ADVERTISEMENT

ಸುಧಾರಣೆ ಕಾಣದ ಜಿಲ್ಲೆಯ ಸರ್ಕಾರಿ ಶಾಲೆಗಳು

ಮಕ್ಕಳ ಹಾಜರಾತಿ ಹೆಚ್ಚಿದ್ದರೂ ಮೂಲಸೌಕರ್ಯ ಕೊರತೆ; ಶಾಲಾ ಆವರಣದಲ್ಲಿ ನಿಲ್ಲುವ ಮಳೆ ನೀರು

ಸಿದ್ದನಗೌಡ ಪಾಟೀಲ
Published 23 ಮೇ 2022, 4:21 IST
Last Updated 23 ಮೇ 2022, 4:21 IST
ಕೊಪ್ಪಳದ ಸರ್ದಾರ ಗಲ್ಲಿ ಸರ್ಕಾರಿ ಶಾಲೆ
ಕೊಪ್ಪಳದ ಸರ್ದಾರ ಗಲ್ಲಿ ಸರ್ಕಾರಿ ಶಾಲೆ   

ಕೊಪ್ಪಳ: ಪ್ರತಿವರ್ಷ ಸರ್ಕಾರ, ಶಿಕ್ಷಣ ಇಲಾಖೆ, ಖನಿಜ ನಿಧಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನವಿದ್ದರೂ ಗುಣಮಟ್ಟದ ಕಟ್ಟಡ, ಆಟದ ಮೈದಾನ, ಶುದ್ಧ ಕುಡಿಯುವ ನೀರು ಇಲ್ಲ. ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿಗತಿ ನೋಡಿದಾಗ, ಶಿಕ್ಷಣ ಕ್ಷೇತ್ರವು ನಿರ್ಲಕ್ಷ್ಯಕ್ಕೆ ಒಳಗಾಗಿರುವುದನ್ನು ಗಮನಿಸಬಹುದು.

ಮಕ್ಕಳ ಮನೋವಿಕಾಸ ಮತ್ತು ಜೀವನ ಭದ್ರತೆಗೆ ಮೊದಲ ಪಾಠಶಾಲೆ ಎನಿಸಿಕೊಳ್ಳುವ ಸರ್ಕಾರಿ ಶಾಲೆಗಳು ದುಃಸ್ಥಿತಿಯಲ್ಲಿವೆ. ಮಾಸಿದ ಬಣ್ಣ, ಬಿರುಕು ಬಿಟ್ಟ ಕಟ್ಟಡ, ಛಾವಣಿ ಹಾರಿಹೋದ ಕೊಠಡಿ, ಮಳೆ ಬಂದರೆ ಶಾಲಾ ಆವರಣಗಳಲ್ಲಿ ನೀರು ನಿಂತುಕೊಂಡು ಕೆರೆಯಂತಾಗುವ ದೃಶ್ಯ ಎಲ್ಲೆಡೆ ಕಂಡು ಬರುತ್ತದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹ 60 ಕೋಟಿ ಖರ್ಚು ಮಾಡಿದರೂ ಮಾದರಿ ಶಾಲೆ ನಿರ್ಮಾಣವಾಗಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲ ಶೌಚಾಲಯಗಳನ್ನು ಇತ್ತೀಚೆಗೆ ನಿರ್ಮಿಸಿದ್ದು ಬಿಟ್ಟರೆ, ಶಾಲೆಗಳ ಶೌಚಾಲಯ ಬಳಕೆ ಅಷ್ಟೊಂದು ಇಲ್ಲ. ಮುಖ್ಯವಾಗಿ ನೀರು ಮತ್ತು ಸ್ವಚ್ಛತೆ ಸಮಸ್ಯೆ ಇರುವುದರಿಂದ ಬಯಲನ್ನೇ ಆಶ್ರಯಿಸಬೇಕಾಗಿದೆ.

ADVERTISEMENT

ನಗರ ಪ್ರದೇಶಗಳ ಶಾಲೆಗಳು: ಕೊಪ್ಪಳ, ಗಂಗಾವತಿ ನಗರದಲ್ಲಿ ಇರುವ ಕೆಲವು ಶಾಲೆಗಳು ಶತಮಾನ ಪೂರೈಸಿವೆ. ಕೆಲವು ಅರ್ಧ ಶತಕ ಕಂಡರೂ ದುರಸ್ತಿಗೊಂಡಿಲ್ಲ. ಕೆಲವು ಶಾಲೆಗಳು ಕಿಷ್ಟಿಂಧೆಯಂತಹ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಮಲಮೂರ್ತ ವಿಸರ್ಜನೆಯ ಕೇಂದ್ರಗಳಾಗಿವೆ. ಉರ್ದು ಶಾಲೆಗಳ ದುಸ್ಥಿತಿಯಂತೂ ಹೇಳತೀರದು. ಬೇಸಿಗೆ ರಜೆಯಲ್ಲಿ ಮದುವೆಗೆ ಛತ್ರಗಳಂತೆ, ರಾಶಿ ಒಣ ಹಾಕಲು ಕಣಗಳಂತೆ ಮಾರ್ಪಾಡಾಗುತ್ತಿವೆ.

