ADVERTISEMENT

ಕೊಪ್ಪಳ: ಅನುಭವಿ ಶಾಸಕರ ಮುಂದೆ ಸವಾಲುಗಳ ಸಾಲು

ಯಲಬುರ್ಗಾ ವಿಧಾನಸಭಾ ಕ್ಷೇತ್ರ: ಆರನೇ ಬಾರಿಗೆ ಶಾಸಕರಾದ ಬಸವರಾಜ ರಾಯರಡ್ಡಿ

ಉಮಾಶಂಕರ ಬ.ಹಿರೇಮಠ
Published 28 ಮೇ 2023, 23:30 IST
Last Updated 28 ಮೇ 2023, 23:30 IST
ಯಲಬುರ್ಗಾ ತಾಲ್ಲೂಕು ವಜ್ರಬಂಡಿ ಗ್ರಾಮದ ಹೊರವಲಯದಲ್ಲಿ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಅಪೂರ್ಣಗೊಂಡಿರುವುದು
ಯಲಬುರ್ಗಾ ತಾಲ್ಲೂಕು ವಜ್ರಬಂಡಿ ಗ್ರಾಮದ ಹೊರವಲಯದಲ್ಲಿ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಅಪೂರ್ಣಗೊಂಡಿರುವುದು   

ಯಲಬುರ್ಗಾ: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ 6ನೇ ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿರುವ ಬಸವರಾಜ ರಾಯರಡ್ಡಿ ಅನುಭವಿ ರಾಜಕಾರಣಿ. ಯಲಬುರ್ಗಾ ಮತ್ತು ಐದು ವರ್ಷಗಳ ಹಿಂದೆ ಆದ ಹೊಸ ತಾಲ್ಲೂಕು ಕುಕನೂರು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿದ್ದು ಅವರ ಮುಂದೆ ಅಭಿವೃದ್ಧಿಯ ನೂರಾರು ಕೆಲಸಗಳ ಸವಾಲುಗಳು ಇವೆ.

ಹಿಂದಿನ ಅವಧಿಯಲ್ಲಿನ ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಹಾಗೂ ನೆನಗುದಿಗೆ ಬಿದ್ದಿರುವ ಬೃಹತ್ ಯೋಜನೆಗಳನ್ನು ಕಾರ್ಯಗತಗೊಳಿಸುವುದು, ಜೊತೆಗೆ ಹೊಸ ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತರುವ ಹೊಣೆ ಅವರ ಮೇಲಿದೆ.

ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಕೂಡಲೇ ಕೃಷ್ಣಾ ಬಿ.ಸ್ಕೀಂ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗಳಿಸಲು ಕ್ರಮ ವಹಿಸಿ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸುವುದು. ಹೊಸ 60 ಕೆರೆಗಳಿಗೆ ಕಾಯಕಲ್ಪ, ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ ಸ್ಥಾಪನೆ, ಕೈಗಾರಿಕಾ ಕಾರಿಡಾರ್ ನಿರ್ಮಾಣ, ಸ್ಥಳೀಯವಾಗಿ ಯುವಕರಿಗಾಗಿ ಉದ್ಯೋಗವಕಾಶ, ಕೌಶಲ ತರಬೇತಿಗೆ ಕೇಂದ್ರ, ಗ್ರಾಮೀಣ ಪ್ರದೇಶಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಅವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ರಾಯರಡ್ಡಿ ಚುನಾವಣಾ ಪೂರ್ವ ಪ್ರಚಾರದಲ್ಲಿ ಭರವಸೆ ನೀಡಿದ್ದರು.

