ಕೊಪ್ಪಳ: ಸರಿಯಾಗಿ ಒಂದು ವರ್ಷದ ಹಿಂದೆ ಒಂದೆಡೆ ವ್ಯಾಪಕ ಬರಗಾಲ ಕಾಡಿದ್ದರೆ, ಇನ್ನೊಂದೆಡೆ ಸುರಿದ ಅಕಾಲಿಕ ಮಳೆಗೆ ಬೆಳೆ ಹಾಳಾಗಿತ್ತು. ಹಾಳಾದ ಬೆಳೆಗೆ ವರ್ಷವಾದರೂ ಎಲ್ಲ ರೈತರಿಗೆ ಬೆಳೆ ಪರಿಹಾರ ಮಂಜೂರು ಆಗದಿರುವುದು ಅನ್ನದಾತರನ್ನು ಸಂಕಷ್ಟಕ್ಕೀಡು ಮಾಡಿದೆ.
ಒಂದೇ ತಿಂಗಳಲ್ಲಿ ಸುರಿದ ವಾಡಿಕೆಗಿಂತಲೂ ಹೆಚ್ಚು ಮಳೆ ಹಾಗೂ ತೇವಾಂಶದ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬಹುತೇಕ ಬೆಳೆಗಳು ಬಾಡಿಹೋಗಿದ್ದವು. ಬೇಡವಾದ ಸಮಯಕ್ಕೆ ಮಳೆ ಸುರಿದ ಪರಿಣಾಮ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಭಾಗದಲ್ಲಿ ಭತ್ತ ಹಾಳಾಗಿತ್ತು. 2023ರ ನವೆಂಬರ್‌ನಲ್ಲಿಯೇ ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ‘ರಾಜ್ಯದ ರೈತರಿಗೆ ಬರ ಪರಿಹಾರವನ್ನು ಫ್ರೂಟ್ಸ್ ಆ್ಯಪ್ ಮೂಲಕ ನೀಡಲು ಯೋಜನೆ ರೂಪಿಸಲಾಗಿದ್ದು ಒಂದು ವಾರದಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು.
ಹಿಂದಿನ ನವೆಂಬರ್‌ನಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಗೆ ಅಂದಾಜು 7,646.7 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿತ್ತು. ಇದರಲ್ಲಿ 5,719.8 ಹೆಕ್ಟೇರ್ ಪ್ರದೇಶವನ್ನು ಸರ್ವೆ ಸಂಖ್ಯೆಗೆ ಅನುಗುಣವಾಗಿ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಆದರೆ ಪಹಣಿ ಹಾಗೂ ಆಧಾರ್‌ಗೆ ಹೆಸರು ಹೊಂದಾಣಿಕೆಯಾಗದ ಕಾರಣ ಸುಮಾರು 4,822 ಪ್ರಕರಣಗಳು ವರ್ಷವಾದರೂ ಇತ್ಯರ್ಥ್ಯವಾಗದೆ ಆಯಾ ವ್ಯಾಪ್ತಿಯ ತಹಶೀಲ್ದಾರ್‌ಗಳ ಲಾಗಿನ್‌ನಲ್ಲಿ ಅನುಮೋದನೆಗೆ ಬಾಕಿ ಉಳಿದುಕೊಂಡಿವೆ. ತಹಶೀಲ್ದಾರ್‌ಗಳ ಲಾಗಿನ್ ಸಕ್ರಿಯಗೊಳಿಸಿದರೆ ತ್ವರಿತವಾಗಿ ಪ್ರಕರಣಗಳನ್ನು ಅನುಮೋದನೆ ಮಾಡಲು ಸಾಧ್ಯವಾಗುತ್ತದೆ.
ಈ ಕುರಿತು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಇದೇ ಸೆಪ್ಟೆಂಬರ್ 20ರಂದು ಕಂದಾಯ ಇಲಾಖೆಯ (ವಿಪತ್ತು) ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದಾರೆ.
