ADVERTISEMENT

ಕೊಪ್ಪಳ: ಮುನಿಸು ಮರೆತು BJP ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ಧವಾದ ಸಂಗಣ್ಣ ಕರಡಿ

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕ್ಯಾವಟರ್ ಪರ ಪ್ರಚಾರಕ್ಕೆ ಅಣಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 7:27 IST
Last Updated 1 ಏಪ್ರಿಲ್ 2024, 7:27 IST
ಸಂಗಣ್ಣ ಕರಡಿ
ಸಂಗಣ್ಣ ಕರಡಿ   

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಸಂಸದ ಸಂಗಣ್ಣ ಕರಡಿ ಅವರ ಮುನಿಸು ಕಡಿಮೆಯಾಗಿದ್ದು, ಸೋಮವಾರದಿಂದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕ್ಯಾವಟರ್ ಪರ ಪ್ರಚಾರಕ್ಕೆ ಅಣಿಯಾಗಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಗಣ್ಣ ಕರಡಿ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಇಂದಿನಿಂದ ಪಕ್ಷದ ಪರ ಪ್ರಚಾರ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ನಾವೆಲ್ಲಾ ಶ್ರಮಿಸಬೇಕಿದೆ ಎಂದರು.

ಕಾಂಗ್ರೆಸ್ ಸೇರಲ್ಲ: ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಹಲವು ಸುತ್ತಿನ ಸಂಧಾನ ಸಭೆಗಳು ನಡೆದಿವೆ. ರಾಜಕೀಯದಲ್ಲಿ ಮಾತು ಕಥೆ ನಡೆಯುತ್ತಲೇ ಇರುತ್ತವೆ. ಎಲ್ಲವೂ ಯಶಸ್ವಿಯಾಗುವುದಿಲ್ಲ. ಆದರೂ‌ ಒಂದೇ ಕಡೆ ಇರಬೇಕಾಗುತ್ತದೆ. ಕಾಂಗ್ರೆಸ್ ಸೇರುವ ವಿಚಾರ ಇಲ್ಲ ಎಂದು‌ ಸ್ಪಷ್ಟಪಡಿಸಿದರು.

ADVERTISEMENT

ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಮರು ಪರಿಶೀಲನೆಯಾಗಬೇಕು ಅಥವಾ ನನ್ನನ್ನು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಪರಿಗಣಿಸಬೇಕು ಎನ್ನುವುದು ಕಾರ್ಯಕರ್ತರ ಬೇಡಿಕೆಯಾಗಿದೆ ಎಂದರು.

ಈ ಬೇಡಿಕೆಯ ಬಗ್ಗೆ ವರಿಷ್ಠರ ಜೊತೆ ಮತ್ತೊಮ್ಮೆ ಮಾತನಾಡುವುದಾಗಿ ರಾಜ್ಯ ನಾಯಕರು ಹೇಳಿದ್ದಾರೆ.

ನಾಯಕರ ಮಾತಿನ ಮೇಲೆ ವಿಶ್ವಾಸ ಮಾಡಬೇಕಿದೆ. ವಿಶ್ವಾಸವಿಲ್ಲದೆ ರಾಜಕಾರಣ ನಡೆಯುವುದಿಲ್ಲ ಎಂದರು.

ಈಗಿನ ಪರಿಸ್ಥಿತಿಯಲ್ಲಿ ಟಿಕೆಟ್ ಬದಲಾವಣೆ ಕಷ್ಟ ಎನ್ನುವುದು ನನಗೂ ಗೊತ್ತು. ನಾಳೆ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದು, ಅವರೊಂದಿಗೆ ರಾಜ್ಯ ನಾಯಕರು ನನ್ನ ವಿಚಾರ ಚರ್ಚಿಸುವ ವಿಶ್ವಾಸವಿದೆ ಎಂದರು.

ಸೋಮವಾರ (ಇಂದು) ಸಂಜೆ ಕುಷ್ಟಗಿಯಿಂದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಆರಂಭಿಸುತ್ತೇನೆ. ಪಕ್ಷಕ್ಕೆ ಬೆಂಬಲಿಸುವಂತೆ ನಮ್ಮ ಬೆಂಬಲಿಗರಿಗೆ ಮನವಿ ಮಾಡುತ್ತೇನೆ. ನರೇಂದ್ರ ಮೋದಿ ಅವರನ್ನು ನೋಡಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡುತ್ತೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.