ADVERTISEMENT

ಕೊಪ್ಪಳ | ರೋಗಗಳ ತಾಣಗಳಾದ ಉದ್ಯಾನಗಳು: ಕಸದ ರಾಶಿ, ಅವ್ಯವಸ್ಥೆಯ ಹಾವಳಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:24 IST
Last Updated 28 ಅಕ್ಟೋಬರ್ 2024, 4:24 IST
<div class="paragraphs"><p>ಕೊಪ್ಪಳದ ವಾರ್ಡ್‌ ಸಂಖ್ಯೆ 28ರಲ್ಲಿರುವ ಅನ್ನದಾನಯ್ಯ ಪುರಾಣಿಕ ಉದ್ಯಾನದಲ್ಲಿ ಜಾಲಿಕಂಟಿ ಬೆಳೆದಿರುವುದು </p></div>

ಕೊಪ್ಪಳದ ವಾರ್ಡ್‌ ಸಂಖ್ಯೆ 28ರಲ್ಲಿರುವ ಅನ್ನದಾನಯ್ಯ ಪುರಾಣಿಕ ಉದ್ಯಾನದಲ್ಲಿ ಜಾಲಿಕಂಟಿ ಬೆಳೆದಿರುವುದು

   

–ಪ್ರಜಾವಾಣಿ ಚಿತ್ರಗಳು/ ಭರತ್ ಕಂದಕೂರ

ಕೊಪ್ಪಳ: ಎಲ್ಲೆಂದರಲ್ಲಿ ಮುರಿದು ಬಿದ್ದ ಆಟಿಕೆ ಸಾಮಗ್ರಿಗಳು, ವ್ಯಾಯಾಮದ ವಸ್ತುಗಳು, ಜನರ ಆರೋಗ್ಯ ವೃದ್ಧಿಗೆ ವೇದಿಕೆಯಾಗಬೇಕಿದ್ದ ಸ್ಥಳದಲ್ಲಿ ತ್ಯಾಜ್ಯದ ರಾಶಿ, ಒಳಗಡೆಯೂ ಹೋಗಲು ಸಾಧ್ಯವಾಗದ ಸ್ಥಿತಿ, ಜಾಗ ಮೀಸಲಿಟ್ಟರೂ ನಿರ್ಮಾಣವಾಗದ ಉದ್ಯಾನ.

ADVERTISEMENT

ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿರುವ ಬಹುತೇಕ ಉದ್ಯಾನಗಳ ಪರಿಸ್ಥಿತಿ ಇದು. ಹಿರಿಯರು, ಮಕ್ಕಳು, ಮಹಿಳೆಯರು ಹೀಗೆ ಎಲ್ಲ ವಯಸ್ಸಿನ ಜನರಿಗೂ ಉಪಯೋಗವಾಗಬೇಕಿದ್ದ ಆರೋಗ್ಯ ವೃದ್ಧಿಯ ತಾಣಗಳೇ ಈಗ ರೋಗದ ಮೂಲಗಳಾಗುತ್ತಿವೆ. ಹೊಸ ಬಡಾವಣೆಗಳನ್ನು ನಿರ್ಮಿಸಬೇಕಿದ್ದರೆ ನಿಯಮಾವಳಿ ಪ್ರಕಾರ ಕಡ್ಡಾಯವಾಗಿ ಉದ್ಯಾನಕ್ಕೆ ಜಾಗ ಬಿಡಬೇಕು ಎನ್ನುವ ನಿಯಮವಿದೆ. ಆದರೆ ಹಲವು ಕಡೆ ಈ ಆದೇಶವನ್ನು ಉಲ್ಲಂಘಿಸಲಾಗಿದೆ. ಇನ್ನು ಕೆಲವು ಕಡೆ ಉದ್ಯಾನಕ್ಕೆ ಜಾಗ ಬಿಟ್ಟರೂ ಅಭಿವೃದ್ಧಿಯಿಲ್ಲದೇ ಅಲ್ಲಿ ಅನಾರೋಗ್ಯ ತಾಂಡವಾಡುತ್ತಿದೆ.

