ADVERTISEMENT

ಅಳವಂಡಿ: ತುಕ್ಕು ಹಿಡಿಯುತ್ತಿರುವ ‘ಸ್ವಚ್ಛ ವಾಹಿನಿ’

ಸ್ವಚ್ಚತೆ ಕಾಪಾಡುವಲ್ಲಿ ಕವಲೂರು ಗ್ರಾಮ ಪಂಚಾಯಿತಿ ವಿಫಲ: ಸಾರ್ವಜನಿಕರ ಆರೋಪ

ಜುನಸಾಬ ವಡ್ಡಟ್ಟಿ
Published 8 ನವೆಂಬರ್ 2024, 6:45 IST
Last Updated 8 ನವೆಂಬರ್ 2024, 6:45 IST
ಅಳವಂಡಿ ಸಮೀಪದ ಕವಲೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಬಳಕೆಯಾಗದೇ ನಿಂತಿರುವ ಕಸದ ವಾಹನ
ಅಳವಂಡಿ ಸಮೀಪದ ಕವಲೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಬಳಕೆಯಾಗದೇ ನಿಂತಿರುವ ಕಸದ ವಾಹನ   

ಅಳವಂಡಿ: ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆ ಮನೆಯಿಂದ ಒಣ, ಹಸಿ ಕಸ ಹಾಕಲು ಗ್ರಾಮ ಪಂಚಾಯಿತಿಗಳಿಗೆ ವಾಹನ ವ್ಯವಸ್ಥೆ ಮಾಡಿದೆ. ಆದರೆ, ವಾಹನ ಬಳಕೆಯಾಗದೆ ನಿಂತಲ್ಲಿ ನಿಂತು ತುಕ್ಕು ಹಿಡಿಯುತ್ತಿದೆ.

ಅಳವಂಡಿ ಸಮೀಪದ ಕವಲೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಸದ ವಾಹನವು ಮೂಲೆ ಗುಂಪಾಗಿದ್ದು , ಸುಮಾರು ಎರಡು ವರ್ಷಗಳಿಂದ ನಿಂತಲ್ಲೇ ನಿಂತ ಕಾರಣಕ್ಕೆ ದೂಳು ತಿನ್ನುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಸ್ವಚ್ಚ ವಾಹಿನಿಯು ಕಾರ್ಯನಿರ್ವಹಿಸುತ್ತಿಲ್ಲ.

ಪ್ರತಿ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಯೋಜನೆಯಡಿ ಗ್ರಾಮ ಪಂಚಾಯಿತಿಗೆ ಒಂದು ಕಸ‌ ವಿಲೇವಾರಿ ವಾಹನ ನೀಡಲಾಗಿದೆ.

ADVERTISEMENT

ಕಸದ ವಾಹನಕ್ಕೆ ಚಾಲಕರನ್ನು ನೇಮಕ ಮಾಡಿಕೊಳ್ಳುವುದೂ ಕಸ ವಿಲೇವಾರಿಯ ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸರ್ಕಾರದ ಆದೇಶದ ಪ್ರಕಾರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಲ್ಲಿನ ಮಹಿಳೆಯರು ಮಾತ್ರ ಚಾಲಕರಾಗಬೇಕು ಎಂಬ ನಿಯಮವಿದೆ.

ಕಸದ ವಾಹನ ಬಂದಾಗ ಆರಂಭದ ಎರಡ್ಮೂರು ತಿಂಗಳ ಮಾತ್ರ ಕಾರ್ಯನಿರ್ವಹಿಸಿದೆ. ಸ್ವಚ್ಚತೆ ಕಾಪಾಡುವಲ್ಲಿ ಗ್ರಾಮ ಪಂಚಾಯಿತಿ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

ನಿತ್ಯ ಗ್ರಾಮದಲ್ಲಿ ಕಸ ವಿಲೇವಾರಿ ಹಾಗೂ ಸ್ವಚ್ಛತೆ ಇಲ್ಲದೆ ಸಮಸ್ಯೆಯಾಗಿದೆ. ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ನಿರ್ಮಾಣವಾಗಿದೆ. ಹಾಗಾಗಿ ನಿತ್ಯ ಗ್ರಾಮ ಪಂಚಾಯಿತಿಯು ಕಸ ವಿಲೇವಾರಿ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಸ್ಥಳೀಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸ್ವಚ್ಛತೆ ವಾಹನ ಮೂಲೆಗುಂಪು ಆಗಿರುವದು ದುರಂತ.
-ರಣದಪ್ಪ ಸುಂಕಣ್ಣನವರ ಕವಲೂರು ಗ್ರಾಮಸ್ಥ
ಕಸದ ವಾಹನ ವಿತರಣೆ ಮಾಡಿದ ಕಂಪನಿ ಜೊತೆ ಮಾತನಾಡಿ ರಿಪೇರಿ ಮಾಡಿಸಲಾಗುವುದು. ಬಳಿಕ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ವಾಹನ ಹಸ್ತಾಂತರಿಸಲಾಗುವುದು
-ಸುರೇಶ ಪಿಡಿಒ ಕವಲೂರು ಗ್ರಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.