ADVERTISEMENT

ಕೊಪ್ಪಳ | ಹೆಚ್ಚುತ್ತಿದೆ ಮಾಲಿನ್ಯ ಸಮಸ್ಯೆ; ಜನರಲ್ಲಿ ಡೆಂಗಿ ಭೀತಿ

ನೈರ್ಮಲ್ಯ ವ್ಯವಸ್ಥೆ ಸುಧಾರಣೆಗೆ ಪುರಸಭೆ, ಪಂಚಾಯಿತಿಗಳಿಗೆ ಆರೋಗ್ಯ ಇಲಾಖೆ ತಾಕೀತು

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:14 IST
Last Updated 11 ಜುಲೈ 2024, 15:14 IST
ಕುಷ್ಟಗಿ ಎನ್‌ಜೆ ಕಿಡ್ಸ್‌ ಶಾಲೆ ಬಳಿ ರಸ್ತೆಯಲ್ಲಿ ಮಡುಗಟ್ಟಿರುವ ಕೊಳಚೆ
ಕುಷ್ಟಗಿ ಎನ್‌ಜೆ ಕಿಡ್ಸ್‌ ಶಾಲೆ ಬಳಿ ರಸ್ತೆಯಲ್ಲಿ ಮಡುಗಟ್ಟಿರುವ ಕೊಳಚೆ   

ಕುಷ್ಟಗಿ: ಅನೇಕ ಕಡೆಗಳಲ್ಲಿ ಡೆಂಗಿ ಬಾಧೆ ಉಲ್ಬಣಿಸುತ್ತಿರುವುದು ಮತ್ತು ಪಟ್ಟಣದಲ್ಲಿ ಬಹುತೇಕ ವಾರ್ಡುಗಳಲ್ಲಿ ಮಾಲಿನ್ಯ ಮಡುಗಟ್ಟಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ತಾಲ್ಲೂಕಿನಲ್ಲಿ ಈ ಹಿಂದೆ ವರದಿಯಾಗಿದ್ದ ಹಳೆಯ 7 ಪ್ರಕರಣಗಳ ಪೈಕಿ ಎಲ್ಲರೂ ಚಿಕಿತ್ಸೆ ನಂತರ ಗುಣಮುಖರಾಗಿದ್ದಾರೆ. ಪಟ್ಟಣದಲ್ಲಿ ಈಗ ಒಂದು ಡೆಂಕಿ ಪ್ರಕರಣ ದೃಢಪಟ್ಟಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ರೋಗ ಬಾರದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಿದ್ದು ರಕ್ತ ತಪಾಸಣೆ, ಮನೆ ಮತ್ತಿತರೆ ಕಡೆಗಳಲ್ಲಿ ವಾರದವರೆಗೂ ನೀರಿನ ಸಂಗ್ರಹ ಇರುವುದನ್ನು ಪತ್ತೆ ಮಾಡಿ ಲಾರ್ವಾಗಳು ಹುಟ್ಟಿಕೊಳ್ಳದಂತೆ ಜಾಗೃತಿ ಮೂಡಿಸುವ ಮೂಲಕ ಸೊಳ್ಳೆಗಳ ಮೂಲಕ ಹರಡುವ ಡೆಂಗಿ ಮತ್ತಿತರೆ ಸಾಂಕ್ರಾಮಿಕ ರೋಗಗಳ ಕುರಿತು ತಿಳಿವಳಿಕೆ ಮೂಡಿಸುವ ಕೆಲಸದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮುತುವರ್ಜಿ ವಹಿಸಿದ್ದಾರೆ.