ಒಂದೆಡೆ ಬರಗಾಲದ ನಡುವೆಯೂ ಉತ್ತಮ ಫಸಲು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕ ಮಳೆ ತಂದ ಹಾನಿ ಸಂಕಷ್ಟಕ್ಕೆ ದೂಡಿತ್ತು. ಸರ್ಕಾರದಿಂದ ಸಿಗುವ ಪರಿಹಾರ ಬದುಕಿಗೆ ಆಸರೆಯಾಗಬಹುದು ಎನ್ನುವ ನಿರೀಕ್ಷೆ ಅವರಲ್ಲಿತ್ತು. ವರ್ಷವಾದರೂ ಪ್ರಕರಣಗಳು ಪರಿಹಾರವಾಗದ ಕಾರಣ ಅನ್ನದಾತ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾನೆ.
ಹಿಂದಿನ ವರ್ಷದ ಮುಂಗಾರು ಹಂಗಾಮಿನ ಆರಂಭದಿಂದಲೇ ಜಿಲ್ಲೆಯಲ್ಲಿ ಅಕ್ಟೋಬರ್‌ವರೆಗೆ ಮಳೆ ಕೊರತೆ ಕಾಡಿತ್ತು. ಆದರೆ ನವೆಂಬರ್‌ನಲ್ಲಿ ವ್ಯಾಪಕ ಮಳೆ ಸುರಿದು ಕಟಾವಿಗೆ ಬಂದಿದ್ದ ಫಸಲು ಹಾಳಾಗಿತ್ತು. ನವೆಂಬರ್‌ನಲ್ಲಿ ಕಾರಟಗಿ ತಾಲ್ಲೂಕಿನಲ್ಲಿ ವಾಡಿಕೆ 2.80 ಸೆಂ.ಮೀ.ನಷ್ಟಿದ್ದರೂ 4.67 ಸೆಂ.ಮೀ. ಮಳೆ ಬಂದರೆ (ಶೇ. 66ರಷ್ಟು ಹೆಚ್ಚು), ಕೊಪ್ಪಳ ತಾಲ್ಲೂಕಿನಲ್ಲಿ ವಾಡಿಕೆ 2.66 ಸೆಂ.ಮೀ. ಗಿಂತ ಶೇ. 41ರಷ್ಟು, ಯಲಬುರ್ಗಾ ತಾಲ್ಲೂಕಿನಲ್ಲಿ ವಾಡಿಕೆ 2.26ಗಿಂತ ಶೇ. 77ರಷ್ಟು, ಕುಕನೂರು ತಾಲ್ಲೂಕಿನಲ್ಲಿ ವಾಡಿಕೆ 2.83 ಸೆಂ.ಮೀ.ಗಿಂತ ಶೇ. 112ರಷ್ಟು ಹೆಚ್ಚು ಮಳೆಯಾಗಿತ್ತು. ನವೆಂಬರ್ ಒಂದರಲ್ಲಿಯೇ ಕುಕನೂರು ತಾಲ್ಲೂಕಿನಲ್ಲಿ 6.01 ಸೆಂ.ಮೀ. ಮಳೆ ಬಂದಿತ್ತು. ಕನಕಗಿರಿ ತಾಲ್ಲೂಕಿನಲ್ಲಿ 4.2 ಸೆಂ.ಮೀ. ವಾಡಿಕೆಗಿಂತಲೂ ಶೇ. 25ರಷ್ಟು ಹೆಚ್ಚಿನ ಮಳೆಯಾಗಿತ್ತು. ಆ ತಿಂಗಳಲ್ಲಿ ಜಿಲ್ಲೆಯ ಒಟ್ಟು 3 ಸೆಂ.ಮೀ.ನಷ್ಟು ವಾಡಿಕೆ ಮಳೆಯಿದ್ದರೂ ಶೇ. 29ರಷ್ಟು ಹೆಚ್ಚು ಮಳೆ ಸುರಿದಿತ್ತು.
ತಾಂತ್ರಿಕ ತೊಂದರೆಯಿಂದಾಗಿ ಕೆಲವರ ಖಾತೆಗೆ ಹಣ ಜಮೆ ಬಾಕಿ ಉಳಿದಿದ್ದು ಈ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವೆ.ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ
ಬಾಕಿ ಉಳಿದ ರೈತರಿಗೆ ಪರಿಹಾರ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಶೀಘ್ರದಲ್ಲಿಯೇ ಖಾತೆಗೆ ಹಣ ಜಮೆಯಾಗಲಿದೆ.ರುದ್ರೇಶಪ್ಪ ಟಿ.ಎಸ್. ಕೃಷಿ ಇಲಾಖೆ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.