ಅಲ್ಲದೆ ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ಎಷ್ಟು ನಿರ್ಲಕ್ಷ್ಯ ವಹಿಸಿದೆಯೋ ಅಷ್ಟೆ ನಿರ್ಲಕ್ಷ್ಯವನ್ನು ಶಾಲೆಯ ಸುತ್ತಮುತ್ತಲಿನ ನಿವಾಸಿಗಳು ಹೊಂದಿದ್ದಾರೆ. ಕಿಟಕಿ, ಗೇಟ್‌, ಚೊಂಬು ಬಕೆಟ್ ಬಿಡದೇ ಎತ್ತಿಕೊಂಡು ಹೋಗುವ ಪರಿಣಾಮ ಶಾಲೆಗಳು ಹಾಳು ಸುರಿಯುತ್ತಿವೆ. ಕೆಲವು ಶಾಲೆ ಮೈದಾನಗಳು ಅಕ್ರಮ ಚಟುವಟಿಕೆಗೆ ತಾಣವಾಗಿವೆ.

ಗ್ರಾಮೀಣ ಪ್ರದೇಶದ ಶಾಲೆಗಳು: ನಗರದ ಮತ್ತು ತಾಲ್ಲೂಕು ಕೇಂದ್ರದ ಬಿಇಒ ಕಚೇರಿಯ ಕೂಗಳತೆಯ ದೂರದಲ್ಲಿ ಇರುವ ಶಾಲೆಗಳೇ ದುಃಸ್ಥಿತಿಯಲ್ಲಿ ಇದ್ದರೆ, ಇನ್ನೂ ಗ್ರಾಮೀಣ ಭಾಗದ ಶಾಲೆಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತೆ ಆಗಿದೆ. ಆಗೊಮ್ಮೆ, ಈಗೊಮ್ಮೆ ಬರುವ ಬಸ್ಸಿಗೆ ಕಾದು ಬರುವ ಶಿಕ್ಷಕರು, ಮಕ್ಕಳು ಬಂದರೂ ಬಿಟ್ಟರೂ ನಡೆಯುವ ಶಾಲೆಗಳು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಯಾಂತ್ರಿಕವಾಗಿ ನಡೆದರೆ ಆ ದಿನ ಕಳೆದುಹೋದಂತೆ.

ಅಳವಂಡಿ, ಘಟರಡ್ಡಿಹಾಳ, ರಘುನಾಥನಹಳ್ಳಿಗಳ ಶಾಲೆಗಳು ಇನ್ನೂ ದುಃಸ್ಥಿತಿಯಲ್ಲಿ ಇವೆ. ಬೋಧನಾ ಕೊಠಡಿಯ ಕಪ್ಪು ಹಲಗೆ, ಉದುರುತ್ತಿರುವ ಛಾವಣಿ ಸಿಮೆಂಟ್, ಅಡುಗೆ ಕೊಠಡಿ ಹಾಳಾಗಿವೆ. ಗಡಿಭಾಗ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ 1ರಿಂದ 8ನೇ ತರಗತಿಯವರೆಗೆ ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಸದರಿ ಶಾಲೆಯಲ್ಲಿ 7 ಕಲಿಕಾ ಕೊಠಡಿಗಳಿವೆ. 3 ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. 2 ಕೊಠಡಿಗಳ ಛಾವಣಿಗೆ ಹಾನಿಯಾಗಿದೆ. ಇನ್ನು 2 ಕೊಠಡಿಗಳು ಮಾತ್ರ ಕಲಿಕೆಗೆ ಯೋಗ್ಯವಾಗಿವೆ. ಇಂತಹ ಎಲ್ಲ ಪರಿಸ್ಥಿತಿಗಳು ಇದ್ದು, ಮಕ್ಕಳನ್ನು ಕೂರಿಸಿ ಪಾಠ ಮಾಡಲು ಭಯವಾಗುತ್ತದೆ ಎನ್ನುತ್ತಾರೆ ಶಿಕ್ಷಕರು.

ಶಾಲೆಯ ಬಿಸಿಯೂಟದ ಕೊಠಡಿ ಶಿಥಿಲಗೊಂಡಿದ್ದು, ಯಾವ ಸಮಯದಲ್ಲಿ ಕುಸಿತು ಬೀಳುತ್ತದೆ ಎಂಬ ಭಯ ಶಾಲಾ ಸಿಬ್ಬಂದಿ ಹಾಗೂ ಅಡುಗೆದಾರರಿಗೆ ಕಾಡುತ್ತಿದೆ. ಶೌಚಾಲಯಗಳು ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಗಂಡು ಹಾಗೂ ಹೆಣ್ಣು ಮಕ್ಕಳು ಪ್ರತ್ಯೇಕವಾಗಿ ನಿರ್ಮಾಣವಾಗಬೇಕಾಗಿದೆ. ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ.