ಆರೋಗ್ಯ ಇಲಾಖೆ ಡೆಂಗಿ ನಿಯಂತ್ರಣಕ್ಕೆ ಮುಂದಾಗಿದ್ದರೂ ಪಟ್ಟಣದಲ್ಲಿ ಮಾಲಿನ್ಯ ಸಮಸ್ಯೆ ಎದುರಾಗಿದೆ. ಈ ವಿಷಯ ಕುರಿತಂತೆ ಗುರುವಾರ ಪುರಸಭೆಗೆ ಪತ್ರ ಬರೆದಿರುವ ತಾಲ್ಲೂಕು ಆರೋಗ್ಯ ಇಲಾಖೆ, ನೈರ್ಮಲ್ಯ ವ್ಯವಸ್ಥೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವುದು, ಸೊಳ್ಳೆನಾಶಕ, ಬ್ಲೀಚಿಂಗ್ ಇತರೆ ರಾಸಾಯನಿಕಗಳನ್ನು ಡೆಂಗಿ ಕಾಣಿಸಿಕೊಂಡಿರುವ ವಾರ್ಡಿನ ಎಲ್ಲ ಮನೆಗಳ ಒಳಗಿನ ಭಾಗದಲ್ಲಿಯೂ ಸಿಂಪಡಣೆ (ಫಾಗಿಂಗ್) ಮಾಡುವಂತೆ ಮುಖ್ಯಾಧಿಕಾರಿಗೆ ಸಲಹೆ ನೀಡಿದೆ.

ADVERTISEMENT

ಆದರೆ ಪಟ್ಟಣದ ಯಾವುದೇ ವಾರ್ಡುಗಳಿಗೆ ಹೋದರೂ ಮಾಲಿನ್ಯ ಕಣ್ಣಿಗೆ ರಾಚುವಂತಿದೆ. ಶಾಲೆ, ಕಾಲೇಜು, ಅಂಗನವಾಡಿ ಕೇಂದ್ರಗಳು, ಸಾರ್ವಜನಿಕ ಸ್ಥಳಗಳು, ಅಷ್ಟೇ ಏಕೆ ಪುರಸಭೆ, ಸಾರ್ವಜನಿಕ ಆಸ್ಪತ್ರೆ ಸುತ್ತಲಿನ ಪ್ರದೇಶದಲ್ಲೇ ಮಾಲಿನ್ಯ ಮಿತಿಮೀರಿದೆ. ಕೊಳಚೆ ಎಲ್ಲೆಂದರಲ್ಲಿ ಮಡುಗಟ್ಟಿದೆ. ಚರಂಡಿಗಳು ಕಸಕಡ್ಡಿಗಳಿಂದ ತುಂಬಿ ತುಳುಕುತ್ತಿದ್ದು ಮಳೆ ಬಂದರೆ ಕೊಳಚೆ ಹೊರಸೂಸುವ ಸಾಧ್ಯತೆ ಇದೆ. ‘ಹೊಲಸು ತುಂಬಿದ್ದರೂ ಅದರ ಮೇಲೆಯೇ ಕಾಟಾಚಾರಕ್ಕೆ ಪುರಸಭೆಯವರು ಫಾಗಿಂಗ್ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋನವಾಗುವುದಿಲ್ಲ’ ಎಂದು ಪಟ್ಟಣದ ನಿವಾಸಿಗಳಾದ ನಾಗರಾಜ. ಪವನಕುಮಾರ ಇತರರು ಅಸಮಾಧಾನ ಹೊರಹಾಕಿದರು.

