ಕೊಪ್ಪಳ: ಪ್ರತಿವರ್ಷ ಮುಂಗಾರು ಮಳೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ರೈತಾಪಿ ವರ್ಗವು ಈ ವರ್ಷ ಅಕಾಲಿಕವಾಗಿ ಉತ್ತಮವಾಗಿ ಸುರಿದ ಮಳೆಗೆ ಹರ್ಷಚಿತ್ತರಾಗಿದ್ದು, ಬಿತ್ತನೆ ಕಾರ್ಯಕ್ಕೆ ಸಂಪೂರ್ಣ ಸಜ್ಜಾಗಿದ್ದಾರೆ.
ಕೃತ್ತಿಕಾ ಮಳೆ ಹುಚ್ಚೆದ್ದು ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ರೌದ್ರಾವತಾರ ತಾಳಿ ಹಾನಿಗೆ ಕಾರಣವಾದರೂ ಬಿತ್ತನೆಗೆ ಬಹುತೇಕ ಅನುಕೂಲ ಕಲ್ಪಿಸಿದೆ. ಅಕಾಲಿಕ ಮಳೆಯಿಂದ ಆದ ಹಾನಿ ₹ 20 ಕೋಟಿ ಅಂದಾಜಿಸಿದ್ದು, ನಿರಾಶ್ರಿತರಿಗೆ ಶೀಘ್ರ ಪರಿಹಾರ ದೊರೆಯುವಲ್ಲಿ ಜಿಲ್ಲಾಡಳಿತ ಮುತುವರ್ಜಿ ವಹಿಸಿದರೆ ರೈತರ, ಬಡವರ ನಿತ್ಯ ತೊಂದರೆಗೆ ಸಹಾಯವಾದೀತು.
ಈ ಮಧ್ಯೆ, ಜಿಲ್ಲೆಯ ಬಹುತೇಕ ತಾಲ್ಲೂಕು ಮತ್ತು ಹೋಬಳಿಗಳಲ್ಲಿ ಬಿತ್ತನೆ ಪೂರ್ವ ಹಸಿ ಮಳೆಯಾಗಿದೆ. ಹೊಲವನ್ನು ಹರಗಿ, ಸ್ವಚ್ಛಗೊಳಿಸಿಟ್ಟುಕೊಂಡ ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಇದುವರೆಗೆ ಶೇ 10 ರಷ್ಟು ಬಿತ್ತನೆಯಾಗಿದೆ ಎನ್ನಲಾಗುತ್ತದೆ.
ಜೂನ್ ಆರಂಭದಲ್ಲಿ ಮುಂಗಾರು ಮಳೆಗಳು ಸುರಿಯಲಿದ್ದು, ಮಳೆಯ ಬಿಡುವು ನೋಡಿಕೊಂಡು ಜೂನ್ 15ರ ನಂತರ ಬಿತ್ತನೆ ಕಾರ್ಯಕ್ಕೆ ವೇಗ ದೊರೆಯಲಿದೆ. ಆದರೂ ಕೂಡಾ ಅಲ್ಲಲ್ಲಿ ರೈತರು ವರುಣನ ಕೃಪೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದಾರೆ.
ಈ ಭಾಗದಲ್ಲಿ ಮುಂಗಾರು ಋತುವಿನಲ್ಲಿ ಹೆಸರು, ಉದ್ದು, ಮೆಕ್ಕೆಜೋಳ, ಸಜ್ಜೆ, ಹೈಬ್ರಿಡ್ ಜೋಳ, ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇನ್ನೂ ಒಂದು ಉತ್ತಮ ಹಸಿ ಮಳೆಯ ನಿರೀಕ್ಷೆಯಲ್ಲಿದ್ದಾರೆ ಜಿಲ್ಲೆಯ ರೈತರು. ಪ್ರತಿವರ್ಷ ಬೀಜಗೊಬ್ಬರಕ್ಕೆ ಎಡತಾಕುವ ರೈತರು ಈಗ ಅವಧಿ ಮುಂಚೆಯೇ ಸಂಗ್ರಹಿಸುತ್ತಿರುವುದರಿಂದ ಕೊರತೆಯಾಗಬಹುದು ಎಂಬ ಆತಂಕ ಇದೆ.
ಕೃಷಿ ಇಲಾಖೆಯ ಸಿದ್ಧತೆ
ಕೃಷಿ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಹೆಚ್ಚುವರಿ ಬೀಜ, ಗೊಬ್ಬರಗಳನ್ನು ತರಿಸಿಕೊಳ್ಳಬೇಕಾಗಿದೆ. ಇದರಿಂದ ರೈತರಿಗೆ ಅನವಶ್ಯಕ ಗೊಂದಲ, ತೊಂದರೆ ತಪ್ಪುತ್ತದೆ. ದಿನದ ಕೆಲಸ ಬಿಟ್ಟು ರೈತ ಸಂಪರ್ಕ ಕೇಂದ್ರ, ಗೊಬ್ಬರಗಳ ಅಂಗಡಿ ಮುಂದೆ ದಿನವೀಡಿ ಕಾಯುವ ಪ್ರಮೇಯವನ್ನು ತಪ್ಪಿಸಬೇಕಾಗಿದೆ.