ಹಿರಿಯ ನಾಗರಿಕರು ತಮ್ಮ ಬದುಕಿನ ಇಳಿಸಂಜೆಯ ದಿನಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ನಿತ್ಯ ವಾಕಿಂಗ್‌ ರೂಢಿಸಿಕೊಂಡಿರುತ್ತಾರೆ. ಓಡುವ ಇಂದಿನ ಜೀವನ ಶೈಲಿಯಲ್ಲಿ ಬಹಳಷ್ಟು ಯುವಜನೆತೆಗೆ ಸಣ್ಣ ವಯಸ್ಸಿನಲ್ಲಿ ಬಿ.ಪಿ. ಮಧುಮೇಹ, ಬೊಜ್ಜು ಹೀಗೆ ಅನೇಕ ಸಮಸ್ಯೆಗಳು ಕಾಡುತ್ತಿವೆ. ಇವುಗಳ ಹತೋಟಿಗೆ ಕಡ್ಡಾಯವಾಗಿ ವಾಕಿಂಗ್‌ ಮಾಡಿ ಎಂದು ಫಿಟ್‌ನೆಸ್‌ ತಜ್ಞರು, ವೈದ್ಯರು ಸೂಚಿಸುತ್ತಾರೆ. ಹಿರಿಯರಿಗೆ ತಮ್ಮ ಮನೆಯಿಂದ ದೂರ ಹೋಗಲು ಸಾಧ್ಯವಾಗುವುದಿಲ್ಲ. ತಮ್ಮ ಬಡಾವಣೆಗಳಲ್ಲಿ ಉದ್ಯಾನ ಎಂದು ಇರುವ ಸ್ಥಳದಲ್ಲಿ ಹೋಗಬೇಕೆಂದರೆ ಅಲ್ಲಿ ಉದ್ಯಾನವೇ ನಿರ್ಮಾಣವಾಗಿರುವುದಿಲ್ಲ.

ಹೀಗಾಗಿ ಕೊಪ್ಪಳದ ಜನ ವಾಯುವಿಹಾರ ಹಾಗೂ ಸಂಜೆಯ ಸಮಯ ಖುಷಿಯಾಗಿ ಕಳೆಯಲು ಜಿಲ್ಲಾ ಕ್ರೀಡಾಂಗಣ, ತಾವು ವಾಸವಿರುವ ಬಡಾವಣೆಯ ರಸ್ತೆ, ಊರ ಹೊರಗಿನ ಜಾಗ, ಮಳೆ ಮಲ್ಲೇಶ್ವರ ಬೆಟ್ಟ, ಗವಿಮಠದ ಆವರಣ ಹೀಗೆ ಕೆಲವು ನಿರ್ದಿಷ್ಟ ಜಾಗಗಳನ್ನು ಅವಲಂಬಿಸಬೇಕಾಗಿದೆ. ಅನೇಕ ಬಡಾವಣೆಗಳಲ್ಲಿರುವ ಉದ್ಯಾನದ ಜಾಗಗಳನ್ನು ಅಭಿವೃದ್ಧಿ ಮಾಡಿದರೆ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆಯಲ್ಲದೇ, ಬಡಾವಣೆ ಸೌಂದರ್ಯವೂ ಹೆಚ್ಚಾಗುತ್ತದೆ.

