ಕೊಪ್ಪಳ: ಹಲವು ದಿನಗಳಿಂದ ಟೊಮೆಟೊ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಪರದಾಡುತ್ತಿದ್ದರೆ; ರೈತರು ಸಮೃದ್ಧ ಆದಾಯ ಪಡೆಯುತ್ತಿದ್ದಾರೆ. ಒಂದು ಹೆಜ್ಜೆ ಮುಂದಿರುವ ಕೊಪ್ಪಳ ಜಿಲ್ಲೆಯ ಬೆಳೆಗಾರರು ‘ಕೋಲಾರ ಮಾದರಿ’ಯಲ್ಲಿ ಟೊಮೆಟೊ ಕೃಷಿ ಮಾಡಿ ಭರಪೂರ ಫಸಲು ಹಾಗೂ ಬಂಪರ್ ಆದಾಯ ಗಳಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, ಮೊದಲಿನ ಸಾಮಾನ್ಯ ಕೃಷಿ ಪದ್ಧತಿಯಿಂದಾಗಿ ಪ್ರತಿ ಎಕರೆಗೆ 600 ರಿಂದ 700 ಕ್ರೇಟ್‌ನಷ್ಟು ಫಸಲು ಬರುತ್ತಿತ್ತು. ಪ್ರತಿ ಕ್ರೇಟ್‌ನಲ್ಲಿ 25 ಕೆ.ಜಿ. ಟೊಮೆಟೊ ಇರುತ್ತಿತ್ತು. ನಾಲ್ಕು ತಿಂಗಳ ಹಿಂದೆ ಆರಂಭಿಸಿದ ತಂತ್ರಜ್ಞಾನ ಆಧಾರಿತ ಕೋಲಾರ ಮಾದರಿಯಿಂದಾಗಿ ಈಗ ಪ್ರತಿ ಎಕರೆಗೆ 1800 ರಿಂದ 1900 ಕ್ರೇಟ್‌ನಷ್ಟು ಫಸಲು ಬರುತ್ತಿದೆ.
ಕೊಪ್ಪಳ ತಾಲ್ಲೂಕಿನ ಚಿಲವಾಡಗಿ ಗ್ರಾಮದ ರೈತ ಅಶೋಕ ಹಿಂದಿನಮನಿ ಒಂದು ಎಕರೆಯಲ್ಲಿ ಕೋಲಾರ ಮಾದರಿಯಲ್ಲಿ ಟೊಮೆಟೊ ಕೃಷಿ ಮಾಡಿದ್ದಾರೆ. ಅವರ ಅದೃಷ್ಟಕ್ಕೆ ಈಗ ಟೊಮೆಟೊ ಬೆಲೆ ಪ್ರತಿ ಕೆ.ಜಿ.ಗೆ ₹100 ರಿಂದ ₹120 ಆಗಿದೆ. ಹೀಗಾಗಿ ಮೂರು ತಿಂಗಳಲ್ಲಿ ಅವರು ಒಂದು ಎಕರೆಗೆ ಖರ್ಚು ಮಾಡಿದ ₹1 ಲಕ್ಷಕ್ಕೆ ಈಗ ಮೂರು ಪಟ್ಟು ಹೆಚ್ಚು ಹಣ ಸಂಪಾದಿಸಿದ್ದಾರೆ. ಈಗಾಗಲೇ 1500 ಕ್ರೇಟ್ ಟೊಮೆಟೊ ಮಾರಾಟ ಮಾಡಿರುವ ಅವರ ತೋಟದಲ್ಲಿ ಈಗ ಇನ್ನೂ 400 ಕ್ರೇಟ್‌ನಷ್ಟು ಫಸಲು ಇದ್ದು, ಲಾಭದ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಇದೊಂದು ಉದಾಹರಣೆ ಮಾತ್ರ. ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ರೈತರು ಇಂಥ ಪ್ರಯೋಗ ಮಾಡಿದ್ದಾರೆ.
ಏನಿದು ಕೋಲಾರ ಮಾದರಿ: ಬೆಳೆದ ಟೊಮೆಟೊ ನೆಲದ ಸಂಪರ್ಕಕ್ಕೆ ಬಂದರೆ ಬೇಗನೆ ಹಾಳಾಗುತ್ತದೆ. ಅದನ್ನು ತಪ್ಪಿಸಲು ಟೊಮೆಟೊ ಸಸಿಯನ್ನು ನೆಲದ ಮೇಲೆ ಬೆಳೆಯಲು ಬಿಡದೆ ಎತ್ತರದಲ್ಲಿ ಕಟ್ಟಿಗೆ ಕಟ್ಟಿ ದಾರದ ಮೂಲಕ ಸಸಿ ಜೋಡಿಸಲಾಗುತ್ತಿದೆ. ಮಣ್ಣಿನಲ್ಲಿ ತೇವಾಂಶ ಉಳಿಸಲು ಪ್ಲಾಸ್ಟಿಕ್ ಹೊದಿಕೆ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಸತತವಾಗಿ ಫಸಲು ಬರುತ್ತಿದ್ದರೂ ಯಾವುದೇ ಕಾರಣಕ್ಕೂ ಟೊಮೆಟೊ ಹಾಳಾಗದಂತೆ ರಕ್ಷಣೆ ಮಾಡುವ ತಂತ್ರ ಇದಾಗಿದೆ.
