ADVERTISEMENT

ಅಳವಂಡಿ | ವಾಲಿಬಾಲ್‌ನಲ್ಲಿ ಮಿಂಚಿದ ಗ್ರಾಮೀಣ ಪ್ರತಿಭೆ: ಅಂಜಲಿ ಹೆಜ್ಜೆಗುರುತು

ಜುನಸಾಬ ವಡ್ಡಟ್ಟಿ
Published 29 ಆಗಸ್ಟ್ 2023, 7:21 IST
Last Updated 29 ಆಗಸ್ಟ್ 2023, 7:21 IST
ಅಂಜಲಿ ಕರಡಿ
ಅಂಜಲಿ ಕರಡಿ   

ಅಳವಂಡಿ: ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಗ್ರಾಮೀಣ ಪ್ರದೇಶದ ಹೆಣ್ಣು ಮಗಳೊಂದು ಉದಾಹರಣೆಯಾಗಿದ್ದಾಳೆ. ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಯು ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾಳೆ.

ಸಮೀಪದ ತುಂಗಾಭದ್ರಾ ನದಿಯ ದಂಡೆಯ ತಿಗರಿ ಗ್ರಾಮದ ಅಂಜಲಿ ಕರಡಿ ಎಂಬ ಯುವತಿ ವಾಲಿಬಾಲ್ ಕ್ರೀಡೆಯಲ್ಲಿ ಸಾಧನೆ ಮೆರೆದಿದ್ದಾಳೆ. ತಂದೆ ರಾಮಣ್ಣ ಕರಡಿ ಹಾಗೂ ಪಕೀರವ್ವ ಕರಡಿ ಕರಡಿ ದಂಪತಿಯ ಪುತ್ರಿಯಾಗಿದ್ದು, ಧರ್ಮಸ್ಥಳದ ಕಾಲೇಜುಯೊಂದರಲ್ಲಿ ಪ್ರಥಮ ಪಿಯುಸಿ ಅಧ್ಯಯನ ಮಾಡುತ್ತಿದ್ದಾರೆ. ಹೋಬಳಿ ಮಟ್ಟದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾಳೆ.

ಅಂಜಲಿ ತಮ್ಮ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ 1 ರಿಂದ 4ತರಗತಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಕೊಪ್ಪಳದಲ್ಲಿ 5ರಿಂದ 10ನೇ ತರಗತಿ ಓದಿದ್ದಾಳೆ. 2016-17ರಲ್ಲಿ ಅಂಜಲಿ ವಾಲಿಬಾಲ್ ಕ್ರೀಡೆಯಲ್ಲಿ ಆಯ್ಕೆಯಾದಳು. ನಂತರ ಆಂಧ್ರ ನಡೆದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಹಾಗೂ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ, ಮಿನಿ ಒಲಿಂಪಿಕ್ಸ್‌, ಒಡಿಶಾದಲ್ಲಿ ನಡೆದ ಜಂಜಾತೀಯ ಖೇಲ್ ಮಹೋತ್ಸವ-2023ರ ಮಹಿಳಾ ವಿಭಾಗದಲ್ಲಿ ವಾಲಿಬಾಲ್ ಸ್ಪರ್ಧೆಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ರಾಜ್ಯ ತಂಡ ‍ಪದಕಗಳನ್ನು ಗೆದ್ದ ರಾಜ್ಯ ತಂಡದಲ್ಲಿದ್ದರು.

ADVERTISEMENT

ಅಂಜಲಿಯ ಪೋಷಕರು ಕೃಷಿಕರು. ಬಡತನದಲ್ಲಿ ಹುಟ್ಟಿದ ಅಂಜಲಿಯು ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮ ಬೇಕು ಎಂಬ ಕನಸನ್ನು ನನಸಾಗಿಸಲು ಕ್ರೀಡಾ ವಸತಿ ಶಾಲೆಯಲ್ಲಿ ಸೇರಿ ಉತ್ತಮ ತರಬೇತಿ ಪಡೆದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದಾಳೆ.

‘ನನ್ನಲ್ಲಿರುವ ಕ್ರೀಡಾಸಕ್ತಿ ಗುರುತಿಸಿ ಕ್ರೀಡಾ ಹಾಸ್ಟೆಲ್ ಸೇರುವಂತೆ ಪ್ರೇರಣೆ ನೀಡಿದವರು ಕ್ರೀಡಾ ಇಲಾಖೆಯ ಸಿಬ್ಬಂದಿ, ಇದರಿಂದಾಗಿ ಶಿಕ್ಷಣ ಹಾಗೂ ಕ್ರೀಡೆ ಎಡರಲ್ಲೂ ತೊಡಗಿಸಿಕೊಳ್ಳುವಂತಾಯಿತು. ವಾಲಿಬಾಲ್‌ನಲ್ಲಿ ಉನ್ನತ ಸಾಧನೆ ಮಾಡಬೇಕು. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಬೇಕು ಎಂಬ ಆಸೆ ನನಗಿದೆ ‌.ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಿತ್ಯ ತರಬೇತಿ ಪಡೆಯುತ್ತಿದ್ದೆ’ ಎಂದು ಅಂಜಲಿ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಅಂಜಲಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಕ್ರೀಡಾ ವಸತಿ ಶಾಲೆಯಲ್ಲಿ ತರಬೇತಿಯಲ್ಲಿ ಉತ್ತಮ ಅಭ್ಯಾಸ ಮಾಡಿದ್ದಾಳೆ. ಅವಳ ಪೋಷಕರು ಕೂಡ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ, ಸಹಕಾರ ನೀಡುತ್ತಿದ್ದಾರೆ ಎಂದು ತರಬೇತುದಾರರಾದ ಸುರೇಶ ಜಾಧವ್, ಕಮಲ್ ಸಿಂಗ್, ಯತೀಶರಾಜ್ ಹೇಳುತ್ತಾರೆ.

ಓದಿನ ಜೊತೆಗೆ ಕ್ರೀಡೆಯಲ್ಲಿಯೂ ಹೆಚ್ಚು ಸಾಧನೆ ಮಾಡಬೇಕು ಎಂಬುದು ನನ್ನ ಆಸೆ ಇದೆ. ನನ್ನ ಪೋಷಕರು ಹಾಗೂ ಕ್ರೀಡಾ ಇಲಾಖೆಯ ಸಿಬ್ಬಂದಿ ತರಬೇತುದಾರರು ಸಹಕಾರ ನೀಡುತ್ತಿದ್ದಾರೆ.
ಅಂಜಲಿ ಕರಡಿ ವಾಲಿಬಾಲ್ ಕ್ರೀಡಾಪಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.