ಕೊಪ್ಪಳ: ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಆದರೆ ಆ ಕೆಲಸವನ್ನು ಮಾಡುವ ಅಧಿಕಾರಿಗಳಲ್ಲಿ ಹಲವರು ಸರಿಯಾದ ಸಮಯಕ್ಕೆ ಕಚೇರಿಗೆ ಬಾರದೆ ’ಸಭೆ ಇದೆ’ ಎನ್ನುವ ನೆಪ ಮುಂದಿಡುತ್ತಿದ್ದು, ಈ ಕುರಿತು ವ್ಯಾಪಕ ದೂರುಗಳು ಕೇಳಿಬಂದಿವೆ.
ಆದ್ದರಿಂದ ಜಿಲ್ಲಾಧಿಕಾರಿ ನಲಿನ್ ಅತುಲ್ ಸರ್ಕಾರದ ಸೂಚನೆಯಂತೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಬಯೊಮೆಟ್ರಿಕ್ ಅಳವಡಿಕೆ ಕಡ್ಡಾಯ ಮಾಡಬೇಕು ಎಂದು ಬುಧವಾರ ಆದೇಶ ಹೊರಡಿಸಿದ್ದಾರೆ.
‘ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ಕಚೇರಿಯಲ್ಲಿ ತಮ್ಮ ಇರುವಿಕೆಯನ್ನು ಬಯೊಮೆಟ್ರಿಕ್ ಹಾಜರಾತಿ ಮೂಲಕ ದೃಢಪಡಿಸಬೇಕಾಗಿದೆ. ಇದರಿಂದ ಅಧಿಕಾರಿಗಳ ಹಾಜರಾತಿ ಕುರಿತು ನಿಗಾ ವಹಿಸಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬಯೊಮೆಟ್ರಿಕ್ ಕಡ್ಡಾಯ ಎಂದು ಈ ಹಿಂದೆಯೇ ಸೂಚಿಸಿದ್ದರೂ ಜಿಲ್ಲಾಡಳಿತ ಭವನ ಮತ್ತು ಹೊರಗಡೆ ಇರುವ ಹಲವು ಸರ್ಕಾರಿ ಕಚೇರಿಗಳಲ್ಲಿ ಬಯೊಮೆಟ್ರಿಕ್ ಅಳವಡಿಕೆ ಮಾಡಿಲ್ಲ. ಸರ್ಕಾರಿ ಕಚೇರಿಯ ಸಮಯ ಬೆಳಿಗ್ಗೆ 10 ಗಂಟೆಗೆ ನಿಗದಿ ಮಾಡಿದ್ದರೂ ಕೆಲವರು ವಿನಾಕಾರಣ ತಡವಾಗಿ ಬರುವುದು, ತಮ್ಮ ಮೇಲಧಿಕಾರಿಗಳು ರಜೆ ಇದ್ದಾಗಲಂತೂ ಅರ್ಧ ದಿನ ಕಳೆದ ಬಳಿಕವೇ ಕಚೇರಿಗೆ ಬರುವ ಪ್ರಕರಣಗಳು ನಡೆಯುತ್ತಲೇ ಇವೆ. ಇನ್ನೂ ಕೆಲವರು ಕಚೇರಿಯ ಮೊಬೈಲ್ ಸಂಖ್ಯೆ ಇರುವ ಫೋನ್ ಕಚೇರಿಯಲ್ಲಿಯೇ ಬಿಟ್ಟು ಹೊರಗಡೆ ಓಡಾಡುತ್ತಿರುವ ಆರೋಪಗಳು ಕೂಡ ಇವೆ.
ಆದ್ದರಿಂದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು ‘ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು. ಮೇಲಧಿಕಾರಿಗಳು ಈ ಕುರಿತು ನಿಗಾ ವಹಿಸಬೇಕು. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ಬಯೊಮೆಟ್ರಿಕ್ ಅಳವಡಿಸಬೇಕು’ ಎಂದಿದ್ದಾರೆ.
‘ಕೆಲವು ಅಧಿಕಾರಿಗಳು ಸಭೆ ನೆಪಗಳನ್ನು ಮುಂದಿಟ್ಟು ಹೊರಗಡೆ ಸುತ್ತಾಡುತ್ತಾರೆ. ಸಭೆಯಲ್ಲಿಯೂ ಹಾಜರು ಇರುವುದಿಲ್ಲ, ಕಚೇರಿಯಲ್ಲಿಯೂ ಇರುವುದಿಲ್ಲ. ಸಾರ್ವಜನಿಕರು, ಸಂಘ ಸಂಸ್ಥೆಯವರು ಬಂದು ನಮ್ಮ ಮೇಲಧಿಕಾರಿಗಳನ್ನು ಕೇಳಿದರೆ ಉತ್ತರ ನೀಡುವುದೇ ಕಷ್ಟವಾಗುತ್ತದೆ’ ಎಂದು ಹೆಸರು ಹೇಳಲು ಬಯಸದ ಕೆಳಹಂತದ ಸಿಬ್ಬಂದಿಯೊಬ್ಬರು ನೋವು ತೋಡಿಕೊಂಡರು.
ಈಗ ಬಯೊಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಿದ್ದು, ಇನ್ನು ಮುಂದಾದರೂ ಸಮಯಕ್ಕೆ ಸರಿಯಾಗಿ ಬರುವ ಪ್ರಮಾಣ ಹೆಚ್ಚಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಲಾಗಿದೆ. ಈ ಸೂಚನೆ ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು.ನಲಿನ್ ಅತುಲ್ ಕೊಪ್ಪಳ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.