ಇಲ್ಲಿನ ಪದಕಿ ಲೇಔಟ್‌, ಯಶೋಧ ಆಸ್ಪತ್ರೆ ಬಳಿಯ ವಾರ್ಡ್‌ ನಂಬರ್‌ 25ರಲ್ಲಿನ ಅನ್ನದಾನಯ್ಯ ಪುರಾಣಿಕ ಉದ್ಯಾನ, ಗವಿಶ್ರೀ ನಗರದಲ್ಲಿನ ರೇಣುಕಾಚಾರ್ಯ ಉದ್ಯಾನ, ಗಣೇಶ ನಗರದಲ್ಲಿ ಕೆಎಚ್‌ಬಿ ಕಾಲೊನಿಯ ಬುದ್ಧ ಪಾರ್ಕ್‌ನ ಜಾಗ ಹೀಗೆ ಪ್ರಮುಖ ಜಾಗಗಳಲ್ಲಿ ಉದ್ಯಾನಗಳಿದ್ದರೂ ಸೌಲಭ್ಯಗಳಿಲ್ಲ.

ಗುಡ್ಡಕ್ಕೆ ಸಮೀಪದಲ್ಲಿರುವ ಪದಕಿ ಲೇಔಟ್‌ನ ಉದ್ಯಾನದಲ್ಲಿ ಮುಳ್ಳಿನ ಕಂಟಿಗಳು ಬೆಳೆದಿವೆ. ಆಟಿಕೆ ಸಾಮಗ್ರಿಗಳು ದಿಕ್ಕಾಪಾಲಾಗಿ ಬಿದ್ದಿವೆ. ಗೇಟ್‌ ಮುರಿದು ಹೋಗಿದ್ದು ಒಳಗಡೆ ಹೋಗಲು ಸಾಧ್ಯವಾಗದ ಸ್ಥಿತಿಯಿದೆ. ಇನ್ನು ಆಟವಾಡಲು, ವಾಯುವಿಹಾರಕ್ಕೆ ಹೋಗುವದಂತೂ ದೂರದ ಮಾತು ಎನ್ನುತ್ತಾರೆ ಸ್ಥಳೀಯರು. ರೇಣುಕಾಚಾರ್ಯ ಉದ್ಯಾನದಲ್ಲಿ ವ್ಯಾಯಾಮ ಮಾಡುವ ಮತ್ತು ಆಟವಾಡುವ ಸಾಮಗ್ರಿಗಳು ಮುರಿದು ಬಿದ್ದಿವೆ. ಕೆಎಚ್‌ಬಿ ಕಾಲೊನಿಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟು ಜಾಗ ಎಂದು ಫಲಕ ಹಾಕಲಾಗಿದ್ದರೂ ಅಲ್ಲಿ ಜಾಲಿಮುಳ್ಳು ಬೆಳೆದು ನೀರು ನಿಂತುಕೊಂಡಿವೆ.

ಈ ಉದ್ಯಾನಗಳ ಸೌಂದರ್ಯ ನಿರ್ವಹಣೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕಿದ್ದ ಸ್ಥಳೀಯ ನಗರಸಭೆ ನಿರ್ಲಕ್ಷ್ಯ ವಹಿಸುತ್ತಿದ್ದು ಚರಂಡಿ ಸ್ವಚ್ಛತೆ, ಕಸ ವಿಲೇವಾರಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಇವುಗಳ ಜೊತೆಗೆ ನಗರದ ಸೌಂದರ್ಯೀಕರಣಕ್ಕೆ ಉದ್ಯಾನಗಳ ಅಭಿವೃದ್ಧಿಗೆ ಒತ್ತು ಕೊಡುವ ಅಗತ್ಯವಿದೆ. ಆಗ ನಗರದ ಸೌಂದರ್ಯವೂ ಸುಧಾರಿಸುತ್ತದೆ.