ADVERTISEMENT

ಇವುಗಳ ಜೊತೆಗೆ ಕ್ಷೇತ್ರದಲ್ಲಿ ಅಪೂರ್ಣಗೊಂಡ ಕಾಮಗಾರಿಗಳಿಗೆ ಮರುಜೀವ ನೀಡಬೇಕಾಗಿದೆ. ಕೆಲ ಗ್ರಾಮಗಳಲ್ಲಿ ಭೂಮಿಪೂಜೆಗೆ ಸೀಮಿತವಾಗಿರುವ ಸಿಮೆಂಟ್ ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕೆ ಚಾಲನೆ ನೀಡುವುದು, ಅಪೂರ್ಣಗೊಂಡ ಕೆರೆ ತುಂಬಿಸುವ ಯೋಜನೆ ಸಮರ್ಪಕವಾಗಿ ಜಾರಿಗೊಳಿಸುವುದು, ಜಲಜೀವನ್‌ ಮಿಷನ್‌ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಮುತುವರ್ಜಿ ವಹಿಸಬೇಕಾಗಿದೆ.

ಯರಿ ಪ್ರದೇಶದಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆ ಭಾರಿ ಮಳೆಗೆ ಕೊಚ್ಚಿಹೋಗಿರುವ ಸೇತುವೆಗಳ ಮರುನಿರ್ಮಾಣ, ಆಮೆಗತಿಯಲ್ಲಿ ಸಾಗಿರುವ ಕರಮುಡಿ, ಸಂಕನೂರು ಹಾಗೂ ಇನ್ನಿತರ ಸೇತುವೆ ನಿರ್ಮಾಣ ಕಾರ್ಯಗಳನ್ನು ತ್ವರಿತಗೊಳಿಸಬೇಕಿದೆ. ನಿಧಾನಗತಿಯಲ್ಲಿ ಸಾಗಿರುವ ರೈಲ್ವೆ ಕಾಮಗಾರಿ ಹಾಗೂ ಯಲಬುರ್ಗಾ ಪಟ್ಟಣದ ಹೊರವಲಯದಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ ರೈಲುನಿಲ್ದಾಣ ಕಾರ್ಯಕ್ಕೆ ಚಾಲನೆ ದೊರೆಯಬೇಕಾಗಿದೆ. 

ಜನರ ಒತ್ತಾಸೆಯಾದ ಎಪಿಎಂಸಿ ನಿರ್ಮಾಣ, ಬೇವೂರು ಪ್ರದೇಶಕ್ಕೆ ಹೋಬಳಿ ಸ್ಥಾನಮಾನ, ರಾತ್ರಿ ವೇಳೆ ಸಮರ್ಪಕ ಸಾರಿಗೆ ಸೌಲಭ್ಯ, ಕಾಯಕಲ್ಪಕ್ಕೆ ಕಾಯ್ದಿರುವ ವಿವಿಧ ಪ್ರಮುಖ ಊರುಗಳಲ್ಲಿರುವ ಬಸ್ ನಿಲ್ದಾಣಗಳು, ಹೊಸ ತಾಲ್ಲೂಕು ಕೇಂದ್ರ ಕುಕನೂರಿನಲ್ಲಿ ವಿವಿಧ ಇಲಾಖೆಗಳ ಕಚೇರಿ ಸ್ಥಾಪನೆ, ಅಸಮತೋಲನ ನಿವಾರಣೆಗೆ ಯಲಬುರ್ಗಾ ತಾಲ್ಲೂಕು ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕಾಗಿದೆ.

ರಾಜಕಾರಣ ಮತ್ತು ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ರಾಯರಡ್ಡಿ ಅವರಿಗೆ ಸಚಿವ ಸ್ಥಾನ ಸಿಗದಿದ್ದರೂ ಮುಖ್ಯಮಂತ್ರಿ ಜೊತೆ ಹೊಂದಿರುವ ಆಪ್ತ ಬಾಂಧವ್ಯದ ಲಾಭ ಪಡೆದುಕೊಂಡು ಸಾಕಷ್ಟು ಅನುದಾನ ತಂದು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯವ ಜವಾಬ್ದಾರಿಯಿದೆ.

