ADVERTISEMENT

ಕೊಪ್ಪಳ | ವಕೀಲನ ಮೇಲೆ ಹಲ್ಲೆ ಖಂಡಿಸಿ ಜಿಲ್ಲಾ ವಕೀಲರ ಸಂಘದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 9:25 IST
Last Updated 4 ಡಿಸೆಂಬರ್ 2023, 9:25 IST
<div class="paragraphs"><p>ಕೊಪ್ಪಳ&nbsp;ಜಿಲ್ಲಾ ವಕೀಲರ ಸಂಘದ ಸದಸ್ಯರು ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು</p></div>

ಕೊಪ್ಪಳ ಜಿಲ್ಲಾ ವಕೀಲರ ಸಂಘದ ಸದಸ್ಯರು ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು

   

ಪ್ರಜಾವಾಣಿ ಚಿತ್ರ

ಕೊಪ್ಪಳ: ಚಿಕ್ಕಮಗಳೂರಿನ ವಕೀಲ ಪ್ರೀತಮ್‌ ಅವರ ಮೇಲಿನ ಪೊಲೀಸರ ಹಲ್ಲೆ ಖಂಡಿಸಿ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಸದಸ್ಯರು ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ADVERTISEMENT

ನಗರದ ಜಿಲ್ಲಾ ನ್ಯಾಯಾಲಯದ ಆವರಣದಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರು ಬಳಿಕ ವೃತ್ತದಲ್ಲಿ ವಾಹನಗಳನ್ನು ತಡೆದು ನಿಲ್ಲಿಸಿದರು.

ಈ ವೇಳೆ ಮಾತನಾಡಿದ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಪ್ರೀತಂ ಅವರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ವಾಹನ ಚಾಲನೆ ವೇಳೆ ಹೆಲ್ಮೆಟ್‌ ಹಾಕಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ಸಂಚಾರ ಪೊಲೀಸ್‌ ಠಾಣೆಗೆ ಕರೆದೊಯ್ದು, ಕೋಲಿನಿಂದ ಹೊಡೆದು, ಒದ್ದು ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೆ ಅಕ್ರಮವಾಗಿ ಬಂಧನದಲ್ಲಿ ಇರಿಸಿದ್ದಾರೆ. ಈ ಅನ್ಯಾಯ ಎಸಗಿದ ಪೊಲೀಸರ ಮೇಲೆ ತೀವ್ರವಾಗಿ ಕ್ರಮ ಕೈಗೊಳ್ಳಬೇಕು. ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗಬೇಕು. ಆ ಮೂಲಕ ವಕೀಲರಿಗೆ ಮತ್ತು ಅವರ ಕುಟುಂಬಗಳಿಗೆ ಸೂಕ್ತ ರಕ್ಷಣೆ ಸಿಗಬೇಕು. ಅಲ್ಲಿಯವರೆಗೆ ಈ ಹೋರಾಟವನ್ನು ನಿರಂತರವಾಗಿ, ಉಗ್ರವಾಗಿ ನಡೆಸಲಾಗುವುದು.

ಇಂದು ಎಲ್ಲ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಹೋರಾಟದಲ್ಲಿ ಭಾಗವಹಿಸಿದ್ದಾರೆ ಎಂದರು.

ವಕೀಲರ ಸಾಂಕೇತಿಕ ರಸ್ತೆ ತಡೆ ಪ್ರತಿಭಟನೆಯಿಂದಾಗಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು. ಕೆಲ ವಾಹನ ಸವಾರರು ವಕೀಲರೊಂದಿಗೆ ವಾಗ್ವಾದಕ್ಕಿಳಿದಿದ್ದದ್ದು ಕಂಡು ಬಂತು. ಆಂಬುಲೆನ್ಸ್‌ ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಆಂಬುಲೆನ್ಸ್‌ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಕೀಲರಾದ ಆಸೀಫ್‌ ಅಲಿ, ಪೀರಾಹುಸೇನ್‌ ಹೊಸಳ್ಳಿ, ದಿವಾಕರ ಬಾಗಲಕೋಟೆ, ಬಿ.ವಿ ಸಜ್ಜನ್‌, ಎಲ್‌.ಎಚ್‌. ಹಿರೇಗೌಡರ್‌, ಸಿ.ಎಂ.ಪೊಲೀಸ್‌ ಪಾಟೀಲ್‌, ಪುಷ್ಪಾ ಬೇವೂರ್‌, ರಾಕೇಶ್‌ ಪಾನಘಂಟಿ, ನೂರ್‌ ಅಹ್ಮದ್‌ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.