ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ ಶನಿವಾರ ಸಂಜೆ 5.30ಕ್ಕೆ ಮಠದ ಆವರಣದಲ್ಲಿ ನಡೆಯಲಿದ್ದು, ಬೆಳಗಿನ ಜಾವದಿಂದಲೇ ಭಕ್ತರು ಮಠದತ್ತ ಬರುತ್ತಿದ್ದಾರೆ.
ಮೈಸೂರಿನ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಿದ್ದು, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್, ಇಸ್ರೊ ಚಂದ್ರಯಾನ್–3 ಯೋಜನಾ ನಿರ್ದೇಶಕ ಪಿ. ವೀರಮುತ್ತುವೇಲ್ ಹಾಗೂ ಅದಮ್ಯ ಚೇತನ ಫೌಂಡೇಷನ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಪಾಲ್ಗೊಳ್ಳುವರು.
ತಡವಾಗಿ ಬಂದರೆ ಮಠದ ಆವರಣದಲ್ಲಿ ನಿಲ್ಲಲು ಕೂಡ ಜಾಗ ಸಿಗುವುದಿಲ್ಲವೆನ್ನುವ ಕಾರಣಕ್ಕೆ ರಾಜ್ಯ, ಹೊರರಾಜ್ಯಗಳ ಭಕ್ತರು ಶುಕ್ರವಾರವೇ ಬಂದು ಇಲ್ಲಿ ಉಳಿದುಕೊಂಡಿದ್ದಾರೆ. ಹಲವು ಭಕ್ತರಿಗೆ ಮಠವೇ ವಸತಿ ವ್ಯವಸ್ಥೆ ಮಾಡಿದೆ.
ಗವಿಮಠದ ಗುಹೆಯಲ್ಲಿರುವ 11ನೇ ಪೀಠಾಧಿಪತಿ ಲಿಂಗೈಕ್ಯ ಗವಿಸಿದ್ಧೇಶ್ವರ ಸ್ವಾಮೀಜಿಯ ಗದ್ದುಗೆಗೆ ಬೆಳಗಿನ ಜಾವವೇ ವಿಶೇಷ ಪೂಜೆ ನಡೆಯಿತು. ಹೂವು, ಬಿಲ್ವಪತ್ರೆಯಿಂದ ಅಲಂಕಾರ ಮಾಡಲಾಗಿದೆ. ಜಿಲ್ಲೆ ಹಾಗೂ ನೆರೆಜಿಲ್ಲೆಗಳ ಭಕ್ತರು ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಬಂದು ಗವಿಮಠದ ದರ್ಶನ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.