ADVERTISEMENT

ಕೊಪ್ಪಳ: ‘ಬೊಂಬೆ ಹೇಳುತೈತೆ ನೀನೇ ರಾಜಕುಮಾರ...’

ಜಿಲ್ಲಾ ಕ್ರೀಡಾಂಗಣದಲ್ಲಿ ರಜತ ಮಹೋತ್ಸವಕ್ಕೆ ಅದ್ದೂರಿ ತೆರೆ, ವಿಜಯಪ್ರಕಾಶ್‌ ಹಾಡಿಗೆ ಕುಣಿದು ಕುಪ್ಪಳಿಸಿದ ಜನ

ಪ್ರಮೋದ
Published 12 ಮಾರ್ಚ್ 2023, 5:13 IST
Last Updated 12 ಮಾರ್ಚ್ 2023, 5:13 IST
ಕೊಪ್ಪಳ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಸೇರಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರಗಳು/ಭರತ್‌ ಕಂದಕೂರ
ಕೊಪ್ಪಳ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಸೇರಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರಗಳು/ಭರತ್‌ ಕಂದಕೂರ   

ಕೊಪ್ಪಳ (ಕೊಪಣಾಚಲ ವೇದಿಕೆ): ಕಣ್ಣು ಹಾಯಿಸಿದಷ್ಟೂ ದೂರ ಜನಸಾಗರವೇ ಕಾಣುತ್ತಿದ್ದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ತನಕವೂ ಹಬ್ಬದ ವಾತವರಣ ನಿರ್ಮಾಣವಾಗಿತ್ತು. ಹಾಸ್ಯ ಕಲಾವಿದರ ನಗೆ ಚಟಾಕಿ, ಗಾಯಕ ವಿಜಯ ಪ್ರಕಾಶ್ ಹಾಡುಗಳ ಮೋಡಿ ಹಾಗೂ ನಿರೂಪಕಿ ಅನುಶ್ರೀ ಮಾತಿನ ಕಚಗುಳಿ ಜನರನ್ನು ಸಂಭ್ರಮದಲ್ಲಿ ತೇಲಾಡುವಂತೆ ಮಾಡಿತು.

ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಕಂಡು ಬಂದ ಚಿತ್ರಣವಿದು. ವಿಜಯ್‌ ಪ್ರಕಾಶ್‌ ಹಾಡಿದ ಹಾಡುಗಳು ಜನರ ಮನೆಸೂರೆಗೊಂಡವು. ‘ಜೈ ಹೋ ಜೈ ಹೋ’ ಎಂದು ಹಾಡುತ್ತಲೇ ವೇದಿಕೆಗೆ ಬಂದ ವಿಜಯ ಪ್ರಕಾಶ್ ‘ಕೊಪ್ಪಳ ನಮಸ್ಕಾರ’ ಎಂದಾಗ ಜನ ಹುಚ್ಚೆದ್ದು ಕೇಕೇ ಹೊಡೆದರು. ‘ಬೊಂಬೆ ಹೇಳುತೈತೆ ನೀನೇ ರಾಜಕುಮಾರ...’ ಎಂದು ಮೊದಲ ಹಾಡು ಹಾಡಿದಾಗ ಜನ ಭಾವಾವೇಶದಿಂದ ಎದ್ದು ನಿಂತು ಸಂಭ್ರಮಿಸಿ ಮೊಬೈಲ್‌ನಲ್ಲಿ ಟಾರ್ಚ್‌ ಹಚ್ಚಿ ದಿವಂಗತ ಪುನೀತ್‌ ರಾಜಕುಮಾರ್‌ಗೆ ಗೌರವ ಸಲ್ಲಿಸಿದರು. ‘ಕಾಣದಂತೆ ಮಾಯವಾದನೊ, ನಮ್ಮ ಶಿವ ಕೈಲಾಸ ಸೇರಿಕೊಂಡನೊ’ ಹಾಡಿಗೆ ಜನ ಹೆಜ್ಜೆ ಹಾಕಿದರು.

ಹಿನ್ನೆಲೆ ಗಾಯಕ ನಿಖಿಲ್‌ ‘ಕನ್ನಡ ಮಣ್ಣನು ಮರೀಬೇಡ. ಓ ಅಭಿಮಾನಿ’ ಎನ್ನುವ ಹಾಡಿಗೆ ಬಾರಿ ಕರತಾಡನ ವ್ಯಕ್ತವಾಯಿತು. ಶುಕ್ರವಾರ ತಡರಾತ್ರಿಯ ತನಕ ಗಾಯಕಿ ಅನನ್ಯಾ ಭಟ್‌ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದ ಜಿಲ್ಲೆಯ ಜನ ಶನಿವಾರವೂ ಸಂಭ್ರಮಿಸಿದರು.