ಕುಕನೂರು ತಾಲ್ಲೂಕು ಕೇಂದ್ರವಾಗಿ ಐದು ವರ್ಷಗಳಾದರೂ ಕಂಡಿಲ್ಲ ಅಭಿವೃದ್ಧಿಯ ಭಾಗ್ಯ
ಶಶಿಧರ ಎಚ್.
ಈಶ್ವರ ಅಟಮಾಳಗಿ
ಸುಜಾತಾ ಗೊರ್ಲೆಕೊಪ್ಪ
ಬಸವರಾಜ ಪೂಜಾರ
ಬಸವರಾಜ ರಾಯರಡ್ಡಿ

ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಒತ್ತಾಯಿಸಬೇಕು ಕೆರೆಗಳ ಅಭಿವೃದ್ಧಿ ಜೊತೆಗೆ ನೀರು ತುಂಬಿಸುವ ಯೋಜನೆಯನ್ನು ವಿಸ್ತರಿಸುವುದು. ಗ್ರಾಮೀಣ ಆರೋಗ್ಯ ಸುಧಾರಣೆಗೆ ಸೂಪರ್‌ ಸ್ಟೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು. ಯಲಬುರ್ಗಾ ಕೇಂದ್ರವಾಗಿಟ್ಟುಕೊಂಡು ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಹೊಸ ಕಟ್ಟಡ ಸ್ಥಾಪಿಸಬೇಕು. ಶಶಿಧರ ಎಚ್. ಯಲಬುರ್ಗಾ

ಗ್ರಾಮೀಣ ಪ್ರದೇಶದ ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವ ನಿಟ್ಟಿನಿಲ್ಲಿ ಕೌಶಲ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ಯಲಬುರ್ಗಾ ವ್ಯಾಪ್ತಿಯಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪಿಸುವುದು ಗ್ರಾಮೀಣ ಸಾರಿಗೆ ವ್ಯವಸ್ಥೆ ಸುಧಾರಿಸಬೇಕಾದ ಅಗತ್ಯವಿದೆ. ಈಶ್ವರ ಅಟಮಾಳಗಿ ಚಿಕ್ಕಮ್ಯಾಗೇರಿ

ಕುಕನೂರು ತಾಲ್ಲೂಕಿನಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಕಾಮಗಾರಿ ಕಳಪೆಯಾಗಿದ್ದು ಅದನ್ನು ಪರಿಹರಿಸಬೇಕಾಗಿದೆ. ಪಟ್ಟಣದಲ್ಲಿನ ಹೈಟೆಕ್ ಶೌಚಾಲಯ ಸ್ಥಗಿತಗೊಂಡಿದ್ದು ಪುನರ್‌ ಆರಂಭಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು. ಸುಜಾತಾ ಗೊರ್ಲೆಕೊಪ್ಪ ಪಟ್ಟಣದ ನಿವಾಸಿ

ಕುಕನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಏಕಸ್‌ನಂಥ ದೊಡ್ಡ ಕೈಗಾರಿಕಾ ಸಂಸ್ಥೆ ಇದ್ದು ಅಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಬೇಕು. ತಾಲ್ಲೂಕಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಕ್ಷೇತ್ರದಾದ್ಯಂತ ಒಳಚರಂಡಿ ವ್ಯವಸ್ಥೆ ನಿರ್ಮಾಣ ಮಾಡಬೇಕಾಗಿದೆ. ಬಸವರಾಜ ಪೂಜಾರ ಕುಕನೂರು

ನಾನು ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿಯೂ ಅನೇಕ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಈಗಲೂ ಹಾಗೆಯೇ ಕೆಲಸ ಮಾಡುವೆ. 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಆದ್ಯತೆ ಮೇರೆಗೆ ಮಾಡುವೆ. ಕ್ಷೇತ್ರದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಬಸವರಾಜ ರಾಯರಡ್ಡಿ ಶಾಸಕ

