ಹೆಸರು: ಶಿವರಾಜ ತಂಗಡಗಿ
ವಿದ್ಯಾರ್ಹತೆ: ಬಿಎಸ್‌ಸಿ
ವಯಸ್ಸು:52
ಜಾತಿ: ಭೋವಿ
ಕ್ಷೇತ್ರ: ಕನಕಗಿರಿ ಮೀಸಲು ಕ್ಷೇತ್ರ
ಎಷ್ಟನೇ ಬಾರಿಗೆ ಶಾಸಕ: 3ನೇ ಬಾರಿ
ಹಿಂದೆ ನಿರ್ವಹಿಸಿದ ಖಾತೆ: ಸಣ್ಣ ನೀರಾವರಿ
ಕೊಪ್ಪಳ: ಜಿಲ್ಲೆಯ ಕನಕಗಿರಿ ಮೀಸಲು (ಪರಿಶಿಷ್ಟ ಜಾತಿ) ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿ ಗೆಲುವು ಸಾಧಿಸಿರುವ ಭೋವಿ ಸಮಾಜದ ಶಿವರಾಜ ತಂಗಡಗಿ ಮೂರನೇ ಸಲ ಸಚಿವರಾದರು. ಹೀಗಾಗಿ ಗೆದ್ದ ಪ್ರತಿಸಲವೂ ಅವರಿಗೆ ಸಚಿವಗಿರಿಯ ಯೋಗ ಲಭಿಸಿದಂತಾಗಿದೆ.
ಮೂಲತಃ ಬಾಗಲಕೋಟೆ ಜಿಲ್ಲೆ ಇಳಕಲ್‌ನ ಗ್ರಾನೈಟ್ ಉದ್ಯಮಿ ತಂಗಡಗಿ 2001ರಲ್ಲಿ ಅಲ್ಲಿನ ಪುರಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸದಸ್ಯರಾದರು. ಬಳಿಕ ಬಿಜೆಪಿ ಸೇರಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಬಳಿಕ ಉಪಾಧ್ಯಕ್ಷರಾಗಿದ್ದರು. ಬಿಜೆಪಿಯಿಂದಲೂ ಪುರಸಭೆಗೆ ಆಯ್ಕೆಯಾದರು.
2008ರ ವಿಧಾನಸಭಾ ಚುನಾವಣೆಯಲ್ಲಿ ಕನಕಗಿರಿ ಮೀಸಲು ಕ್ಷೇತ್ರವಾಗಿದ್ದರಿಂದ ತಂಗಡಗಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಕೊಪ್ಪಳ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡರು. ಆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಪಡೆದರು. ಬಳಿಕ ಬಿಜೆಪಿಗೆ ಬೆಂಬಲ ನೀಡಿ 2008ರ ಮೇ 30ರಿಂದ 2011ರ ಸೆಪ್ಟೆಂಬರ್ ತನಕ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಖಾತೆಯ ಸಚಿವರಾದರು.
ಸೆಪ್ಟೆಂಬರ್ ಕೊನೆಯಲ್ಲಿ ಎಪಿಎಂಸಿ ಜೊತೆಗೆ ಸಣ್ಣ ಕೈಗಾರಿಕೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅಕ್ಟೋಬರ್ 10ರಿಂದ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಬಳಿಕ ಸುಪ್ರೀಂಕೋರ್ಟ್ ಆದೇಶದಂತೆ 2012ರ ಮೇ 13ರಿಂದ ಶಾಸಕರಾಗಿ ಮುಂದುವರಿದರು. 2013ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಣ್ಣ ನೀರಾವರಿ ಖಾತೆ ನಿರ್ವಹಣೆ ಮಾಡಿದ್ದರು. ಈಗ ಮತ್ತೆ ಸಚಿವರಾಗಿದ್ದಾರೆ.
ವೈಯಕ್ತಿಕ ಬದುಕು: ತಂಗಡಗಿ 1971ರ ಜೂನ್ 10ರಂದು ಇಳಕಲ್‌ನಲ್ಲಿ ಜನಿಸಿದರು. ಐದು ಜನ ಸಹೋದರರು ಹಾಗು ಮೂವರು ಸಹೋದರಿಯರು ಇದ್ದಾರೆ. ಪತ್ನಿ ವಿದ್ಯಾ ತಂಗಡಗಿ ಒಂದು ಬಾರಿ ಬಲಕುಂದಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆಯಾಗಿದ್ದರು. ಈ ದಂಪತಿಗೆ ಶಶಾಂಕ್, ಕಿರಣ್‌ಕುಮಾರ್ ಮತ್ತು ತನುಷಾ ಎಂಬ ಮಕ್ಕಳಿದ್ದಾರೆ.
ತಂಗಡಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಇಳಕಲ್‌ನಲ್ಲಿ ಮುಗಿಸಿ, ಬಾಗಲಕೋಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಪಿಯುಸಿ, ಇಳಕಲ್‌ನ ವಿಜಯ ಮಹಾಂತೇಶ್ವರ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಕಾಲೇಜು ದಿನಗಳಲ್ಲಿ ವಾಲಿಬಾಲ್, ಕಬಡ್ಡಿ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.