ಹಿರಿಯ ನಾಗರಿಕರಿಗೆ ವಾಯುವಿಹಾರಕ್ಕೆ ಪಾರ್ಕ್‌ಗಳ ಅಗತ್ಯ ಇವೆ. ಈಗಾಗಲೇ ಇರುವ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ
ಎಸ್‌.ಎಂ. ಕಂಬಾಳಿಮಠ ಹಿರಿಯ ನಾಗರಿಕರು
ರೋಗ್ಯ ವೃದ್ಧಿಗಾಗಿ ಉದ್ಯಾನಗಳಿಗೆ ಹೋಗುತ್ತೇವೆ. ಆದರೆ ಕೊಪ್ಪಳದಲ್ಲಿರುವ ಉದ್ಯಾನಗಳು ಅಸ್ವಚ್ಚತೆ ತಾಂಡಗಳಾಗಿವೆ. ಅವುಗಳನ್ನು ತ್ವರಿತವಾಗಿ ಅಭಿವೃದ್ಧಿ ಮಾಡಿದರೆ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಸಾಧ್ಯ
ಶೈಲಜಾ ಎಸ್‌.ಎಸ್‌. ಪದಕಿ ಲೇಔಟ್‌ ಕೊಪ್ಪಳ

‘ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ’

ಕೊಪ್ಪಳದಲ್ಲಿ ಹಿಂದೆ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದ್ದರೂ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದೆ. ಅವುಗಳ ಪುನರ್‌ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ನಮ್ಮ ಸುತ್ತಮುತ್ತಲು ಇರುವ ಖಾಸಗಿ ಕಂಪನಿಗಳ ಜೊತೆ ಮಾತುಕತೆಯೂ ಆಗಿದೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್‌ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂಎಸ್‌ಪಿಎಲ್‌ ಕಂಪನಿ ಜೊತೆ ಈಗಾಗಲೇ ಮಾತುಕತೆಯಾಗಿದ್ದು ಮೊದಲ ಹಂತದಲ್ಲಿ ಈಶ್ವರ್‌ ಪಾರ್ಕ್‌ ಮಾದರಿ ಉದ್ಯಾನವಾಗಿ ರೂಪಿಸಲಾಗುತ್ತದೆ. ಮುಂದೆ ಇನ್ನಷ್ಟು ಕಂಪನಿಗಳ ಜೊತೆ ಸಮಾಲೋಚಿಸಿ ಉದ್ಯಾನ ಅಭಿವೃದ್ಧಿಪಡಿಸಲಾಗುವುದು. ಆಯಾ ಉದ್ಯಾನಗಳಲ್ಲಿ ಓಪನ್‌ ಜಿಮ್‌ ಬಗ್ಗೆಯೂ ಚರ್ಚಿಸಲಾಗಿದೆ’ ಎಂದು ಹೇಳಿದರು.

ಗಮನ ಸೆಳೆಯುವ ಓಪನ್‌ ಜಿಮ್‌

ಕೊಪ್ಪಳದಲ್ಲಿ ಉದ್ಯಾನಗಳ ನಿರ್ವಹಣೆ ಕೊರತೆ ನಡುವೆಯೂ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಓಪನ್‌ ಜಿಮ್‌ ಜನರ ಗಮನ ಸೆಳೆಯುತ್ತಿದೆ. ಅಲ್ಲಿ ನಿತ್ಯ ವ್ಯಾಯಾಮಕ್ಕೆ ಮತ್ತು ಆಟಿಕೆಗೆ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಸುತ್ತಲೂ ಹಲವು ಬಡಾವಣೆಗಳು ಇರುವ ಕಾರಣ ಸದಾ ಜನಿನಿಬಿಡ ಪ್ರದೇಶವೂ ಆಗಿರುವುದರಿಂದ ಜನ ಇದನ್ನು ಬಳಕೆ ಮಾಡುತ್ತಾರೆ.

ಓಪನ್‌ ಜಿಮ್‌ನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಬೇಕಾಗುವ ವ್ಯಾಯಾಮ ಪರಿಕರಗಳು ಇವೆ. ಅದೇ ರೀತಿ ಜಿಲ್ಲಾ ಕೇಂದ್ರದಲ್ಲಿರುವ ಉದ್ಯಾನಗಳಲ್ಲಿಯೂ ವ್ಯಾಯಾಮ ಸಾಮಗ್ರಿ ಅಳವಡಿಸಿದರೆ ಯುವಜನತೆಗೂ ಅನುಕೂಲವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.