ಹೊಸ ತಾಲ್ಲೂಕಿಗೆ ಬೇಕಿದೆ ಸೌಲಭ್ಯಗಳು ಮಂಜುನಾಥ ಎಸ್‌. ಅಂಗಡಿ ಕುಕನೂರು: ಚುನಾವಣೆಯಲ್ಲಿ ಗೆದ್ದರೆ ಸಾವಿರಾರು ಕೋಟಿ ರೂಪಾಯಿ ಅನುದಾನದ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವೆ ಎಂದು ಭರವಸೆ ನೀಡಿದ್ದ ಬಸವರಾಜ ರಾಯರಡ್ಡಿ ಅವರಿಗೆ ಐದು ವರ್ಷಗಳ ಹಿಂದೆ ನಿರ್ಮಾಣವಾದ ಅನುಷ್ಠಾನಕ್ಕೆ ಬಂದ ಕುಕನೂರು ಹೊಸ ತಾಲ್ಲೂಕುಗಳಿಗೆ ಹೊಸ ಕಚೇರಿಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾದ ಸವಾಲು ಇದೆ. ಕೌಶಲ ತರಬೇತಿ ಕೇಂದ್ರ ವಸತಿ ಪದವಿ ಕಾಲೇಜು ತಳಕಲ್‌ ಬಳಿ ಇರುವ ಎಂಜಿನಿಯರಿಂಗ್‌ ಕಾಲೇಜಿಗೆ ಸಿಬ್ಬಂದಿ ಹಾಗೂ ಮೂಲಸೌಕರ್ಯ ಸರ್ಕಾರಿ ಕಚೇರಿಗಳಿಗೆ ಹೊಸ ಕಟ್ಟಡಗಳು ಮಿನಿ ವಿಧಾನಸೌಧ ಕಟ್ಟಡ ತಾಲ್ಲೂಕು ಕ್ರೀಡಾಂಗಣ ನಿರ್ಮಾಣವಾಗಬೇಕಾಗಿವೆ. ಬಸ್ ನಿಲ್ದಾಣ ಹಾಗೂ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆಗೆ ಉದ್ಘಾಟನೆಯ ಭಾಗ್ಯ ಸಿಗಬೇಕಾಗಿದೆ. ತಳಕಲ್ ಗ್ರಾಮದದಲ್ಲಿರುವ ಕೌಶಲ ಅಭಿವೃದ್ಧಿ ಕೇಂದ್ರ ರಾಜ್ಯಕ್ಕೆ ಮಾದರಿಯಂತಿದ್ದು ಇದನ್ನು ಪ್ರಸ್ತುತ ದಿನಮಾನಗಳಿಗೆ ಅಗತ್ಯವಾಗಿ ಸಜ್ಜಗೊಳಿಸಬೇಕಾಗಿದೆ. ಯುವಜನತೆಯಲ್ಲಿ ಕೌಶಲ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಬೇಕಾಗಿದೆ. ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿರುವ ಜಿಲ್ಲಾಡಳಿತ ಭವನದ ಮಾದರಿಯಲ್ಲಿಯೇ ತಾಲ್ಲೂಕು ಕೇಂದ್ರದಲ್ಲಿ ಒಂದೇ ಸ್ಥಳದಲ್ಲಿ ಎಲ್ಲಾ ಕಚೇರಿಗಳನ್ನು ಸ್ಥಾಪಿಸಿದರೆ ಸ್ಥಳೀಯ ಆಡಳಿತ ಯಂತ್ರ ಸುಗಮವಾಗಿ ಸಾಗಲು ಮತ್ತು ಜನರಿಗೆ ಅನುಕೂಲವಾಗುತ್ತದೆ. ಹೆರಿಗೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆಯಿದ್ದು ಇದನ್ನು ನೀಗಿಸಬೇಕಿದೆ. ಗ್ರಾಮೀಣ ಮಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒಳಚರಂಡಿ ಸೌಲಭ್ಯ ಉತ್ತಮ ರಸ್ತೆಗಳ ನಿರ್ಮಾಣ ಮಾಡಬೇಕಾದ ಸವಾಲು ಹೊಸ ಶಾಸಕರ ಮುಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.