ಈ ಕುರಿತು ಪುರಸಭೆ ಮತ್ತು ಆರೋಗ್ಯ ಇಲಾಖೆ ಹೇಳುವುದು ಹೀಗೆ, ‘ಜನರೂ ಸಹ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಆದರೆ ಪಟ್ಟಣದಲ್ಲಿ ಅಂತಹ ನಿರೀಕ್ಷೆ ಮಾಡುವುದೇ ತಪ್ಪು ಎನ್ನುವಂತಾಗಿದೆ. ತಿಳಿ ಹೇಳಿದರೂ ವಾರಗಟ್ಟಲೇ ತೆರೆದ ರೀತಿಯಲ್ಲಿ ಸಂಗ್ರಹಿಸಿದ ನೀರನ್ನು ಖಾಲಿ ಮಾಡದೆ ಹಾಗೇ ಉಳಿಸಿಕೊಳ್ಳುತ್ತಿರುವುದು ಆರೋಗ್ಯ ಇಲಾಖೆಯನ್ನು ಪೇಚಿಗೆ ಸಿಲುಕುವಂತೆ ಮಾಡಿದೆ. ಜನರ ಸಹಕಾರ ಇಲ್ಲದ ಹೊರತು ರೋಗಗಳನ್ನು ನಿಯಂತ್ರಿಸುವುದಕ್ಕೆ ಕಷ್ಟವಾಗುತ್ತದೆ’ ಎಂದು ಸಿಬ್ಬಂದಿ ವಿವರಿಸಿದರು.

‘ಪಟ್ಟಣದ ಅನೇಕ ವಾರ್ಡುಗಳಲ್ಲಿ ನೀರು ಸಂಗ್ರಹವಾಗಿದ್ದು ಗುಂಡಿಗಳನ್ನು ಮುಚ್ಚಲು ಪುರಸಭೆ ಕ್ರಮಕೈಗೊಂಡಿಲ್ಲ. ಶಾಲೆ, ಅಂಗನವಾಡಿ, ಜನವಸತಿ ಪ್ರದೇಶಗಳಲ್ಲಿ ರಸ್ತೆಗಳೇ ಚರಂಡಿಗಳಂತಾಗಿವೆ. ಕೊಳಚೆ ನೀರು ಹರಿದುಹೋಗುವುದಕ್ಕೆ ಅವಕಾಶವೇ ಇಲ್ಲ. ಪುರಸಭೆ, ಸಾರ್ವಜನಿಕ ಆಸ್ಪತ್ರೆ ಸುತ್ತಲಿನ ಪ್ರದೇಶದಲ್ಲೇ ಹೊಲಸು ವಿಪರೀತವಾಗಿದೆ. ಪುರಸಭೆ ಕಚೇರಿ ಮತ್ತು ಪ್ರವಾಸಿ ಮಂದಿರದ ನಡುವಿನ ರಸ್ತೆಯಲ್ಲಿ ಬಂದು ಹೋದರೆ ರೋಗ ಹರಡುವಂತಿದೆ. ಪರಿಸ್ಥಿತಿ ಹೀಗಿರುವಾಗ ಜನರ ಆರೋಗ್ಯ ರಕ್ಷಣೆ ಹೇಗೆ ಸಾಧ್ಯ’ ಎಂದು ಜನರು ಪುರಸಭೆ ವಿರುದ್ಧ ಆಕ್ರೋಶ ಹೊರಹಾಕಿದರು.

ಕುಷ್ಟಗಿಯ 19-20ನೇ ವಾರ್ಡಿನ ಡಂಬರ ಓಣಿಯ ಅಂಗನವಾಡಿ ಮುಂದೆ ನೀರು ಸಂಗ್ರಹವಾಗಿರುವುದು

ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಚತೆ ಕೆಲಸದಲ್ಲಿ ಹೆಚ್ಚು ನಿಗಾ ವಹಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗುತ್ತಿದೆ

-ಡಿ.ಎನ್‌.ಧರಣೇಂದ್ರಕುಮಾರ ಪುರಸಭೆ ಮುಖ್ಯಾಧಿಕಾರಿ

ತಾಲ್ಲೂಕಿನಲ್ಲಿ ಡೆಂಗಿ ಸಮಸ್ಯೆ ಉಲ್ಬಣಿಸಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ. ಜ್ವರ ಕಾಣಿಸಿಕೊಂಡರೆ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣದಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ

-ಡಾ.ಆನಂದ ಗೋಟೂರು ತಾಲ್ಲೂಕು ಆರೋಗ್ಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.