ADVERTISEMENT

ಗವಿಮಠದ ಭಕ್ತಿಗೆ ಮಿಡಿದ ಮನ: ₹10 ಕೋಟಿ ಬಿಡುಗಡೆಗೆ ಸಿಎಂ ಬೊಮ್ಮಾಯಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 14:52 IST
Last Updated 28 ಜೂನ್ 2022, 14:52 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಕೊಪ್ಪಳ: ಗವಿಸಿದ್ದೇಶ್ವರ ಮಠದಲ್ಲಿ ಉಚಿತ ವಸತಿ ಹಾಗೂ ಪ್ರಸಾದ ನಿಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ವತಿಯಿಂದ ₹10 ಕೋಟಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.

ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಈ ಕುರಿತು ಮಾಡಿದ ಮನವಿಗೆ ಸಿ.ಎಂ ಸ್ಪಂದಿಸಿದ್ದಾರೆ.

ಆಂದೋಲನ ರೂಪ ಪಡೆದ ಸ್ವಯಂ ಪ್ರೇರಿತ ದೇಣಿಗೆ ಸಂಗ್ರಹ
ಕೊಪ್ಪಳ:
ಇಲ್ಲಿನ ಗವಿಮಠದ ಆವರಣದಲ್ಲಿ ಐದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಕಾರ್ಯಕ್ಕೆ ಭಕ್ತರ ಮನ ಮಿಡಿದಿದೆ.

ADVERTISEMENT

ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಭಕ್ತರು ಸ್ವಯಂ ಪ್ರೇರಿತರಾಗಿ ತಮ್ಮೂರಿನಲ್ಲಿ ಹಣ ಸಂಗ್ರಹಿಸಿ ಮಠಕ್ಕೆ ದೇಣಿಗೆ ಸಲ್ಲಿಸುತ್ತಿದ್ದಾರೆ. ಮಠದ ಹಳೆಯ ವಿದ್ಯಾರ್ಥಿಗಳು ಕೂಡ ಹಣ ನೀಡುತ್ತಿದ್ದಾರೆ. ಹಲವು ಕಡೆ ಭಕ್ತರು ಮಾಡುತ್ತಿರುವ ಈ ಕಾರ್ಯ ಬಹಳಷ್ಟು ಊರುಗಳಲ್ಲಿ ಸಂಚಲನ ಮೂಡಿಸಿದ್ದು, ದಿನದಿಂದ ದಿನಕ್ಕೆ ಹಣ ಸಂಗ್ರಹಿಸಿ ಮಠಕ್ಕೆ ಸಲ್ಲಿಸುತ್ತಿರುವ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಒಂದು ವಾರದ ಹಿಂದೆ ವಸತಿ ನಿಲಯ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಸಲ್ಲಿಸುವ ವೇಳೆ ಸ್ವಾಮೀಜಿ, ‘ಮಕ್ಕಳು ವಿದ್ಯಾವಂತರಾಗಬೇಕು ಎಂಬುದು ಮಠದ ಸಂಕಲ್ಪವಾಗಿದೆ. ಎಷ್ಟು ಶಕ್ತಿ ಇದೆಯೊ ಅಷ್ಟೂ ಮಕ್ಕಳನ್ನು ಓದಿಸುವೆ. ಅವರ ಏಳಿಗೆಗಾಗಿ ಜೋಳಿಗೆ ಹಿಡಿಯುವೆ‘ ಎಂದು ಭಾವುಕರಾಗಿ ಹೇಳಿದ್ದರು.

ಅವರ ಈ ಮಾತುಗಳು ಸಾಮಾಜಿಕ ತಾಣಗಳಲ್ಲಿ ವೇಗವಾಗಿ ಹರಿದಾಡಿತ್ತು. ಕೋಟ್ಯಂತರ ಜನ ಈ ವಿಡಿಯೊ ವೀಕ್ಷಿಸಿದ್ದಾರೆ. ಇದರಿಂದ ಸ್ವಯಂ ಪ್ರೇರಿತರಾಗಿ ಇದು ತಮ್ಮದೇ ಕೆಲಸ ಎನ್ನುವಂತೆ ಭಕ್ತರು ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ಮದುವೆ ಉಡುಗೊರೆ ಅರ್ಪಣೆ: ತಮ್ಮ ಪುತ್ರಿಯ ಮದುವೆಯಲ್ಲಿ ಸ್ನೇಹಿತರು ಹಾಗೂ ಬಂಧುಗಳು ಪ್ರೀತಿಯಿಂದ ಕೊಟ್ಟ ₹ 5 ಸಾವಿರ ಕಾಣಿಕೆಯನ್ನೇ ಕಾರಟಗಿಯ ವಿಶೇಷ ಎಪಿಎಂಸಿ ಮಾಜಿ ಸದಸ್ಯ ಶರಣೇಗೌಡ ಪಾಟೀಲ್ ಸಾಹುಕಾರ ಮಠಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

ಕಾರಟಗಿ ತಾಲ್ಲೂಕಿನ ಸಿದ್ದಾಪುರದಲ್ಲಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹಿಸಿದರು. ಮುನಿರಾಬಾದ್‌ ಸಮೀಪದ ಹೊಸಹಳ್ಳಿಯಲ್ಲಿ ಗ್ರಾಮಸ್ಥರು ಡಬ್ಬಿ ಹಿಡಿದು ಗ್ರಾಮದಲ್ಲಿ ಸಂಚರಿಸಿ ₹ 30,170 ಸಂಗ್ರಹಿಸಿ ಮಠಕ್ಕೆ ಅರ್ಪಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಶರಣಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಮಂಗಳವಾರ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.