ಕೊಪ್ಪಳ: ಕೆಲ ತಿಂಗಳುಗಳ ಹಿಂದೆ ಜಿಲ್ಲೆಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದಾಗ ಐದೇ ದಿನಗಳಲ್ಲಿ ಅದನ್ನು ಮರಳಿ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಕನ್ನಯ್ಯ ನಾಯ್ಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ರಾಜ್ಯದ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳಿಗೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ತುಂಗಭದ್ರಾ ಜಲಾಶಯದ ನೀರು ಜೀವನಾಡಿಯಾಗಿದೆ. ಈ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿ ಹೋದಾಗ ರಾಜ್ಯ ಸರ್ಕಾರ ತ್ವರಿತವಾಗಿ ನೀರು ನಿಲ್ಲಿಸುವಂತೆ ಮಾಡಲು ಆಂಧ್ರದ ಕನ್ನಯ್ಯ ನಾಯ್ಡು ಅವರ ಮೊರೆ ಹೋಗಿತ್ತು.
ಜಲಾಶಯಗಳ ಕ್ರಸ್ಟ್ ಗೇಟ್ ಸುರಕ್ಷತಾ ತಜ್ಞರಾಗಿಯೂ ಹೆಸರು ಮಾಡಿರುವ ಕನ್ನಯ್ಯ ನಾಯ್ಡು ಘಟನೆ ನಡೆದ ಮರುದಿನವೇ ಬಂದು ತಾತ್ಕಾಲಿಕವಾಗಿ ಗೇಟ್ ಅಳವಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಗ ಜಲಾಶಯಕ್ಕೆ ಭೇಟಿ ನೀಡಿದಾಗ, ‘ನಮಗೆ ಕನ್ನಯ್ಯ ನಾಯ್ಡು ಅವರ ಮೇಲೆ ಭರವಸೆಯಿದೆ’ ಎಂದಿದ್ದರು. ಅವರ ನಿರೀಕ್ಷೆಯಂತೆ ಕಡಿಮೆ ಅವಧಿಯಲ್ಲಿ ಗೇಟ್ ಅಳವಡಿಸುವಲ್ಲಿ ಯಶಸ್ವಿಯಾಗಿರುವ ಕಾರಣ ರಾಜ್ಯ ಸರ್ಕಾರ ‘ರಾಜ್ಯೋತ್ಸವದ ಉಡುಗೊರೆ’ ನೀಡಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕನ್ನಯ್ಯ ನಾಯ್ಡು ’ಪ್ರಶಸ್ತಿ ಸಹಜವಾಗಿ ಖುಷಿ ನೀಡುತ್ತದೆ. ಈಗಿನ ಪರಿಸ್ಥಿತಿಯಲ್ಲಿ ನನಗೆ ಈ ಪ್ರಶಸ್ತಿ ಕೊಡುವ ಬದಲು ತುರ್ತಾಗಿ ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಲು ಕ್ರಮ ವಹಿಸಬೇಕು. ಅದೇ ನನಗೆ ದೊಡ್ಡ ಪ್ರಶಸ್ತಿ. ಕ್ರಸ್ಟ್ ಗೇಟ್ ಮರಳಿ ಅಳವಡಿಸುವಾಗ ಕೆಲಸ ಮಾಡಿದ ಕಾರ್ಮಿಕರಿಗೆ ಹಣ ತುರ್ತಾಗಿ ನೀಡಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.