ಮೊದಲು ಟೊಮೆಟೊ ಗಿಡವನ್ನು ನೆಲದ ಮೇಲೆಯೇ ಬಿಡುತ್ತಿದ್ದರಿಂದ ಸಣ್ಣ ಮಳೆಯಾದರೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತಿತ್ತು. ಈಗ ಹೊಸ ಮಾದರಿಯಿಂದ ದೊಡ್ಡ ಮಳೆಯಾಗಿ ಮಡಿಯಲ್ಲಿ ನೀರು ನಿಂತರೂ ಫಸಲು ಹಾಳಾಗುವುದಿಲ್ಲ ಎನ್ನುತ್ತಾರೆ ಜಿಲ್ಲೆಯ ಟೊಮೆಟೊ ಬೆಳೆಗಾರರು.
ಟೊಮೆಟೊ ಹಣ್ಣುಗಳಿಗೆ ಹುಳ ತಗುಲದಂತೆ ಬಲೆಗಾಗಿ ಡಬ್ಬಿಗಳನ್ನು ಗಿಡಗಳ ಮೇಲ್ಬಾಗದಲ್ಲಿ ಕಟ್ಟಲಾಗುತ್ತಿದೆ. ಆ ಬಲೆಯಲ್ಲಿ ಹೆಣ್ಣು ಹುಳದ ವಾಸನೆ ಹೊಂದಿರುವ ‘ಲ್ಯೂರ್ ಬಿಸ್ಕಟ್’ಗಳನ್ನು ಹಾಕಲಾಗುತ್ತದೆ. ಡಬ್ಬಿಯಲ್ಲಿರುವ ಲ್ಯೂರ್ ಬಯಸಿ ಬರುವ ಹುಳು ಅಲ್ಲಿಯೇ ಸೆರೆಯಾಗಿ ಸಾಯುತ್ತದೆ. ಇದರಿಂದ ಫಸಲಿಗೆ ಹುಳುವಿನ ಕಾಟ ಇರುವುದಿಲ್ಲ. ಇದು ಪರಿಸರ ಸ್ನೇಹಿ ಕೀಟ ವಿಧಾನವೂ ಹೌದು. ಈ ಕುರಿತು ಇಲ್ಲಿನ ತೋಟಗಾರಿಕಾ ಇಲಾಖೆ ಕಿಸಾನ್ ಕೇರ್ ಕೇಂದ್ರಗಳ ಮೂಲಕ ರೈತರಿಗೆ ಜಾಗೃತಿ ಮೂಡಿಸುತ್ತಿದೆ.
ಮೊದಲು ಮೆಕ್ಕೆಜೋಳ ಬೆಳೆದು ಸಾಲದ ಸುಳಿಗೆ ಸಿಲುಕಿಕೊಂಡಿದ್ದೆ. ಈಗ ಒಂದು ಎಕರೆಯಲ್ಲಿ ಕೋಲಾರ ಮಾದರಿಯಲ್ಲಿ ಟೊಮೊಟೊ ಬೆಳೆದು ಸಮೃದ್ಧ ಆದಾಯ ಒಳ್ಳೆಯ ಫಸಲು ಪಡೆದುಕೊಂಡಿದ್ದೇನೆ–ಅಶೋಕ ಹಿಂದಿನಮನಿ ಕೊಪ್ಪಳದ ರೈತ
ಕೋಲಾರ ಭಾಗದಂತೆ ಈಗ ಕೊಪ್ಪಳದಲ್ಲಿಯೂ ಟೊಮೊಟೊ ಬೆಳೆಯಲಾಗುತ್ತಿದ್ದು ಎರಡು ಅವಧಿಯಲ್ಲಿ ರೈತ ಪಡೆಯುತ್ತಿದ್ದ ಫಸಲು ಈಗ ಒಂದೇ ಅವಧಿಯಲ್ಲಿ ಬರುತ್ತಿದೆ. ಪರಿಕರಗಳ ಖರೀದಿಗೆ ರೈತರಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ–ಕೃಷ್ಣ ಉಕ್ಕುಂದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.