ಆದರೆ ಕೆಲ ದಿನಗಳ ಹಿಂದೆ ಕೊಪ್ಪಳದ ಸಮಾನ ಮನಸ್ಕ ಶಿಕ್ಷಕರ ಕಲರವ ತಂಡ ತಮ್ಮ ಸ್ವಂತ ಹಣದಿಂದ ಶಾಲೆಗೆ ಸುಣ್ಣ ಬಣ್ಣ ಮಾಡಿ ಶಾಲೆಯ ರಂಗು ಹೆಚ್ಚಿಸಿದ್ದಾರೆ.ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ ಶೌಚಾಲಯ ಬಿದ್ದು ನಿರುಪಯುಕ್ತವಾಗಿದೆ.

ಕುಷ್ಟಗಿ ತಾಲ್ಲೂಕಿನ ಹನುಮಸಾಗರ, ಹನಮನಹಳ್ಳಿ, ತಾವರಗೇರಾ ಹೋಬಳಿಗಳಲ್ಲಿ ಸ್ಥಿತಿ ಭಿನ್ನವಾಗಿಲ್ಲ. ಹೈಟೆಕ್ ಶಾಲೆ ನಿರ್ಮಿಸುವ ಬದಲು ಒಂದೊಂದೇ ಕೊಠಡಿ ಕಳಪೆ ಕಾಮಗಾರಿ ಮಾಡಿ ನಿರ್ಮಿಸಿ ಉದ್ಘಾಟನೆಗೆ ಪ್ರಚಾರ ತೆಗೆದುಕೊಂಡಿದ್ದರುವುದನ್ನು ಬಿಟ್ಟರೆ ಹೆಚ್ಚಿನ ನಿಗಾ ವಹಿಸದೇ ಇರುವ ಪರಿಣಾಮ ವರ್ಷದಲ್ಲಿಯೇ ಕಟ್ಟಡ ಬಿರುಕು ಬಿಟ್ಟು ವ್ಯವಸ್ಥೆಯನ್ನು ಅಣಕಿಸುವಂತೆ
ಮಾಡಿದೆ.

ನೀರಾವರಿ ಪ್ರದೇಶದ ಶಾಲೆಗಳು: ಗಂಗಾವತಿ, ಕಾರಟಗಿ ಭಾಗದ ಶಾಲೆಗಳ ಸಮಸ್ಯೆ ಇನ್ನೊಂದು ಬಗೆಯದು. ಖಾಸಗಿ ಶಾಲೆಗೆ ಕಳುಹಿಸುವ ಈ ಭಾಗದ ಪಾಲಕರು. ಸರ್ಕಾರಿ ಶಾಲೆಗಳು ಬಡ ಮಕ್ಕಳಿಗೆ ಮಾತ್ರ ಮೀಸಲಾಗಿವೆ. ಭತ್ತದ ಗದ್ದೆಯಿಂದ ಕೆಲವು ಶಾಲೆಗಳಿಗೆ ಹೋಗಲು ದಾರಿ ಇಲ್ಲದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೂ ಇದ್ದು, ಅತಿಥಿ ಶಿಕ್ಷಕರ ಮೇಲೆ ಶಾಲೆಗಳು ನಡೆಯುತ್ತಿವೆ.

53 ಕಟ್ಟಡ ಬಹುತೇಕ ಶಿಥಿಲ: ಜಿಲ್ಲೆಯ 53 ಸರ್ಕಾರಿ ಶಾಲೆಗಳ ಕಟ್ಟಡಗಳು ಹಳೆಯದಾಗಿದ್ದು, ಬಹುತೇಕ ಕುಸಿದಿವೆ. ಈ ಕಟ್ಟಡಗಳ ದುರಸ್ತಿಗೆ ಕಲ್ಯಾಣ ಕರ್ನಾಟಕ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. 150 ಶಾಲೆಗಳ ಕಟ್ಟಡ ಛಾವಣಿ ಅಪಾಯದ ಮಟ್ಟದಲ್ಲಿ ಇದ್ದು, ಅವುಗಳನ್ನು ತೆರವುಗೊಳಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಈಚೆಗೆ ಸುರಿದ ಮಳೆಗೆ 24 ಶಾಲಾ ಕೊಠಡಿಗಳು, 100ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. ಮಂಡಳಿಯ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಕಟ್ಟಡಗಳ ಸಮಸ್ಯೆ ಇರುವುದಿಲ್ಲ ಎಂಬುವುದು ಶಿಕ್ಷಣ ತಜ್ಞರ ಕಾಳಜಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.