ADVERTISEMENT

ಬಕ್ರೀದ್:‌ ದಾನ, ಧರ್ಮಕ್ಕೆ ಮುಂದಾಗಿರಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:45 IST
Last Updated 17 ಜೂನ್ 2024, 15:45 IST
ಕಾರಟಗಿಯ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಸೋಮವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಚಿವ ಶಿವರಾಜ ತಂಗಡಗಿ ಪಾಲ್ಗೊಂಡಿದ್ದರು
ಕಾರಟಗಿಯ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಸೋಮವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಚಿವ ಶಿವರಾಜ ತಂಗಡಗಿ ಪಾಲ್ಗೊಂಡಿದ್ದರು   

ಕಾರಟಗಿ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲಿಮರು ಸೋಮವಾರ ಸಂಭ್ರಮದೊಂದಿಗೆ ಆಚರಿಸಿದರು.

ಸಾಮೂಹಿಕ ಪ್ರಾರ್ಥನೆಯ ಬಳಿಕ ಧರ್ಮಗುರು ಗಂಗಾವತಿಯ ಮೌಲಾ ಮತೀನ್‌ಸಾಬ ಮಾತನಾಡಿ, ‘ತ್ಯಾಗ, ಬಲಿದಾನದ ಸಂಕೇತವಾದ ಹಬ್ಬವನ್ನು ಬಡವರು, ಅಸಹಾಯಕರಿಗೆ ನಿಮ್ಮ ಆದಾಯದ ಕೆಲ ಭಾಗವನ್ನು ದಾನ, ಧರ್ಮ ಮಾಡಬೇಕು. ಎಲ್ಲಾ ಸಮಾಜದವರನ್ನು ಪ್ರೀತಿಸಿ, ಶಾಂತಿ, ಸೌಹಾರ್ದತೆಯಿಂದ ಸಾರ್ಥಕವಾದ ರೀತಿಯಲ್ಲಿ ಜೀವನ ನಡೆಸಬೇಕು. ನಿಮ್ಮ ಜೀವನ ಶೈಲಿ ಇತರರಿಗೆ ಸ್ಫೂರ್ತಿಯಾಗಬೇಕು’ ಎಂದರು.

ಮುಸ್ಲಿಂ ಸಮುದಾಯದ ಸಾಮೂಹಿಕ ಪ್ರಾರ್ಥನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪಾಲ್ಗೊಂಡಿದ್ದರು. ‘ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬ ನಿಮಿತ್ತ ಸಮಸ್ತ ಮುಸ್ಲಿಂಮರಿಗೆ ಶುಭ ಕೋರುವೆ. ಪ್ರತಿಯೊಬ್ಬರಿಗೂ ಒಳಿತಾಗಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಗುತ್ತದೆ. ಬಕ್ರೀದ್ ಹಬ್ಬದ ಆಚರಣೆಯೊಂದಿಗೆ ಪ್ರತಿಯೊಬ್ಬರೂ ಸಹೋದರರಂತೆ ಜೀವನ ನಡೆಸಿ, ಇತರರಿಗೆ ಮಾದರಿಯಾಗಿರಿ’ ಎಂದರು.

ADVERTISEMENT

ಬಳಿಕ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿ, ನೆರೆದ ಬಡವರಿಗೆ ದಾನ ಮಾಡಿದರು. ಮನೆಗಳಿಗೆ ಆತ್ಮೀಯರನ್ನು ಆಹ್ವಾನಿಸಿ, ಸಾಮೂಹಿಕ ಭೋಜನ ಸವಿದರು.