ADVERTISEMENT

ಹಾಸ್ಯ ಕಲಾವಿದ ನರಸಿಂಹ ಜೋಶಿ ಚಟಾಕಿ ಹಾರಿಸಿ ‘ಮದುವೆಯಲ್ಲಿ ಹೆಂಡತಿ ಗಂಡನ ಮಾತು ಕೇಳುವುದಿಲ್ಲ. ಆದರೆ, ಫೋಟೊಗ್ರಾಫರ್‌ ಮಾತು ಕೇಳುತ್ತಾಳೆ. ಆದ್ದರಿಂದ ನಿಜವಾದ ಗಂಡಸು ಎಂದರೆ ಫೋಟೊಗ್ರಾಫರ್‌’ ಎಂದಾಗ ಭಾರಿ ಸಂಭ್ರಮ ಕಂಡು ಬಂತು.

ಬಿ. ಪ್ರಾಣೇಶ್ ‘ಕೊಪ್ಪಳದಲ್ಲಿ ಗವಿಮಠದ ಜಾತ್ರೆ ಹೊರತುಪಡಿಸಿದರೆ ಇಷ್ಟೊಂದು ಜನರ ನಡುವೆ ಮಾತನಾಡುತ್ತಿರುವುದು ಇದೇ ಮೊದಲು’ ಎಂದರು.

ಶೌಚಾಲಯ ಕಟ್ಟಿಸಲು ಜಿಲ್ಲಾ ಪಂಚಾಯಿತಿ ಅನುದಾನ ಕೊಟ್ಟರೂ ಅಲ್ಲಿ ಕಟ್ಟಡ ಕಟ್ಟಿ ಅಂಗಡಿಗೆ ಬಾಡಿಗೆ ಕೊಟ್ಟಿದ್ದಾರೆ. ಎರಡನೇ ಕೊಪ್ಪಳದ ಜಾತ್ರೆ ಎನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಿಮಿಕ್ರಿ: ಕೊಪ್ಪಳ ಸಮೀಪದ ಕೂಕನಪಳ್ಳಿ ಗ್ರಾಮದ ಹಾಸ್ಯ ಕಲಾವಿದ ಶರಣಪ್ಪ ವಿವಿಧ ಚಿತ್ರನಟರ ಹಾಗೂ ಜನಪ್ರತಿನಿಧಿಗಳ ಮಿಮಿಕ್ರಿ ಮಾಡಿದ್ದು ಗಮನ ಸೆಳೆಯಿತು.

ಚಿತ್ರನಟರಾದ ದರ್ಶನ್, ಡಾ. ರಾಜಕುಮಾರ್, ಯಶ್, ಶಂಕರನಾಗ್, ವಿರೇಂದ್ರ ಗೋಪಾಲ, ವಿಷ್ಣುವರ್ಧನ್, ಶಿವರಾಜ್ ಕುಮಾರ್, ಟೆನ್ನಿಸ್ ಕೃಷ್ಣ, ರಾಜಕೀಯ ಮುಖಂಡರಾದ ಎಚ್‌.ಡಿ. ದೇವೇಗೌಡ, ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ ಅವರ ಧ್ವನಿ ಮಿಮಿಕ್ರಿ ಮಾಡುವ ಮೂಲಕ ಜನರ ಚಪ್ಪಾಳೆ ಗಿಟ್ಟಿಸಿದರು.

ಇದಕ್ಕೂ ಮೊದಲು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಸಂಗೀತ, ಕ್ಯಾರಿಯೋನೆಟ್‌, ಹಿಂದೂಸ್ಥಾನಿ ಸಂಗೀತ ಹಾಗೂ ತಬಲಾ ಸೋಲೊ, ತತ್ವ ಪದಗಳು, ವಾಯ ಲಿನ್‌ ವಾದನ, ಗೊಂದಲಿಗರ ಪದಗಳು, ಜಾನ ಪದ ನೃತ್ಯ, ತೊಗಲು ಬೊಂಬೆಯಾಟ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜನಮ ನೆಸೂರೆ ಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.