ADVERTISEMENT

ಕೊಪ್ಪಳ: ಅಭ್ಯರ್ಥಿಗೆ ತಲೆನೋವಾದ ಕಾಂಗ್ರೆಸ್‌ ನಾಯಕರ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 13:48 IST
Last Updated 8 ಏಪ್ರಿಲ್ 2024, 13:48 IST
ರಾಜಶೇಖರ ಹಿಟ್ನಾಳ
ರಾಜಶೇಖರ ಹಿಟ್ನಾಳ   

ಕೊಪ್ಪಳ: ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ನಾಯಕರ ತಿಕ್ಕಾಟ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರಿಗೆ ತಲೆನೋವಾಗಿದೆ.

ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವ ಪಕ್ಷೀಯರಿಂದಲೇ ನನಗೆ ಸೋಲಾಗಿದೆ ಎಂದು ಹೇಳುತ್ತಿದ್ದರೆ, ಇನ್ನೊಂದು ಬಣದಲ್ಲಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌. ಶ್ರೀನಾಥ್‌ ಸ್ವಂತ ತಪ್ಪು ಮತ್ತು ಅಹಂಕಾರದಿಂದ ಅನ್ಸಾರಿಗೆ ಸೋಲಾಗಿದೆ ಎಂದು ಟೀಕಿಸುತ್ತಿದ್ದಾರೆ.

ಹೀಗಾಗಿ ಈ ಇಬ್ಬರೂ ನಾಯಕರು ಪರಸ್ಪರ ಪ್ರತ್ಯೇಕವಾಗಿಯೇ ಪಕ್ಷದ ಸಭೆಗಳನ್ನು ನಡೆಸುತ್ತಿದ್ದಾರೆ. ಶ್ರೀನಾಥ್‌ ನಡೆಸುವ ಸಭೆಗೆ ಹೋಗದಂತೆ ಅನ್ಸಾರಿ ತಮ್ಮ ಬೆಂಬಲಿಗರಿಗೆ ಸಂದೇಶ ನೀಡಿದ್ದಾರೆ. ಹೀಗಾಗಿ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಒಡೆದ ಮನೆಯಾಗಿದ್ದು ಅಭ್ಯರ್ಥಿ ಎರಡೂ ಕಡೆಗೂ ಸಭೆಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ADVERTISEMENT

ಗಂಗಾವತಿಯಲ್ಲಿ ಸೋಮವಾರ ಎಚ್‌.ಆರ್‌. ಶ್ರೀನಾಥ್‌ ಪಾಲ್ಗೊಂಡಿದ್ದ ಸಭೆಗೆ ಅನ್ಸಾರಿ ಗೈರಾಗಿದ್ದರು. ಇದರಿಂದ ವಾಗ್ದಾಳಿ ನಡೆಸಿರುವ ಶ್ರೀನಾಥ್‌ ‘ಅನ್ಸಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಂದಲೇ ಕಾಂಗ್ರೆಸ್‌ ಹಾಳಾಗುತ್ತಿದೆ’ ಎಂದು ಟೀಕಿಸಿದ್ದಾರೆ.

ಈ ಬೆಳವಣಿಗೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ‘ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಸರಿಪಡಿಸಲಾಗುವುದು. ಇದು ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಪರಿಣಾಮ ಬೀರುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.