ಪ್ರಮುಖರಾದ ಮೌನೇಶ ದಡೇಸೂಗೂರ, ಶರಣೇಗೌಡ ಮಾಲಿಪಾಟೀಲ್‌ ಬೂದಗುಂಪಾ, ಚನ್ನಬಸಪ್ಪ ಸುಂಕದ, ಶರಣಯ್ಯಸ್ವಾಮಿ ಸಾಹುಕಾರ, ಪಟ್ಟಣದ ಜಾಮಿಯಾ ಮಸಜೀದ್‌ ಕಮೀಟಿ ಅಧ್ಯಕ್ಷ ಅಬ್ದುಲ್‌ ಗನಿಸಾಬ, ಅಬೂಬಕರ್‌ ಮಸಜೀದ್‌, ಮದೀನಾ ಮಸಜೀದ್‌, ಬಿಲಾಲಿ ಮಸಜೀದ್‌ ಮತ್ತು ಕೂಬಾ ಮಸಜೀದ ಮುಖ್ಯಸ್ಥರಾದ ಗ್ಯಾಸ್‌ ರಾಜಾ, ನಬೀಸಾಬ ಕಟ್ಟಿಗೆಹಡ್ಡೆ, ದಲಾಲಿ ಬಜಾರ್‌ ಗೌಸ್‌, ಆಲಂಭಾಷಾ, ಜಿಲಾನಿ, ಬಾಬುಸಾಬ ಬಳಿಗೇರ, ಯುಸೂಫ್‌, ಗೌಸ್ ಮೊಹಿದ್ದೀನ್, ಅಮ್ಜದ್, ಹನೀಫ್ ಮೇಸ್ತ್ರಿ, ಅಮೃಲ್ ಹುಸೇನ್, ಮುಜಾಹಿದ್ ಕಪಾಲಿ, ಮುಸ್ತಫಾಸಾಬ, ರಜಾಬಲಿ ಬೇವಿನಗಿಡದ, ಖಾಜಾಹುಸೇನ್‌ ಮುಲ್ಲಾ, ಶೇಕ್ಷಾವಲಿ ಖಾಜಿ, ಎಸ್‌.ಎಂ.ಜಿಲಾನಿ, ಡಾ.ಎಂ.ಐ. ಮುದಗಲ್‌, ಇಬ್ರಾಹಿಂ ಅಮ್ದಿಹಾಳ, ಖಲಂಧರ್‌, ರಾಜಾಸಾಬ, ನಬೀಸಾಬ, ಆಲಂಸಾಬ, ಶಿರಾಜ್‌ ಹುಸೇನ್‌, ಮದುಸಾಬ ಬೇವಿನಗಿಡ, ಮುಸ್ತಫಾ, ಜಿಂದೂಸಾಬ, ಮಹ್ಮದ್‌ ಹನೀಫ್‌ ಸಹಿತ ನೂರಾರು ಮುಸ್ಲಿಮರು ಉಪಸ್ಥಿತರಿದ್ದರು.

ತಾಲ್ಲೂಕಿನ ಸಿದ್ದಾಪುರ, ಯರಡೋಣಾ, ಬೂದಗುಂಪಾ, ಮರ್ಲಾನಹಳ್ಳಿ, ಮೈಲಾಪುರ, ನಾಗನಕಲ್‌ ಸಹಿತ ಇತರ ಗ್ರಾಮಗಳಲ್ಲಿ ಸಮಾಜ ಬಾಂಧವರು ಬಕ್ರೀದ್‌ ಹಬ್ಬವನ್ನು ಸಡಗರದಿಂದ ಆಚರಿಸಿದರು.

ಇವಿಎಂ ರದ್ದುಗೊಳ್ಳಲಿ: ತಂಗಡಗಿ

ಇವಿಎಂ ಯಂತ್ರಗಳ ಬಗ್ಗೆ ಮೊದಲಿನಿಂದಲೂ ಪ್ರಶ್ನಿಸುತ್ತಾ ಸಂಶಯ ವ್ಯಕ್ತಪಡಿಸುತ್ತಾ ಬಂದಿದ್ದೇವೆ. ವಿದೇಶಿ ಉದ್ಯಮಿ ಎಲಾನ್ ಮಸ್ಕ್ ಸಹಿತ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯ ಎಂದಿದ್ದಾರೆ. ಅಮೇರಿಕಾ ಸಹಿತ ವಿವಿಧ ದೇಶಗಳಲ್ಲಿ ಇವಿಎಂ ಬ್ಯಾನ್ ಮಾಡಲಾಗಿದೆ. ಅದರಂತೆ ಭಾರತದಲ್ಲೂ ಇವಿಎಂ ಬ್ಯಾನ್ ಮಾಡಿ ಮೊದಲಿದ್ದ ಪದ್ಧತಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು. ಬಕ್ರೀದ್ ಹಬ್ಬದ ನಿಮಿತ್ತ ಪಟ್ಟಣದ ವಲಿಸಾಹೇಬ ದರ್ಗಾದ ಬಳಿಯಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶುಭಾಶಯಗಳ ವಿನಿಮಯ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಡಿಸೇಲ್‌ ಬೆಲೆ ಕಡಿಮೆ ಇದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಬಿಜೆಪಿಯವರು ದರ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು ಬಿಟ್ಟು ನಮಗೆ ಸಲಹೆ ನೀಡಲು ಹಾಗೂ ಪ್ರತಿಭಟನೆ ನಡೆಸಲು ಮುಂದಾಗಿರುವುದು ಸರಿಯಲ್ಲ. ಅವರ ಹೋರಾಟಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ವರ್ಷದಿಂದ ಗ್ಯಾರಂಟಿ ಯೋಜನೆಗಳನ್ನು ಸಮರ್ಥವಾಗಿ ಜಾರಿ ಮಾಡಿದ್ದೇವೆ. ಸರ್ಕಾರಕ್ಕೆ ಯಾವುದೇ ಆರ್ಥಿಕ ಸಮಸ್ಯೆಯಾಗಿಲ್ಲ. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದು ತಂಗಡಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.