುದಾಯಕ್ಕೆ ಸಲ್ಲಬೇಕಿದ್ದ ಮೀಸಲಾತಿ ನೀಡಿದ್ದೇವೆ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ವಾಪಸ್ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಯಾರ ಮೀಸಲಾತಿ ತೆಗೆದು ಕೊಡುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಹೆಚ್ಚು ಭ್ರಷ್ಟಾಚಾರಗಳು ನಡೆದಿದ್ದು, ಪಿಎಫ್‌ಐ ಕಾರ್ಯಕರ್ತರ ಮೇಲಿನ 175 ಪ್ರಕರಣಗಳನ್ನು ಸಿದ್ದರಾಮಯ್ಯ ವಾಪಸ್ ಪಡೆದಿದ್ದಾರೆ’ ಎಂದು ಆರೋಪಿಸಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ ‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅರ್ಹ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಹಾಕಿ ಸೋರಿಕೆ ತಡೆದಿದ್ದೇವೆ. ಚುನಾವಣೆ ಬಳಿಕ ಕಾಂಗ್ರೆಸ್ ಕಚೇರಿಗೆ ದೀಪ ಹಚ್ಚುವವರು ಕೂಡ ಇರುವುದಿಲ್ಲ’ ಎಂದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಗಿರೇಗೌಡ,ಮುಖಂಡರಾದ ವಿಶ್ವನಾಥ ಮರಿಬಸಪ್ಪನವರ, ಚಂದ್ರು ಹಲಗೇರಿ, ಅಜಯ್ ಮಹರ್, ಬಿ. ಪವನ ಕುಮಾರ್ ರೆಡ್ಡಿ, ನವೀನ ಗುಳಗಣ್ಣನವರ, ಜಗದೀಶ ಹಿರೇಮನಿ, ಬಸಲಿಂಗಯ್ಯ ಭೂತೆ, ರತನ್ ದೇಸಾಯಿ, ಶಕುಂತಲಾ ಮಾಲಿಪಾಟೀಲ, ಸಿ.ಎಚ್. ಪೊಲೀಸ್ ಪಾಟೀಲ್, ಶಿವಶಂಕರ ದೇಸಾಯಿ, ಅರವಿಂದಗೌಡ್ ಪಾಟೀಲ್, ಶಂಬಣ್ಣ ಜೋಳದ, ಕಳಕಪ್ಪ ಕಂಬಳಿ, ಸುಧಾಕರ್ ದೇಸಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.