ಕೊಪ್ಪಳ ತಾಲ್ಲೂಕಿನಲ್ಲಿ ಮಳೆಯಿಂದ ಹಿರೇಹಳ್ಳ ಪಾತ್ರದ 40 ಹಳ್ಳಿಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದಿದೆ. ಅಲ್ಲದೆ ಈ ಭಾಗದಲ್ಲಿಯೇ ಹೆಚ್ಚು ಹಾನಿಯಾಗಿದೆ. ಗಂಗಾವತಿ, ಕಾರಟಗಿ ಬಹುತೇಕ ನೀರಾವರಿ ಆಶ್ರಿತ ಪ್ರದೇಶಗಳಾಗಿದ್ದು, ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದು, ಮೊದಲ ಬೆಳೆಗೆ ಕೊರತೆಯಾಗಲಿಕ್ಕಿಲ್ಲ ಎನ್ನಲಾಗುತ್ತದೆ. ಅಕಾಲಿಕ ಮಳೆಯಿಂದ ಈ ಭಾಗದಲ್ಲಿ 3 ಸಾವಿರ ಹೆಕ್ಟೇರ್ ಭತ್ತ ನಾಶವಾಗಿದೆ.
ಬಿತ್ತನೆ ಗುರಿ
ಜಿಲ್ಲೆಯಲ್ಲಿ 5 ಲಕ್ಷ ಹೆಕ್ಟೇರ್ ಕೃಷಿ ಯೋಗ್ಯ ಪ್ರದೇಶವಿದ್ದು, 80 ಸಾವಿರ ಹೆಕ್ಟೇರ್ ನೀರಾವರಿ ಇದೆ. ಉಳಿದಂತೆ ಒಣಬೇಸಾಯದ 4 ಲಕ್ಷ ಹೆಕ್ಟೇರ್ ಜಮೀನು ಇದ್ದು, 3.08 ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಗುರಿ ಇದೆ. 10,500 ಕ್ವಿಂಟಲ್ ಬೀಜಗಳ ಅವಶ್ಯಕತೆ ಇದೆ. ಇದಕ್ಕೆ ಬೇಕಾಗುವ 12,800 ಮೆಟ್ರಿಕ್ ಟನ್ ಗೊಬ್ಬರ ಸಂಗ್ರಹವಿದೆ.
ನೀರಾವರಿ ಭಾಗದಲ್ಲಿ ಅವಶ್ಯಕತೆಗಿಂತ ಹೆಚ್ಚುವರಿಯಾಗಿ ಭತ್ತ ಬೆಳೆಯುತ್ತಿರುವುದರಿಂದ ಈ ಭಾಗದಲ್ಲಿ ಗೊಬ್ಬರಕ್ಕೆ ಯಾವಾಗಲೂ ಬೇಡಿಕೆ ಇರುತ್ತದೆ. ಇದಕ್ಕಾಗಿ ಅವರು ದೂರದ ಊರುಗಳಿಂದ ತರಿಸಿಕೊಳ್ಳುವುದು ನಡೆಯುತ್ತದೆ. ಹೀಗಾಗಿ ಬೆಲೆ ಏರಿಕೆ ಬರೆಯನ್ನು ಎದುರಿಸುತ್ತಿದ್ದಾರೆ.
ನಕಲಿ ಬೀಜಗಳ ಎಚ್ಚರಿಕೆ
ರೈತರು ಭೂಮಿತಾಯಿ ನಂಬಿ ಬಿತ್ತಿದ ಬೀಜಗಳು ಮೊಳಕೆ ಒಡೆಯದೆ ನಕಲಿ ಎಂಬುವುದು ತಡವಾಗಿ ಗೊತ್ತಾಗಿ ಕೃಷಿ ಇಲಾಖೆ, ಬೀಜದ ಕಂಪನಿಗಳಿಗೆ ಅಲೆದಾಡುವುದು ವಾರ್ಷಿಕ ಪಡಿಪಾಟಲು ಆಗಿದೆ. ಇದನ್ನು ತಪ್ಪಿಸಬೇಕಾಗಿದೆ. ನಷ್ಟಕ್ಕೆ ಕಾರಣವಾದ ಕಂಪನಿಯಿಂದ ನಷ್ಟ ಭರಿಸಿ ಕೊಡುವುದರ ಜೊತೆಗೆ ಅಂತಹ ಕಂಪನಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ಕ್ರಮವನ್ನು ಪ್ರದರ್ಶಿಬೇಕು. ಇಲ್ಲದಿದ್ದರಿಂದ ರೈತರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.
ಬಿತ್ತನೆ ಪ್ರಮಾಣ
1 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಮೆಕ್ಕೆಜೋಳ, 60 ಸಾವಿರ ಹೆಕ್ಟೇರ್ ಭತ್ತ, 65 ಸಾವಿರ ಹೆಕ್ಟೇರ್ ಸಜ್ಜೆ, 30 ಸಾವಿರ ಹೆಕ್ಟೇರ್ ತೊಗರಿ, 20 ಸಾವಿರ ಹೆಕ್ಟೇರ್ ಹೆಸರು ಬಿತ್ತನೆ ಮಾಡುವ ಗುರಿಯನ್ನು ಹೊಂದಲಾಗಿದೆ.
ಕುಕನೂರು, ಯಲಬುರ್ಗಾ ಹೆಸರು, ಉದ್ದು ಬೆಳೆಗೆ ಪ್ರಸಿದ್ಧಿಯಾದರೆ, ಕುಷ್ಟಗಿ, ಕನಕಗಿರಿ ತಾಲ್ಲೂಕುಗಳು ತೊಗರಿ, ಸಜ್ಜೆ, ಹೈಬ್ರೀಡ್ ಜೋಳ ಬೆಳೆಯುತ್ತಾರೆ. ಕೊಪ್ಪಳ, ಅಳವಂಡಿ, ಗಂಗಾವತಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದ ಮೆಕ್ಕೆ ಜೋಳ ಬೆಳೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.