ADVERTISEMENT

ಕೊಪ್ಪಳ: ಮಾದಕ ದ್ರವ್ಯ ಸೇವನೆ ಅಪಾಯದ ಜಾಗೃತಿಗಾಗಿ ಪೊಲೀಸರಿಂದ ಓಟ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 4:02 IST
Last Updated 6 ಜನವರಿ 2024, 4:02 IST
   

ಕೊಪ್ಪಳ: ಎಲ್ಲರ ಬದುಕು ಹಾಗೂ ಸುಂದರ ಭವಿಷ್ಯ ರೂಪುಗೊಳ್ಳುವುದು‌ ಉತ್ತಮ ಹವ್ಯಾಸಗಳಿಂದ ಮಾತ್ರ. ಆದ್ದರಿಂದ ಎಳವೆಯಿಂದಲೇ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಇಲ್ಲಿನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಮಾದಕ ದ್ರವ್ಯ ಸೇವನೆ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ವತಿಯಿಂದ ಶನಿವಾರ ಬೆಳಿಗ್ಗೆ ನಡೆದ 5 ಕೆ ಓಟದ ಸ್ಪರ್ಧೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ಮಕ್ಕಳು ಕೆಟ್ಟ ಅಭ್ಯಾಸದಿಂದ ಹೊರಗಡೆ ಬರಬೇಕು. ದೇವರು ಕೊಟ್ಟ ಸುಂದರ ಜೀವನವನ್ನು ಸಾಧನೆಯ ಮೂಲಕ ಸಾರ್ಥಕಗೊಳಿಸಬೇಕು ಎಂದರು.

ADVERTISEMENT

ಮೊಬೈಲ್, ಕಂಪ್ಯೂಟರ್ ಖರೀದಿ ಮಾಡಿದಾಗ ಅದನ್ನು ಹೇಗೆ ಬಳಸಬೇಕು ಎಂದು ಮಾಹಿತಿ ಪತ್ರ ನೀಡಲಾಗಿರುತ್ತದೆ. ಆದರೆ ದೇವರು ಕೊಟ್ಟ ದೇಹವೆಂಬ ಸಾಮರ್ಥ್ಯದ ಬಗ್ಗೆ ನಾವು ಅರಿವು ಹೊಂದಿರುವುದಿಲ್ಲ ಎಂದರು.

ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಉತ್ತಮ ಮಾರ್ಗದಲ್ಲಿ ಸಾಗುವುದು ಪರಿಹಾರವೇ ಹೊರತು ವಾಮಮಾರ್ಗವಲ್ಲ. ನಮ್ಮ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ದೊರೆಯಬೇಕು ಎಂದು ಮಾದಕ ದ್ರವ್ಯದ‌ ಮೊರೆ ಹೋಗುವ ಪ್ರಮಾಣ ಹೆಚ್ಚಾಗುತ್ತಿದೆ. ಈ ವ್ಯಸನಕ್ಕೆ ಅಂಟಿಕೊಂಡರೆ ಬದುಕು ಹಾಗೂ ಭವಿಷ್ಯ ಹಾಳಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ ಜಿಲ್ಲೆಯ ಒಂಬತ್ತು ಸಾವಿರ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆ ಅಪಾಯದ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಸಹವಾಸ ದೋಷ ಅಥವಾ ಯಾವುದೊ ಕೆಟ್ಟ ಸಣ್ಣ ಕಾರಣಕ್ಕೆ ಮಾದಕ ದ್ರವ್ಯ ಸೇವೆನೆಗೆ ತುತ್ತಾಗುತ್ತಿದ್ದಾರೆ ಎಂದರು.

ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ಅಪಾಯದ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಮಾಹಿತಿ ನೀಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.