ADVERTISEMENT

ಕೊಪ್ಪಳ ನಗರಸಭೆ; ಉಪಚುನಾವಣೆ ಘೋಷಣೆ

ಎರಡು ಸ್ಥಾನಗಳಿಗೆ ನ. 4ರಂದು ಅಧಿಸೂಚನೆ, 23ರಂದು ಮತದಾನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 5:16 IST
Last Updated 19 ಅಕ್ಟೋಬರ್ 2024, 5:16 IST
ಕೊಪ್ಪಳ ನಗರಸಭೆಯ ನೋಟ
ಕೊಪ್ಪಳ ನಗರಸಭೆಯ ನೋಟ   

ಕೊಪ್ಪಳ: ವಿವಿಧ ಕಾರಣಗಳಿಂದ ತೆರವಾಗಿರುವ ಕೊಪ್ಪಳ ನಗರಸಭೆಯ 8, 11ನೇ ವಾರ್ಡ್‌ ಮತ್ತು ಕಾರಟಗಿ ಪುರಸಭೆಯ 21ನೇ ವಾರ್ಡ್‌ಗೆ ಚುನಾವಣಾ ಆಯೋಗವು ಶುಕ್ರವಾರ ಉಪಚುನಾವಣೆ ಘೋಷಣೆ ಮಾಡಿದೆ.

ಇಲ್ಲಿನ ನಗರಸಭೆಯ 11ನೇ ವಾರ್ಡ್‌ನಿಂದ ಬಿಜೆಪಿಯಿಂದ ಸದಸ್ಯರಾಗಿದ್ದ ಆಡೂರು ರಾಜಶೇಖರ ಲೋಕಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಸೇರಿದ್ದರು. ಎಂಟನೇ ವಾರ್ಡ್‌ನಿಂದ ಕಾಂಗ್ರೆಸ್‌ನಿಂದ ಗೆಲುವು ಪಡೆದಿದ್ದ ಸುನಿತಾ ಗಾಳಿ ಸರ್ಕಾರಿ ನೌಕರಿಗೆ ನೇಮಕವಾಗಿದ್ದರಿಂದ ಇದೇ ವರ್ಷದ ಫೆಬ್ರುವರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆದ್ದರಿಂದ ಉಪಚುನಾವಣೆ ನಿಗದಿಯಾಗಿದೆ.

ನ. 4ರಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದು, 11 ಉಮೇದುವಾರಿಕೆ ಸಲ್ಲಿಕೆಗೆ ಕೊನೆಯ ದಿನವಾಗಿದೆ. 14 ವಾಪಸ್‌ ಪಡೆಯಲು ಅಂತಿಮ ದಿನ, 23ರಂದು ಮತದಾನ ಮತ್ತು 26ರಂದು ಮತ ಎಣಿಕೆ ನಡೆಸಬೇಕು ಎಂದು ಆಯೋಗವು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ADVERTISEMENT

ಗ್ರಾ.ಪಂ.ಗೂ ಉಪಚುನಾವಣೆ: ಜಿಲ್ಲೆಯ 19 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಆಯ್ಕೆಗೂ ಉಪ ಚುನಾವಣೆ ಘೋಷಣೆಯಾಗಿದೆ.

ಕುಷ್ಟಗಿ ತಾಲ್ಲೂಕಿನ ಜಾಗೀರ ಗುಡದೂರ, ತುಮರಿಕೊಪ್ಪ, ಕನಕಗಿರಿ ತಾಲ್ಲೂಕಿನ ಹುಲಿಹೈದರ, ಯಲಬುರ್ಗಾ ತಾಲ್ಲೂಕಿನ ಮಾಟಲದಿನ್ನಿ, ಗಾಣದಾಳ, ಹಿರೇವಂಕಲಕುಂಟಾ, ಕೊಪ್ಪಳ ತಾಲ್ಲೂಕಿನ ಹಲಗೇರಿ, ಇರಕಲ್ಲಗಡ, ಕಲ್‌ ತಾವರಗೇರಾ, ಶಿವಪುರ, ಬಂಡಿಹರ್ಲಾಪುರ, ಬೆಟಗೇರಿ, ಕಿನ್ನಾಳ, ಕುಕನೂರು ತಾಲ್ಲೂಕಿನ ಶಿರೂರ, ಕುದರಿಮೋತಿ, ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್‌, ಮರಳಿ ಕಾರಟಗಿ ತಾಲ್ಲೂಕಿನ ಸಿದ್ದಾಪುರ ಮತ್ತು ಬೆನ್ನೂರು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 19 ಸ್ಥಾನಗಳಿಗೆ ಚುನಾವಣೆ ಜರುಗಲಿದೆ.

ಜಿಲ್ಲಾಧಿಕಾರಿ ನ. 6ರಂದು ಅಧಿಸೂಚನೆ ಹೊರಡಿಸಬೇಕು, 12 ನಾಮಪತ್ರ ಸಲ್ಲಿಕೆ ಕೊನೆಯ ದಿನವಾಗಿದ್ದು, ವಾಪಸ್‌ ಪಡೆಯಲು 15 ಕೊನೆಯ ದಿನವಾಗಿದೆ. 23ರಂದು ಮತದಾನ ಮತ್ತು 26ರಂದು ಮತ ಎಣಿಕೆ ಜರುಗಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.