ADVERTISEMENT

ವಿಕೃತಿ ಮೆರೆದಿದ್ದ ಶಿಕ್ಷಕ ಅಜರುದ್ದೀನ್‌: ಇನ್ನೂ ಪತ್ತೆಯಾಗದ ಮೊಬೈಲ್‌

ಮಕ್ಕಳ ಪತ್ತೆಗೆ ಅಧಿಕಾರಿಗಳ ಶೋಧ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 15:52 IST
Last Updated 12 ಜುಲೈ 2022, 15:52 IST
   

ಕಾರಟಗಿ: ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ಮತ್ತು ಮಕ್ಕಳೊಂದಿಗೆ ವಿಕೃತಿ ಮೆರೆದ ಶಿಕ್ಷಕನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಲು ಅಧಿಕಾರಿಗಳು ಮಂಗಳವಾರ ಪಟ್ಟಣಕ್ಕೆ ಭೇಟಿ ನೀಡಿದರು.

ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಇತರ ಅಧಿಕಾರಿಗಳ ತಂಡ ಬಹಿರಂಗಗೊಂಡಿದ್ದ ವಿಡಿಯೊಗಳಲ್ಲಿನ ಮಕ್ಕಳ ಪತ್ತೆಗೆ ಶೋಧ ನಡೆಸಿದರು. ಶಿಕ್ಷಕ ಮಹಮ್ಮದ್ ಅಜರುದ್ದೀನ್‌ ವಿಕೃತಿ ಮೆರೆದಿದ್ದ ವಿಡಿಯೊಗಳು ವೈರಲ್‌ ಆಗಿದ್ದವು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಶಿವಲೀಲಾ ಹೊನ್ನೂರು, ಗಂಗಾವತಿಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶಗೌಡ ನೇತೃತ್ವದ ಅಧಿಕಾರಿಗಳ ತಂಡ ಅಜರುದ್ಧೀನ್ ವಾಸಿಸುತ್ತಿದ್ದ ಕಾರಟಗಿಯ ಜೆ.ಪಿ ನಗರದ ಮನೆ, ಈ ಮೊದಲು ವಾಸವಾಗಿದ್ದ 31ನೇ ಉಪ ಕಾಲುವೆ ಪಕ್ಕದ ನೀರಾವರಿ ನಿಗಮದ ವಸತಿ ಗೃಹಕ್ಕೆ ಭೇಟಿ ನೀಡಿ ಮಕ್ಕಳ ಬಗ್ಗೆ ಮಾಹಿತಿ ಕಲೆಹಾಕಿದರು.

ADVERTISEMENT

ಶಿಕ್ಷಕ ವಾಸವಿದ್ದ ಮನೆಯ ಅಕ್ಕಪಕ್ಕದ ನಿವಾಸಿಗಳೊಂದಿಗೆ ಶಿಕ್ಷಕನ ನಡೆ, ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಪೊಲೀಸ್ ಠಾಣೆಗೆ ಭೇಟಿ ನೀಡಿ ಇನ್ಸ್‌ಪೆಕ್ಟರ್‌ ವೀರಭದ್ರಯ್ಯ ಹಿರೇಮಠ ಅವರಿಂದ ಪ್ರಕರಣದ ಮಾಹಿತಿ ಕಲೆಹಾಕಿದರು.

ಶಿಕ್ಷಣ ಇಲಾಖೆಯ ಇಸಿಒ ರಾಘವೇಂದ್ರ, ಎಸಿಒ ಸುಮಂಗಳಮ್ಮ, ಸಿಆರ್‌ಪಿಗಳಾದ ಭೀಮಣ್ಣ ಕರಡಿ, ತಿಮ್ಮಣ್ಣ ನಾಯಕ, ಮುಖ್ಯಶಿಕ್ಷಕರಾದ ರಾಘವೇಂದ್ರ ಕಂಠಿ, ಯಶೋಧಮ್ಮ, ಪುರಸಭೆ ಸದಸ್ಯ ಸೋಮಶೇಖರ ಬೇರ್ಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತೆ ಯಮನಮ್ಮ, ಸಮಾಲೋಚಕ ರವಿ ಬಡಿಗೇರ ಉಪಸ್ಥಿತರಿದ್ದರು.

ಪತ್ತೆಯಾಗದ ಮೊಬೈಲ್‌: ಪ್ರಕರಣ ಬಹಿರಂಗವಾಗುತ್ತಿದ್ದಂತೆ ಶಿಕ್ಷಕ ಪರಾರಿಯಾಗಿ ಗೋವಾದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದ. ಬಳಿಕ ಮೊಬೈಲ್‌ ಫೋನ್‌ಗಾಗಿ ಹುಡುಕಾಟ ಮುಂದುವರಿದಿದ್ದು, ಇನ್ನೂ ಪತ್ತೆಯಾಗಿಲ್ಲ.

‘ಶಿಕ್ಷಕನ ಮೊಬೈಲ್‌ ಫೋನ್‌ನಲ್ಲಿ ಇನ್ನಷ್ಟು ವಿಡಿಯೊಗಳು ಮತ್ತು ಮಾಹಿತಿ ಇರುವ ಶಂಕೆಯಿದೆ. ಪತ್ತೆಯಾದರೆ ಮತ್ತಷ್ಟು ವಿಷಯಗಳು ಹೊರಬೀಳಲಿವೆ. ಶೋಧ ಕಾರ್ಯ ಮುಂದುವರಿದಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಪ್ರಕರಣ ಕುರಿತು ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೋಕ್ಸೊ ಕಾಯ್ದೆಯಡಿ ಪ್ರಕರಣಕ್ಕೆ ಸಿದ್ಧತೆ?
ಮಕ್ಕಳ ಜೊತೆ ವಿಕೃತಿ ಮೆರೆದ ವಿಡಿಯೊ ವೈರಲ್‌ ಆಗಿದ್ದರಿಂದ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸುವ ಕುರಿತು ಸಿದ್ಧತೆ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಕ್ಕಳ ಹಕ್ಕುಗಳ ರಕ್ಷಣಾ ಘಟಕ ಈ ಕುರಿತು ದೂರು ನೀಡಲು ತಯಾರಿ ನಡೆಸಿದ್ದು, ಕಾರಟಗಿ ಪೊಲೀಸ್‌ ಠಾಣೆಯಿಂದ ಅಗತ್ಯ ಮಾಹಿತಿ ಪಡೆದುಕೊಂಡಿದೆ ಎಂದು ಗೊತ್ತಾಗಿದೆ.

‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಿಂದ ಪತ್ರ ಬಂದ ಹಿನ್ನೆಲೆಯಲ್ಲಿ ಕಾರಟಗಿ ಪಟ್ಟಣಕ್ಕೆ ನಮ್ಮ ತಂಡ ಭೇಟಿ ನೀಡಿದೆ. ಶಿಕ್ಷಕನ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅಗತ್ಯ ದಾಖಲೆಗಳನ್ನು ಹಾಗೂ ಸಾಕ್ಷಿಯನ್ನು ಹುಡುಕಾಡಲಾಗುತ್ತಿದೆ. ಬುಧವಾರವೂ ತಂಡ ಕಾರಟಗಿಗೆ ತೆರಳಲಿದೆ‘ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರೋಹಿಣಿ ಕೊಟಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.