ADVERTISEMENT

ಗಂಗಾವತಿ | ವಾನರ ವನ ನಿರ್ಮಾಣಕ್ಕೆ ಚಾಲನೆ

ಸಮಾನ ಮನಸ್ಕರ ತಂಡದಿಂದ ಗುಂಡಿ ತೋಡಿ, ಸಸಿ ನೆಡುವಿಕೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 3:13 IST
Last Updated 17 ಜೂನ್ 2024, 3:13 IST
ಗಂಗಾವತಿ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಋಷಿಮುಖ ಪರ್ವತದ ಬಳಿ ಸಮಾನ ಮನಸ್ಕರ ತಂಡದ ಸದಸ್ಯರು ವಾನರ ವನ ನಿರ್ಮಾಣಕ್ಕಾಗಿ ಸಸಿಗಳನ್ನು ನೆಟ್ಟರು
ಗಂಗಾವತಿ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಋಷಿಮುಖ ಪರ್ವತದ ಬಳಿ ಸಮಾನ ಮನಸ್ಕರ ತಂಡದ ಸದಸ್ಯರು ವಾನರ ವನ ನಿರ್ಮಾಣಕ್ಕಾಗಿ ಸಸಿಗಳನ್ನು ನೆಟ್ಟರು   

ಗಂಗಾವತಿ: ‘ಅಂಜನಾದ್ರಿ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಮಂಗಗಳ ಸಂಖ್ಯೆ ಹೆಚ್ಚಿದ್ದು, ಇವುಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ವಾನರ ವನ ನಿರ್ಮಿಸಲಾಗುತ್ತಿದೆ’ ಎಂದು ದಂತ ವೈದ್ಯ ಹಾಗೂ ಕಿಷ್ಕಿಂದ ಯುವ ಚಾರಣ ಬಳಗದ ಮಾರ್ಗದರ್ಶಕ ಡಾ.ಶಿವಕುಮಾರ್ ಮಾಲಿಪಾಟೀಲ ಹೇಳಿದರು.

ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಋಷಿಮುಖ ಪರ್ವತ ಬಳಿ ಕಿಷ್ಕಿಂದಾ ವನ ಅಭಿಯಾನದಡಿ ಭಾನುವಾರ ನಡೆದ ವಾನರ ವನ ನಿರ್ಮಾಣ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.

‘ಅಂಜನಾದ್ರಿ ಭಾಗದ ಬೆಟ್ಟಗಳಲ್ಲಿ ಹಣ್ಣಿನ ಗಿಡಗಳು ಕಡಿಮೆಯಿದ್ದು, ಮಂಗಗಳಿಗೆ ಆಹಾರವೇ ಸಿಗುತ್ತಿಲ್ಲ. ಇದರ ಪರಿಣಾಮ ಮಂಗಗಳೆಲ್ಲ ಆಹಾರ ಹುಡಿಕೊಂಡು ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಹಾಗಾಗಿ ವಾನರ ಸಂತತಿ ಉಳಿಸಲು ಮತ್ತು ದಟ್ಟವಾದ ಕಾಡಿಗಾಗಿ ವಾನರ ವನ ನಿರ್ಮಿಸಲು ಶ್ರಮಿಸಲಾಗುತ್ತಿದೆ’ ಎಂದರು.

ADVERTISEMENT

ಕಿಷ್ಕಿಂದ ಯುವ ಚಾರಣ ಬಳಗದ ಪ್ರಸನ್ನ ಮಿಶ್ರಿಕೋಟಿ ಮಾತನಾಡಿ, ‘ಅಂಜನಾದ್ರಿ ಸುತ್ತಮುತ್ತ ಇರುವ ಮಂಗಗಳಿಗೆ ಪ್ರವಾಸಿಗರು, ಭಕ್ತರು ನೀಡುವ ಹಣ್ಣು, ತೆಂಗಿನಕಾಯಿ, ತಿನಿಸುಗಳೇ ಆಹಾರ. ಪ್ರಾಕೃತಿಕವಾಗಿ ಯಾವ ಆಹಾರವೂ ಸಿಗುತ್ತಿಲ್ಲ. ಇದನ್ನು ಮನಗಂಡು ವಿವಿಧ ಸಂಘ-ಸಂಸ್ಥೆಗಳು ಸೇರಿ ಹಣ್ಣುಗಳ ಸಸಿಗಳನ್ನು ನೆಟ್ಟು ವಾನರವನ ನಿರ್ಮಿಸುವ ಗುರಿ ಹೊಂದಲಾಗಿದೆ’ ಎಂದರು.

ಕಿಷ್ಕಿಂದಾವನ ಅಭಿಯಾನದಡಿ ಬೆಳಿಗ್ಗೆ ಲಿವ್ ವಿತ್ ಹ್ಯೂಮಾನಿಟಿ, ಕಿಷ್ಕಿಂದ ಯುವ ಚಾರಣ ಬಳಗ, ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಗಂಗಾವತಿ ಚಾರಣ ಬಳಗ, ಕಿಷ್ಕಿಂದ ಯುವ ಸೇನೆಯ 50ಕ್ಕೂ ಜನರ ತಂಡ ಋಷಿಮುಖ ಪರ್ವತದ ಬಳಿ ಹಣ್ಣಿನ 226ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು.

‘ಈ ಅಭಿಯಾನ ನಿರಂತರವಾಗಿ 2 ತಿಂಗಳ ಕಾಲ ಜರುಗಲಿದ್ದು, ಪ್ರತಿ ಭಾನುವಾರ ಗುಂಡಿ ತೋಡಿ ಸಸಿ ನೆಡುವ ಯೋಜನೆ ರೂಪಿಸಲಾಗಿದೆ. ಈ ವಾನರವನ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಸಮಾನ ಮನಸ್ಕರ ತಂಡದ ಸದಸ್ಯರು ಕೋರಿದೆ.

ಕಿಷ್ಕಿಂದಾ ಟ್ರಸ್ಟ್ ಸಂಸ್ಥಾಪಕ ಶಮಾಪವಾರ, ಅರ್ಜುನ್ ಜಿ.ಆರ್., ಹರನಾಯಕ, ನಾಗರಾಜ ದೇಸಾಯಿ, ರಮೇಶ ಕುಮಾರ, ವೀರೇಶ ಹುಲಸನಟ್ಟಿ, ಸಂತೋಷ ಕುಂಬಾರ, ಅಭಿಜಿತ್ ತಾಂಡೂರು, ಮಂಜುಳಾ, ಚನ್ನಬಸಪ್ಪ, ರಾಜು ಆನೆಗೊಂದಿ, ಹನುಮೇಶ, ನಾಗರಾಜ ಆನೆಗೊಂದಿ, ರಾಜಾಸಾಬ ಗುಮಗೇರಿ, ಬಾಳಪ್ಪ ತಾಳಿಕೇರಿ, ವಿರೇಶ ಹನುಮನಹಳ್ಳಿ ಸೇರಿ ಸಮಾನ ಮನಸ್ಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.